ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ವಿದ್ಯಾರ್ಥಿಗಳು ಪಠ್ಯ ವಿಷಯಗಳತ್ತ ಗಮನ ಹರಿಸಬೇಕೇ ವಿನಃ ಮೊಬೈಲ್ ಬಳಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಮಯವನ್ನು ವ್ಯರ್ಥಮಾಡಿದರೆ ಭವಿಷ್ಯದಲ್ಲಿ ಅಪಾರ ದಂಡ ತೆತ್ತಬೇಕಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ ನಗರದ ಲಂಬಾಣಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸುಜ್ಞಾನನಿಧಿ ಶಿಷ್ಯವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳವು ಕೇವಲ ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಿಲ್ಲ. ಅದು ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆಯಂತ ಎಲ್ಲ ಕ್ಷೇತ್ರಗಳಲ್ಲೂ ಸಮಾನ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಸಾವಿರಾರು ಯುವಕರ ಭವಿಷ್ಯವನ್ನು ರೂಪಿಸುತ್ತಿದೆ ಎಂದು ವಿವರಿಸಿದರು.
ಧರ್ಮಸ್ಥಳ ಗ್ರಾಮ ಯೋಜನೆಯ ಹಾಸನ ಜಿಲ್ಲಾ ನಿರ್ದೇಶಕ ಸುರೇಶ್ ಮೈಲಿ ಮಾತನಾಡಿ, ಈ ಯೋಜನೆಯ ಮೂಲಕ 106 ಮಂದಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಲಭಿಸುತ್ತಿದೆ. ವಿದ್ಯಾರ್ಥಿಗಳ ಅಂಕಗಳ ಆಧಾರದ ಮೇಲೆ ಮಾತ್ರವಲ್ಲದೆ, ಅವರ ಪೋಷಕರು ಧರ್ಮಸ್ಥಳದ ಸದಸ್ಯರಾಗಿದ್ದರೆ ವಿದ್ಯಾರ್ಥಿಗಳು ವೇತನಕ್ಕೆ ಅರ್ಹರು ಎಂದು ಹೇಳಿದರು. ಈ ಯೋಜನೆಯ ವಿನ್ಯಾಸವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಭದ್ರತೆ ನೀಡಲು ರೂಪಿಸಲಾಗಿದೆ ಎಂದು ತಿಳಿಸಿದರು.ಇಂದು ಮಕ್ಕಳು ಮೊಬೈಲ್, ಲ್ಯಾಪ್‌ಟಾಪ್‌ಗಳ ದಾಸರಾಗುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಪರಿಚಯಿಸಬೇಕಾಗಿದೆ. ತಂತ್ರಜ್ಞಾನ ಬಳಕೆ ನಿಯಂತ್ರಣದೊಳಗಿರಬೇಕು, ಉಪಯೋಗದ ಮಟ್ಟದವರೆಗೆ ಮಾತ್ರ ಇರಬೇಕು. ಹಾಲು ಹೆಪ್ಪಾದರೆ ಮೊಸರಾಗುತ್ತದೆ, ಮೊಸರು ಬಡಿದರೆ ಬೆಣ್ಣೆ, ಬೆಣ್ಣೆ ಕಾಸಿದರೆ ತುಪ್ಪ. ಈ ರೀತಿಯ ಪ್ರಕ್ರಿಯೆಯಂತೆ ನಮ್ಮ ವ್ಯಕ್ತಿತ್ವವೂ ಸಂಸ್ಕಾರ, ಶ್ರಮ ಮತ್ತು ಜೀವನ ಅನುಭವದ ಮೂಲಕ ಶುದ್ಧತೆಯತ್ತ ಸಾಗಬೇಕು. ಈ ಪ್ರಕ್ರಿಯೆಯಲ್ಲಿ ಮೊಬೈಲ್‌ಗಳಿಗೆ ದಾಸರಾಗದೆ ಗುರು-ಪೋಷಕರ ಮಾರ್ಗದರ್ಶನಕ್ಕೆ ಒಲಿಯಬೇಕು ಎಂದು ಹೇಳಿದರು.
ಧರ್ಮಸ್ಥಳ ಸಂಸ್ಥೆಯು ಯಾವುದೇ ಸಾಲ ನೀಡಿಲ್ಲ. ಯಾರಾದರೂ ಧರ್ಮಸ್ಥಳ ಕೊಟ್ಟ ಸಾಲ ಎಂದು ಹೇಳುತ್ತಿರುವರೆಂದರೆ ಅದು ತಪ್ಪು. ಆರ್‌ಬಿಐ ನಿಯಮದ ಪ್ರಕಾರ, ಬ್ಯಾಂಕ್ ನೀಡಿದ ಸಾಲವನ್ನು ಸರ್ಕಾರ ಅಥವಾ ಬ್ಯಾಂಕ್ ಮಾತ್ರ ಮನ್ನಾ ಮಾಡಬಹುದು. ಇಲ್ಲವಾದರೆ, ಬಡ್ಡಿಯು ಜಾಸ್ತಿಯಾಗುತ್ತದೆ, ಮರುಪಾವತಿ ಕಠಿಣವಾಗುತ್ತದೆ ಎಂದರು.ಜಿಲ್ಲಾ ಜನಜಾಗೃತಿ ವೇದಿಕೆಯ ಗಣೇಶ್ ಮೂರ್ತಿ ಮಾತನಾಡಿ, ಇಂತಹ ವಿದ್ಯಾವೇತನ ಯೋಜನೆಗಳು ಸಮಾಜದ ಬಡತನದಲ್ಲಿ ಸಿಲುಕಿರುವ ಮಕ್ಕಳಿಗೆ ಬೆಳಕಿನ ಕಿರಣ ನೀಡುತ್ತಿವೆ. ಇದರಿಂದ ವಿದ್ಯಾರ್ಥಿಗಳು ವಿದ್ಯಾವಂತರಾಗಿ ಬೆಳೆದು, ಭವಿಷ್ಯದಲ್ಲಿ ಇತರ ಮಕ್ಕಳಿಗೂ ಸಹಾಯಕರಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಶ್ರೀಕಾಂತ್ ನವಲಗುಂದ್ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಬಗ್ಗೆ ಮಾತನಾಡುತ್ತ ಈಗಾಗಲೇ ಅವರು ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಎಲ್ಲ ಧರ್ಮಗಳಿಗೂ ಸಹಾಯ ಮಾಡುತ್ತಿದ್ದಾರೆ. ಮಠಾಧೀಶರು ಮಾಡದ ಕೆಲಸಗಳನ್ನು ನಿಷ್ಠೆಯಿಂದ ನಡೆಸುತ್ತಿದ್ದಾರೆ. ಧರ್ಮ, ಜಾತಿ ಎಂಬ ಭೇದವಿಲ್ಲದೆ ಮಾನವತೆಯೊಂದಿಗೆ ಹತ್ತಿರವಿರುವ ಅಪರೂಪದ ನಾಯಕರು. ಇಂದು ಗ್ರಾಮಗಳು ಶುದ್ಧ ಮನಸ್ಸಿನ ಜನರಿಂದ ಖಾಲಿಯಾಗುತ್ತಿವೆ. ಸರಕಾರ ಮದ್ಯಪಾನ ನಿಗ್ರಹದ ಕಡೆ ಗಮನ ಹರಿಸುತ್ತಿಲ್ಲ. ಆದರೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಮಾತ್ರ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಮಂಜುನಾಥ್, ಕೇಶವಪ್ರಸಾದ್, ವಸಂತ ಕುಮಾರ್, ಸ್ಥಳೀಯ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.