ಮಕ್ಕಳು ಸಮಾಜದ ಆಸ್ತಿ ಆಗುವಂತೆ ಬೆಳೆಸಬೇಕು

| Published : May 18 2024, 12:35 AM IST

ಸಾರಾಂಶ

ಮಕ್ಕಳಿಗೆ ಜೀವನ ಪರ್ಯಂತ ದುಡಿದು ಆಸ್ತಿ ಮಾಡಿಡುವುದಕ್ಕಿಂತ ಬಡತನ, ಸಂಕಷ್ಟಗಳ ಮಧ್ಯೆಯೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ ಮಕ್ಕಳು ದೇಶದ ಆಸ್ತಿಯಾಗುವಂತೆ ರೂಪಿಸುಲು ಪಾಲಕರು ಗಮನಹರಿಸುತ್ತಿರುವುದು ಆಶಾದಾಯಕ ಸಂಗತಿ ಎಂದು ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಅಭಿಪ್ರಾಯಪಟ್ಟಿದ್ದಾರೆ.

- ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಸಲಹೆ । ಕೆ.ಎಚ್‌.ಮೆಹಬೂಬ್‌ ಬ್ರಿಗೇಡ್‌ನಿಂದ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಮಕ್ಕಳಿಗೆ ಜೀವನ ಪರ್ಯಂತ ದುಡಿದು ಆಸ್ತಿ ಮಾಡಿಡುವುದಕ್ಕಿಂತ ಬಡತನ, ಸಂಕಷ್ಟಗಳ ಮಧ್ಯೆಯೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ ಮಕ್ಕಳು ದೇಶದ ಆಸ್ತಿಯಾಗುವಂತೆ ರೂಪಿಸುಲು ಪಾಲಕರು ಗಮನಹರಿಸುತ್ತಿರುವುದು ಆಶಾದಾಯಕ ಸಂಗತಿ ಎಂದು ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಅಭಿಪ್ರಾಯಪಟ್ಟರು.

ನಗರದ ಬಾಷಾ ನಗರದ ಮುಖ್ಯ ರಸ್ತೆಯ ದ್ವಾರ ಬಾಗಿಲ ಬಳಿ ಕೆ.ಎಚ್‌. ಮೆಹಬೂಬ್‌ ಬ್ರಿಗೇಡ್ ಗ್ರೂಪ್ ಹಮ್ಮಿಕೊಂಡಿದ್ದ 2023- 2024ನೇ ಸಾಲಿನ ಎಸ್ಸೆಸ್ಸೆಲ್ಸಿ ಸಾಧಕ ಮಕ್ಕಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರಿಗೂ ಇತ್ತೀಚೆಗೆ ಶಿಕ್ಷಣದ ಮಹತ್ವ ಅರಿವಾಗಿದೆ. ತಮ್ಮ ಕಷ್ಟ, ನಷ್ಟಗಳನ್ನೆಲ್ಲಾ ಬದಿಗಿಟ್ಟು, ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡಲು ಆಸರೆ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

"ಕನ್ನಡಪ್ರಭ " ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ಮಾತನಾಡಿ, ಆಜಾದ್ ನಗರ, ಬಾಷಾ ನಗರದಂತಹ ಅಲ್ಪಸಂಖ್ಯಾತ ಸಮುದಾಯದವರೇ ಹೆಚ್ಚಾಗಿರುವ ಈ ಭಾಗದಲ್ಲಿ ರಾಜಕೀಯ, ಧಾರ್ಮಿಕ ಕಾರ್ಯಗಳೇ ಹೆಚ್ಚಾಗಿರುತ್ತಿದ್ದವು. ಇದೀಗ ಈ ಭಾಗದಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ. ಮಂಡಕ್ಕಿ ಭಟ್ಟಿ, ತರಗಾರ, ಕೂಲಿ, ಹಣ್ಣು ಮಾರಾಟ, ಗುಜರಿ ಕೆಲಸ ಮಾಡುವಂತಹವರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ಸಂಕಲ್ಪ ಮಾಡಿರುವುದು ಶ್ಲಾಘನೀಯ. ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಿಸುವ ಕಾರ್ಯನಿರಂತರವಾಗಲಿ. ಈ ಭಾಗದ ಮುಖಂಡರು, ಉಳ್ಳವರು ಸಹ ಇಂತಹ ಕೆಲಸಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಯುವ ವಕೀಲ ರಜ್ವಿಖಾನ್ ಮಾತನಾಡಿ, ಶೀಘ್ರವೇ ಕಾಲೇಜು ಶಿಕ್ಷಣಕ್ಕೆ ಮಾರ್ಗದರ್ಶನ ನೀಡುವ ಕಾರ್ಯಕ್ರಮವನ್ನು ಪಾಲಕರು, ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಿದ್ದೇವೆ. ಈ ಬಗ್ಗೆ ಸಮಾನ ಮನಸ್ಕರು, ಸಂಘ-ಸಂಸ್ಥೆಯವರು ಸೇರಿಕೊಂಡು, ಯಾವ್ಯಾವ ಕೋರ್ಸ್ ಓದಿದರೆ ಏನೆಲ್ಲಾ ಅನುಕೂಲವೆಂಬ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ. ಆದಷ್ಟು ಬೇಗನೆ ಸಮಯ, ಸ್ಥಳ, ದಿನಾಂಕ ಪ್ರಕಟಿಸಲಿದ್ದೇವೆ ಎಂದರು.

45 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್, ಪಾಲಿಕೆ ಸದಸ್ಯರಾದ ಕೆ.ಜಾಕೀರ್ ಅಲಿ, ಅಹಮ್ಮದ್ ಕಬೀರ್ ಖಾನ್, ಸಿವಿಲ್ ಎಂಜಿನಿಯರ್ ಸಮೀರ್ ಖಾನ್, ಗುರುಕುಲ ಶಾಲೆ ಅಧ್ಯಕ್ಷ ಆರ್.ಅಬ್ದುಲ್‌, ಯುನೈಟೆಡ್ ಇಂಟರ್ ನ್ಯಾಷನಲ್ ಶಾಲೆ ಸಂಸ್ಥಾಪಕ ಅಧ್ಯಕ್ಷ ದಾದಾಪೀರ್, ಶಾಲೆಯ ಕೋ-ಆರ್ಡಿನೇಟರ್ ಷರ್ಫ್ಯುನ್ನೀಸಾ, ಸಮಾಜ ಸೇವಕರಾದ ಸೈಯದ್ ರಿಯಾಜ್ ಅಹ್ಮದ್‌, ಗುರುಕುಲದ ಏಜಾಜ್‌, ವಿಕರವೇ ಕಾರ್ಯದರ್ಶಿ ಅಮ್ಜದ್ ಅಲಿ, ಕೆ.ಎಚ್‌. ಮೆಹಬೂಬ್‌, ಸಮಾಜ ಸೇವಕ ನೂರ್ ಅಹಮ್ಮದ್‌, ಆದಿಲ್ ಬಾಷಾ, ಮೊಹಮ್ಮದ್ ಜುಬೇರ್‌, ಸೈಯದ್ ಮುಸ್ತಫಾ, ಟಿ.ಜಫು, ಇಮ್ರಾನ್ ಕೊಟ್ಟೂರು, ಫಾರೂಕ್ ಅಟೇಲಿ, ಆಜಂ, ಶಾರೂಖ್‌, ಷಫೀ, ಹಜರತ್ ಅಲಿ, ದಾದಾಪೀರ್ ಆಟೋ ಇತರರು ಇದ್ದರು.

- - -

ಬಾಕ್ಸ್‌ ಕೋರ್ಸ್‌ಗಳ ಬಗ್ಗೆ ಮಾರ್ಗದರ್ಶನ ಮುಖ್ಯ

ಬಹುತೇಕ ಶ್ರಮಿಕರ ಪರಿಶಿಷ್ಟರು, ಅಲ್ಪಸಂಖ್ಯಾತರು, ಮೇಲ್ವರ್ಗದ ಕಡುಬಡವರು, ಅನಕ್ಷರಸ್ಥರೇ ಇರುತ್ತಾರೆ. ಎಲ್ಲ ಜಾತಿ, ಧರ್ಮದಲ್ಲೂ ಬಡವರು, ಕಡುಬಡವರು ಇರುತ್ತಾರೆ. ಅಂತಹ ಪಾಲಕರಿಗೆ ತಮ್ಮ ಮಕ್ಕಳಿಗೆ ಯಾವ ಕೋರ್ಸ್‌ ಓದಿದರೆ ಉತ್ತಮ, ಮಕ್ಕಳ ಭವಿಷ್ಯ ರೂಪುಗೊಳ್ಳುತ್ತದೆಂಬ ಬಗ್ಗೆ ಈ ಭಾಗದ ಮುಖಂಡರು, ಶಿಕ್ಷಣ ಸಂಸ್ಥೆಯವರು ಶಿಕ್ಷಣ ಮಾರ್ಗಸೂಚಿ ನೀಡುವ ಕೆಲಸ ಮಾಡಬೇಕು. ಮಕ್ಕಳಿಗೂ ಸಹ ಮುಂದಿನ ಭವಿಷ್ಯದ ಬಗ್ಗೆ ಅರ್ಹ, ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಕೊಡಿಸುವ ಕೆಲಸ ಮಾಡಬೇಕು ಎಂದು ನಾಗರಾಜ ಬಡದಾಳ್‌ ಮನವಿ ಮಾಡಿದರು.

- - - -16ಕೆಡಿವಿಜಿ19, 20:

ದಾವಣಗೆರೆ ಬಾಷಾ ನಗರದ ಲ್ಲಿ ಕೆ.ಎಚ್. ಮಹಬೂಬ್ ಮತ್ತು ಬಳಗ ವತಿಯಿಂದ ಎಸ್ಸೆಸ್ಸೆಲ್ಸಿ ಸಾಧಕ ಮಕ್ಕಳನ್ನು ಸನ್ಮಾನಿಸಲಾಯಿತು.