ಮಕ್ಕಳಿಗೆ ಸಂಸ್ಕಾರ ಕಲಿಸಬೇಕು

| Published : May 25 2024, 12:50 AM IST

ಸಾರಾಂಶ

ಮನೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಪಾಲಕರು, ಪೋಷಕರು ಸಂಸ್ಕಾರ ಕಲಿಸಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲಾಧ್ಯಕ್ಷ ಹಾಸಿಂಫೀರ ವಾಲೀಕಾರ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಮನೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಪಾಲಕರು, ಪೋಷಕರು ಸಂಸ್ಕಾರ ಕಲಿಸಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲಾಧ್ಯಕ್ಷ ಹಾಸಿಂಫೀರ ವಾಲೀಕಾರ ಹೇಳಿದರು.

ಪಟ್ಟಣದಲ್ಲಿ ಸಂತಕವಿ ಕಾಳಿದಾಸ ಶಿಕ್ಷಣ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ವಿದ್ಯಾಸ್ಫೂರ್ತಿ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇವತ್ತು ಪ್ರತಿಯೊಬ್ಬರು ಕನ್ನಡದಲ್ಲೇ ಮಾತನಾಡಬೇಕಾದರೆ ಅವರಿಗೆ ಯಾವುದೇ ಡಿಗ್ರಿ ಅವಶ್ಯಕತೆಯಿಲ್ಲ. ಕೇವಲ ಅವರಿಗೆ ಸಂಸ್ಕಾರ ಒಂದು ಇದ್ದರೆ ಸಾಕು, ಅವರು ಕನ್ನಡದಲ್ಲಿ ಮಾತನಾಡುತ್ತಾರೆ. ಇವತ್ತು ಮಕ್ಕಳ ಹೇರುವ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿಂದೆ ಹತ್ತಾರು ಮಕ್ಕಳನ್ನು ಹಡೆದು ವಿವಿಧ ಕೆಲಸ ಕಾರ್ಯಗಳಿಗೆ ತೊಡಗಿಸುತ್ತಿದ್ದರು. ಹೀಗಾಗಿ ಮನೆ ತುಂಬಾ ಮಕ್ಕಳು ಇರುತ್ತಿದ್ದರು. ಇವತ್ತು ಮನೆಯ ಮಹಾಲಕ್ಷ್ಮೀ ಹೆಣ್ಣು ಸಂಸಾರದ ಕಣ್ಣು ಎಂದರು. ಐಎಎಸ್‌ದಿಂದ ಹಿಡಿದು ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದವರೆಗೆ ಇಂದು ಮೊದಲು ಮೂರು ಸ್ಥಾನಗಳಲ್ಲಿ ಹೆಣ್ಣು ಮಕ್ಕಳು ಇರುತ್ತಾರೆ. ಆದರೆ ಗಂಡು ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹೆಣ್ಣು ಮಕ್ಕಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಜಾರಿಗೆ ತಂದಿದೆ. ಪ್ರತಿ ಮನೆಗಳಲ್ಲಿ ಹೆಣ್ಣು ಮಕ್ಕಳು ನೌಕರಿ ಮಾಡಿದರೆ, ಇನ್ನೂ ಮುಂದಿನ ದಿನಗಳಲ್ಲಿ ಮನೆಯ ಮುಂದೆ ರಂಗೋಲಿ ಹಾಕುವ ಪರಿಸ್ಥಿತಿ ಬರಬಹುದು. ಹೀಗಾಗಿ ಮುಂದೆ ಗಂಡು ಮಕ್ಕಳನ್ನು ರಕ್ಷಿಸಲು ಬೇಟಾ ಪಡಾವೋ, ಬೇಟಿ ಬಚಾವೋ ಯೋಜನೆ ಜಾರಿಗೆ ತಂದರು ಆಶ್ಚರ್ಯವಿಲ್ಲ ಎಂದರು.

ವಿದ್ಯಾಸ್ಫೂರ್ತಿ ಪೂರ್ವ ಪ್ರಾಥಮಿಕ ಶಾಲೆಯ ಅಧ್ಯಕ್ಷ ಹೊನ್ನೇಶ ಮುರಗೋಡ ಮಾತನಾಡಿ, ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಇಂದು ಮಕ್ಕಳಿಗೆ ಒಳ್ಳೆಯ ಸಂಸ್ಕಾರಯುತ ಶಿಕ್ಷಣದ ಅವಶ್ಯಕತೆ ಬಹಳಷ್ಟಿದೆ. ನಮ್ಮ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ಕೊಡಲಾಗುತ್ತಿದೆ. ಇವತ್ತು ನಮ್ಮ ಶಾಲೆಯಲ್ಲಿ ಕಲಿತು ಬೇಸಿಗೆ ತರಬೇತಿ ಪಡೆದು ಸಾಕಷ್ಟು ಮಕ್ಕಳು ನವೋದಯ, ಸೈನಿಕ, ಮೊರಾರ್ಜಿ ದೇಸಾಯಿ, ರಾಣಿ ಚೆನ್ನಮ್ಮ ಹೀಗೆ ಅನೇಕ ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ. ಕೊಲ್ಹಾರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ನಮ್ಮ ಶಾಲೆಗೆ ಬನ್ನಿ ನಾವು ನಿಮ್ಮ ಮಕ್ಕಳ ಭವಿಷ್ಯವನ್ನು ಬದಲಾಯಿಸೋಣ ಎಂದರು.

ಈ ವೇಳೆ ಸಮಾರಂಭದ ಸಾನ್ನಿಧ್ಯ ವಹಿಸಿ ಹಳ್ಳದ ಗೆಣ್ಣೂರಿನ ಸಿದ್ದಪ್ಪ ಪೂಜಾರಿ ಪ್ರಾಸ್ತಾವಿಕವಾಗಿ ಸಂಸ್ಥೆಯ ಕಾರ್ಯದರ್ಶಿ ಪರಶುರಾಮ ಕೊಳಮಲಿ, ಸಾಹಿತಿ ಹಾಗೂ ವಾಗ್ಮಿಗಳಾದ ಮಹೇಶ ಗಾಳಪ್ಪಗೋಳ, ಆರ್.ಎಸ್.ಪಟ್ಟಣಶೆಟ್ಟಿ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸೈನಿಕ ಶ್ರೀಕಾಂತ ಪತಂಗಿ ದಂಪತಿಗಳನ್ನು ಹಾಗೂ ಎಸ್.ಎಸ್.ಎಲ್.ಸಿ ಮತ್ತು ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು,ಅತಿಥಿಗಳನ್ನು ಸನ್ಮಾನಿಸಿ,ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ಮುತ್ತು ಕೊಟಗೊಂಡ, ಗಂಗಪ್ಪ ಚೌಡಕಿ, ಗುರುಸಂಗಪ್ಪ ಕರೇಣಿ, ಹಣಮಂತ ಬಿರಾದಾರ, ಸಂಗಪ್ಪ ರೇಷ್ಮಿ,ಮಲ್ಲಿಕಾರ್ಜುನ ಕುಬಕಡ್ಡಿ ,ಕಲ್ಲಪ್ಪ ಕಾಖಂಡಕಿ,ಎಮ್.ಎಸ್.ರೇವೂರ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗದವರು.ಮಕ್ಕಳು ಉಪಸ್ಥಿತರಿದ್ದರು.

ಶಿಕ್ಷಕ ಪಿ.ಬಿ.ಖೇಡಗಿ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಕ್ಕಳು ದೇಶಭಕ್ತಿ,ಜನಪದ ಸೇರಿದಂತೆ ಅನೇಕ ಹಾಡುಗಳಿಗೆ ಹೆಜ್ಜೆ ಹಾಕಿ ಜನರನ್ನು ಮನರಂಜಿಸಿದರು.