ಮಕ್ಕಳಿಗೆ ಹಿಂದೂ ಸಂಸ್ಕಾರ ಕಲಿಸಬೇಕು: ಬಿ.ರಾಘವೇಂದ್ರ ಭಟ್‌

| Published : May 04 2024, 12:33 AM IST

ಸಾರಾಂಶ

ತಂದೆ, ತಾಯಿಯರು ತಮ್ಮ ಮಕ್ಕಳಿಗೆ ಹಿಂದೂ ಸಂಸ್ಕಾರ ಕಲಿಸಬೇಕು ಎಂದು ಉಡುಪಿ ತಾಲೂಕಿನ ಉಪ್ಪೂರಿನ ವೇ.ಬ್ರ.ಬಿ. ರಾಘವೇಂದ್ರ ಭಟ್ ತಿಳಿಸಿದರು.

ಹಾಲಗಿರಿಯ ತಿರುಮಲೇಶ್ವರ- ವನದುರ್ಗಾಪರಮೇಶ್ವರಿ ದೇಗುಲದ ಜೀರ್ಣೋ ದ್ದಾರ ಪ್ರತಿಷ್ಠಾಪನಾ ಮಹೋತ್ಸವ

ಕನ್ನಡಪ್ರಭ ವಾರ್ತೆ, ನರಸಿಹಂರಾಜಪುರ

ತಂದೆ, ತಾಯಿಯರು ತಮ್ಮ ಮಕ್ಕಳಿಗೆ ಹಿಂದೂ ಸಂಸ್ಕಾರ ಕಲಿಸಬೇಕು ಎಂದು ಉಡುಪಿ ತಾಲೂಕಿನ ಉಪ್ಪೂರಿನ ವೇ.ಬ್ರ.ಬಿ. ರಾಘವೇಂದ್ರ ಭಟ್ ತಿಳಿಸಿದರು.

ಶುಕ್ರವಾರ ವಗ್ಗಡೆ ಗ್ರಾಮದ ಹಾಲಗಿರಿಯಲ್ಲಿ ಶ್ರೀ ತಿರುಮಲೇಶ್ವರ ಮತ್ತು ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಜೀರ್ಣೋದ್ಧಾರ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ವಗಡೆಯ ಹಾಲಗಿರಿಯಲ್ಲಿ ಮೂಲ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಒಂದು ಕಲ್ಲು ಮಾತ್ರ ಇತ್ತು. ಈಗ ದೇವಸ್ಥಾನ ಜೀರ್ಣೋದ್ಧಾರ ವಾಗಿದೆ. ಒಂದು ಕಲ್ಲಿಗೆ ಚೈತನ್ಯ ಬರಬೇಕಾದರೆ ನಂಬಿಕೆ, ಶ್ರದ್ಧೆ, ಭಕ್ತಿ ಇರಬೇಕು.ಆಗಲೇ ಕಲ್ಲಿನಲ್ಲೂ ದೇವರ ಕಾಣಲು ಸಾಧ್ಯ.

ಹಾಲಗಿರಿಯಲ್ಲಿ ಎಲ್ಲರ ಮನಸ್ಸು ಒಟ್ಟಾಗಿದೆ. ನಿಮ್ಮ ಹೃದಯದಲ್ಲೇ ದೇವರನ್ನು ಕಂಡಿದ್ದೇನೆ. ಪಂಚ ಶಕ್ತಿಗಳು ನಮ್ಮ ದೇಹದಲ್ಲಿರುತ್ತದೆ. ಅದನ್ನು ನಾವು ಗುರುತಿಸಬೇಕು. ನಮ್ಮ ಆತ್ಮದಲ್ಲೇ ಪರಮಾತ್ಮನ ಕಾಣುತ್ತೇವೆ. ಈ ಹಿಂದೆ ಋಷಿ ಮುನಿಗಳು, ನಮ್ಮ ಪೂರ್ವಜರು ಸಂಪ್ರದಾಯ ಹುಟ್ಟು ಹಾಕಿದ್ದು ಅದನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಹಿಂದೆ ಈ ಊರು ಹಾಲಗಿರಿಯಲ್ಲಿ ಬೆಟ್ಟದ ಮೇಲೆ ಹಾಲು ಹಾಕಿದರೆ ಬಾವಿಯಲ್ಲಿ ಹಾಲು ಬರುತ್ತದೆ ಎಂದು ಗ್ರಾಮದ ಹಿರಿಯರು ಹೇಳಿದ್ದಾರೆ. ಇಲ್ಲಿನ ಗ್ರಾಮಸ್ಥರ ಮನಸ್ಸು ಸಹ ಹಾಲಿನಂತೆ ಶುಭ್ರವಾಗಿದೆ. ಪ್ರತಿಯೊಬ್ಬರಿಗೂ ಉತ್ತಮ ಸಂಸ್ಕಾರ ಬೇಕಾಗಿದೆ ಎಂದರು.

ಮನೆಯೇ ಮೊದಲ ಪಾಠಶಾಲೆ ಎನ್ನುತ್ತಾರೆ. 6 ವರ್ಷದೊಳಗಿನ ಮಕ್ಕಳಿಗೆ ತಂದೆ,ತಾಯಿಯರು ಉತ್ತಮ ಸಂಸ್ಕಾರ ಹೇಳಿಕೊಡಬೇಕು. ಪ್ರಪಂಚ ಸುತ್ತಿ ಬ್ರಹ್ಮಾಂಡ ನೋಡುವುದಕ್ಕಿಂತ ನಿಮ್ಮ ಊರುಗಳಲ್ಲಿನ ದೇವಸ್ಥಾನಗಳಿಗೆ ಹೋಗಿ ಪ್ರಾರ್ಥನೆ, ಪೂಜೆ ಸಲ್ಲಿಸಿ ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪ, ನರಸಿಂಹರಾಜಪುರ ತಾಲೂಕು ಯೋಜನಾಧಿ ಕಾರಿ ನಿರಂಜನ್ ಮಾತನಾಡಿ, ಹಾಲಗಿರಿಯಲ್ಲಿ 10 ತಿಂಗಳಲ್ಲೇ ಉತ್ತಮ ದೇವಸ್ಥಾನ ಕಟ್ಟಿಸಿದ್ದೀರಿ. 10 ಮನಸ್ಸುಗಳು ಒಟ್ಟಾಗಿ ಕೆಲಸ ಮಾಡಿದ್ದರಿಂದ ಈ ದೇವಸ್ಥಾನ ಕಟ್ಟಲು ಸಾಧ್ಯವಾಗಿದೆ. ದೇವರು ದೇವಸ್ಥಾನ ಬೇಕು ಎಂದು ಕೇಳುವುದಿಲ್ಲ. ಆದರೆ, ಭಕ್ತರು ದೇವರಿಗೆ ದೇವಸ್ಥಾನ ಕಟ್ಟಿಸಬೇಕಾಗಿದೆ. ಪ್ರತಿ ಊರಿನಲ್ಲೂ ಒಂದು ದೇವಸ್ಥಾನ, ಶಾಲೆ ಬೇಕಾಗಿದೆ. ಇಲ್ಲಿ ಬೆಟ್ಟದ ಕೆಳಗೆ ಹಾಗೂ ಮೇಲೆ ದೇವಸ್ಥಾನ ಕಟ್ಟಲಾಗಿದೆ.ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳು ಸಹ ನಡೆಯಲಿ. ನಿಮ್ಮ ಮನೆಗಳಲ್ಲಿ ನಡೆಯುವ ಕೆಲವು ಧಾರ್ಮಿಕ ಕಾರ್ಯಕ್ರಮ ದೇವಸ್ಥಾನದಲ್ಲೂ ಸಹ ನಡೆಸಬಹುದು ಎಂದರು.

ಇದಕ್ಕೂ ಮೊದಲು ದೇವಸ್ಥಾನದಲ್ಲಿ ಪುಣ್ಯಾಹ, ಪ್ರತಿಷ್ಠಾ ಬಂಧ, ಪ್ರತಿಷ್ಠೆ, ಚಂಡಿಕಾ ಶಾಂತಿ ಯಾಗ, ಪಂಚವಿಷಂತಿ, ಬ್ರಹ್ಮ ಕಳಶ ಕಲಾ ತತ್ವ ಅಧಿವಾಸ ಹೋಮ, ಕಲಶಾಭಿಷೇಕ, ಮಹಾ ಪೂಜೆ, ಪ್ರಸಾದ ವಿತರಣೆ ನಡೆಯಿತು. ನಂತರ ಬಂದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ಬಂಗುವಾನಿ ಡಿ.ಚೇತನ್‌ ಮಾತನಾಡಿ ದೇವಸ್ಥಾನದ ಇತಿಹಾಸವನ್ನು ತಿಳಿಸಿದರು. ಸಭೆ ಅಧ್ಯಕ್ಷತೆಯನ್ನು ಹಾಲಗಿರಿ ದೇವಸ್ಥಾನ ಸಮಿತಿ ಅಧ್ಯಕ್ಷ ಸಿದ್ದಪ್ಪಗೌಡ ವಹಿಸಿದ್ದರು. ಸಭೆಯಲ್ಲಿ ಗ್ರಾಮದ ಮುಖಂಡರಾದ ಹಿರೇಬೈಲು ರವೀಂದ್ರ, ವಗ್ಗಡೆ ಮಂಜಪ್ಪಗೌಡ್ರು, ಹಂಪನಕೊಡಿಗೆ ಬಾಲಪ್ಪ ಗೌಡ್ರು, ನಿವೃತ್ತ ಇಂಜಿನಿಯರ್‌ ಎಸ್‌.ಟಿ.ಗೌಡ್ರು, ಗದ್ದೇಮನೆ ಅಣ್ಣೇಗೌಡ್ರು, ಮಾವಿನಮನೆ ನಾಗರಾಜ ಗೌಡ್ರು, ಬಾಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಮೋಹನ್‌ , ಬಂಗುವಾನಿ ಚೇತನ್‌ , ತಿಮ್ಮಪ್ಪ ಇದ್ದರು.