ಕುದೂರು: ಮಕ್ಕಳ ಮನಸ್ಸು ಹಸಿ ಮಣ್ಣಿನ ಇಟ್ಟಿಗೆಯಿದ್ದಂತೆ ಅದರ ಮೇಲೆ ಸಂಸ್ಕಾರ ಎಂಬ ಮುದ್ರೆ ಒತ್ತಿ ಅದನ್ನು ಸುಟ್ಟು ಗಟ್ಟಿಗೊಳಿಸಿದ ನಂತರ ಮುದ್ರೆ ಎಂದಿಗೂ ನಾಶವಾಗುವುದಿಲ್ಲ. ಇಂತಹ ಸಂಸ್ಕಾರವನ್ನು ಮನೆ ಮತ್ತು ಶಾಲೆಯಲ್ಲಿ ಮಕ್ಕಳಿಗೆ ಕಲಿಸಬೇಕಿದೆ ಎಂದು ಆರಕ್ಷಕ ಉಪನಿರೀಕ್ಷಕ ಭೀಮೇಶಯ್ಯ ತಿಳಿಸಿದರು.
ಕುದೂರು: ಮಕ್ಕಳ ಮನಸ್ಸು ಹಸಿ ಮಣ್ಣಿನ ಇಟ್ಟಿಗೆಯಿದ್ದಂತೆ ಅದರ ಮೇಲೆ ಸಂಸ್ಕಾರ ಎಂಬ ಮುದ್ರೆ ಒತ್ತಿ ಅದನ್ನು ಸುಟ್ಟು ಗಟ್ಟಿಗೊಳಿಸಿದ ನಂತರ ಮುದ್ರೆ ಎಂದಿಗೂ ನಾಶವಾಗುವುದಿಲ್ಲ. ಇಂತಹ ಸಂಸ್ಕಾರವನ್ನು ಮನೆ ಮತ್ತು ಶಾಲೆಯಲ್ಲಿ ಮಕ್ಕಳಿಗೆ ಕಲಿಸಬೇಕಿದೆ ಎಂದು ಆರಕ್ಷಕ ಉಪನಿರೀಕ್ಷಕ ಭೀಮೇಶಯ್ಯ ತಿಳಿಸಿದರು.
ಮಾಗಡಿ ತಾಲೂಕು ಹುಲಿಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುದೂರು ಆರಕ್ಷಕ ಠಾಣೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಮಕ್ಕಳಿಗೆ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ತಂದೆ ತಾಯಿ ತಮ್ಮ ಮಕ್ಕಳು ತಪ್ಪು ಹಾದಿ ಹಿಡಿಯಲಿ ಎಂದು ಬಯುಸುವುದಿಲ್ಲ. ಪಠ್ಯದಲ್ಲೂ ಇಂತಹ ಪಾಠಗಳು ಇರುವುದಿಲ್ಲ. ಆದರೂ ಕೆಲ ಮಕ್ಕಳು ಅಪರಾಧ ಪ್ರಕರಣಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಕೈಯಲ್ಲಿರುವ ಮೊಬೈಲ್, ಸಿನೆಮಾ ಮತ್ತು ಮಾಧ್ಯಮಗಳ ಕೆಟ್ಟ ಪ್ರಭಾವ. ಇದರ ಅಪಾಯವನ್ನು ಅರಿತು ಪೋಷಕರು ಮತ್ತು ಶಿಕ್ಷಕರು ಮಕ್ಕಳ ಕುರಿತು ಹೆಚ್ಚು ಎಚ್ಚರದಿಂದ ಗಮನ ಕೊಟ್ಟು ಮಾರ್ಗದರ್ಶನ ಮಾಡಬೇಕಾಗಿದೆ ಎಂದು ಹೇಳಿದರು.ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಮಾಜಿ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಮಾತನಾಡಿ, ಆರೋಗ್ಯವಂತ ದೇಹದಲ್ಲಿ ಬಲಿಷ್ಟ ಮನಸಿರುತ್ತದೆ ಎಂಬುದನ್ನು ಮರೆಯಬಾರದು. ಮಕ್ಕಳು ದುಶ್ಚಟಗಳಿಂದ ದೂರವಿರಬೇಕು. ಮಾದಕ ವಸ್ತುಗಳನ್ನು ಬಳಸುವ ಜನರಿಂದ ದೂರವಿರಬೇಕು. ಅಂತಹ ಜನರನ್ನು ಕಂಡರೆ ಸಮೀಪದ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ತಿಳಿಸಿದರು.
ಪೇದೆ ಈರಣ್ಣ ಮಾತನಾಡಿ, ಮಕ್ಕಳು 18 ವರ್ಷ ತುಂಬುವ ಮುನ್ನ ಬೈಕ್ ಸ್ಕೂಟರ್ ಕಾರುಗಳನ್ನು ಚಲಾಯಿಸಬಾರದು ಎಂದು ಕಾನೂನು ಮಾಡಿದೆ. ಯಾವುದೇ ಸಮಾಜ ನೆಮ್ಮದಿಯಿಂದ ಜೀವಿಸಬೇಕಾದರೆ ಎಲ್ಲರೂ ಕಾನೂನನ್ನು ಗೌರವಿಸಬೇಕು ಮತ್ತು ಪಾಲಿಸಬೇಕು. ಕಾನೂನು ಭಂಜಕ ಕೆಲಸ ಮಾಡುವವರನ್ನು ಶಿಕ್ಷಿಸಲಾಗುವುದು. ಇಂತಹ ಕಾನೂನು ಸಲಹೆ ಮತ್ತು ಮಾರ್ಗದರ್ಶನ ಬೇಕಿದ್ದರೆ ಸಮೀಪದ ಪೊಲೀಸ್ ಠಾಣೆಗೆ ಭೇಟಿ ಮಾಡಬಹುದು. ಪೊಲೀಸರನ್ನು ಸ್ನೇಹಪರವಾಗಿ ಭಾವಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.ಮುಖ್ಯಶಿಕ್ಷಕ ಉಮಾಶಂಕರ್ ಮಾತನಾಡಿ, ಮಕ್ಕಳಿಗೆ ಶಾಲೆಗಳಲ್ಲಿ ಪಠ್ಯದ ಜೊತೆಗೆ ಸಾಮಾಜಿಕ ಪ್ರಜ್ಞೆ ಮೂಡಿಸಬೇಕು. ಯಾವುದೆ ಒಂದು ಮಾದ್ಯಮವನ್ನು ಬಳಸುವ ಮುನ್ನ ಅದನ್ನು ಹೇಗೆ ಬಳಸಬೇಕು. ಯಾವುದನ್ನು ನೋಡಬೇಕು, ಯಾವುದನ್ನು ಬಿಡಬೇಕು ಎಂಬುದನ್ನು ಅರ್ಥ ಮಾಡಿಸಬೇಕು. ಮೊಬೈಲ್ ಇಂದು ಸಹಕಾರಿಯಾಗುವುದಕ್ಕಿಂತ ಹಾವಳಿಯಾಗುತ್ತಿದೆ. ಅದಕ್ಕೆ ಕಾಲಕಾಲಕ್ಕೆ ಶಾಲೆಯಲ್ಲಿ ಇಂತಹ ಕಾನೂನು ತರಬೇತಿಯಂತಹ ಕಾರ‍್ಯಕ್ರಮವನ್ನು ಆಗಾಗ್ಗೆ ಏರ್ಪಡಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕಿ ಗಂಗಮ್ಮ, ಭೀಮೇಶ್, ಲೀಲಾವತಿ, ತೇಜಸ್ವಿನಿ, ರಮ್ಯ ನಂದಾರಾಣಿ ಇತರರು ಹಾಜರಿದ್ದರು.4ಕೆಆರ್ ಎಂಎನ್ 1.ಜೆಪಿಜಿ
ಮಾಗಡಿ ತಾಲೂಕು ಹುಲಿಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುದೂರು ಆರಕ್ಷಕ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಮಾತನಾಡಿದರು.