ಮಕ್ಕಳಿಗೆ ಚಿಕ್ಕಂದಿನಲ್ಲೇ ಶಂಕರರ ತತ್ವ ಕಲಿಸಬೇಕು: ಮೋತಿ ಸುಬ್ರಹ್ಮಣ್ಯ

| Published : May 03 2025, 12:17 AM IST

ಮಕ್ಕಳಿಗೆ ಚಿಕ್ಕಂದಿನಲ್ಲೇ ಶಂಕರರ ತತ್ವ ಕಲಿಸಬೇಕು: ಮೋತಿ ಸುಬ್ರಹ್ಮಣ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶಂಕರಾಚಾರ್ಯರ ಬೋಧನೆಯನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಲಿಸುವ ಕೆಲಸವಾಗಬೇಕು. ಮೊದಲು ಮಕ್ಕಳಿಗೆ ಭಗವದ್ಗೀತೆಯನ್ನು ಕಲಿಸಬೇಕು. ಶಂಕರಾಚಾರ್ಯರ ಪ್ರವಚನಗಳು ಎಲ್ಲರಿಗೂ ಜೀವನ ಹೇಗೆ ನಡೆಸಬೇಕು ಎಂಬುದನ್ನು ತಿಳಿಸುತ್ತವೆ. ನಮ್ಮವರಿಗೆ ಸರಿಯಾದ ಗುರು ಬೇಕಾಗಿದೆ.

ಶಂಕರ ಭಗವತ್ಪಾದರ ಜಯಂತಿ । ಪಲ್ಲಕ್ಕಿ ಉತ್ಸವ

ಕನ್ನಡಪ್ರಭ ವಾರ್ತೆ ದಾವಣಗೆರೆ

ಶಂಕರಾಚಾರ್ಯರ ಬೋಧನೆಯನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಲಿಸುವ ಕೆಲಸವಾಗಬೇಕು. ಮೊದಲು ಮಕ್ಕಳಿಗೆ ಭಗವದ್ಗೀತೆಯನ್ನು ಕಲಿಸಬೇಕು. ಶಂಕರಾಚಾರ್ಯರ ಪ್ರವಚನಗಳು ಎಲ್ಲರಿಗೂ ಜೀವನ ಹೇಗೆ ನಡೆಸಬೇಕು ಎಂಬುದನ್ನು ತಿಳಿಸುತ್ತವೆ. ನಮ್ಮವರಿಗೆ ಸರಿಯಾದ ಗುರು ಬೇಕಾಗಿದೆ. ಆಗ ಮಾತ್ರ ನಾವು ಸರಿಯಾದ ಮಾರ್ಗದಲ್ಲಿ ನಡೆಯಲು ಪ್ರೇರಣೆಯಾಗುತ್ತದೆ ಎಂದು ಶ್ರೀ ಶಂಕರ ಸೇವಾ ಸಂಘದ ಉಪಾಧ್ಯಕ್ಷ ಮೋತಿ ಸುಬ್ರಹ್ಮಣ್ಯ ಹೇಳಿದರು.

ನಗರದ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಶಂಕರ ಸೇವಾ ಸಂಘದಿಂದ ಆಯೋಜಿಸಿದ ಶ್ರೀ ಶಂಕರ ಭಗವತ್ಪಾದರ ಜಯಂತಿಯ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಶ್ರೀ ಶಂಕರಾಚಾರ್ಯರು ಲೌಕಿಕ, ಅಲೌಕಿಕ ವಿಚಾರಗಳನ್ನು ಬೋಧಿಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಕ್ತಿಯನ್ನು ಪಡೆಯಲು ತಿಳಿಸಿದ್ದಾರೆ ಎಂದರು.

ನಮ್ಮ ದೇಶ ಇಷ್ಟೊಂದು ಪ್ರಗತಿ ಹೊಂದಲು, ನಮ್ಮ ಹಿಂದೂ ಸಮಾಜ, ಸಂಸ್ಕೃತಿ ಉಳಿಯಲು ಶಂಕರಾಚಾರ್ಯರೇ ಕಾರಣ. ಅವರಿಗೆ ನಾವು ಎಲ್ಲರೂ ಚಿರ ಋಣಿಯಾಗಿದ್ದೇವೆ. ಶ್ರೀ ಶಂಕರಾಚಾರ್ಯರ ತತ್ವ, ಆದರ್ಶಗಳನ್ನು ಪಾಲನೆ ಮಾಡಿದರೆ ಪ್ರತಿಯೊಬ್ಬರೂ ಸುಖಕರ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.

ಶ್ರೀ ಶಂಕರ ಸೇವಾ ಸಂಘದ ಅಧ್ಯಕ್ಷ ಡಾ.ಬಿ.ಟಿ.ಅಚ್ಯುತ್ ಮಾತನಾಡಿ, ನಮ್ಮ ಸಂಘದಿಂದ ಪ್ರತಿ ವರ್ಷ ಶಂಕರ ಜಯಂತಿ ಕಾರ್ಯಕ್ರಮವನ್ನು ಮಾಡಿಕೊಂಡು ಬಂದಿದ್ದೇವೆ. ವೈಶಾಖ ಶುದ್ಧ ಚತುರ್ಥಿಯ ಗುರುವಾರ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮವನ್ನು ಆರಂಭ ಮಾಡಿ ಬೆಳಿಗ್ಗೆ ರುದ್ರಾಭಿಷೇಕ, ಶ್ರೀ ಶಂಕರಾಚಾರ್ಯರಿಗೆ ಮಹಾಪೂಜೆ, ಶ್ರೀ ಚಂದ್ರಮೌಳೇಶ್ವರರಿಗೆ ರುದ್ರಾಭಿಷೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶಿವಮೊಗ್ಗದ ವಿದ್ವಾನ್ ಎಂ.ಎಸ್.ವಿನಾಯಕ ಶಂಕರ ಭಾಷ್ಯ ಪಾರಾಯಣ ಮತ್ತು ಸಂಜೆ ಸಾಧಕರ ಮಾರ್ಗದರ್ಶಿ ಶ್ರೀ ಶಂಕರರು ವಿಷಯ ಕುರಿತು ಉಪನ್ಯಾಸ ನೀಡಿದರು ಎಂದರು.

ಸಂಜೆ ಪಾಲಕಿ ಉತ್ಸವ, ರಥೋತ್ಸವ ನಡೆದವು. ಶ್ರೀ ಶಂಕರ ಜಯಂತಿಯ ಇಂದು ಶ್ರೀ ಶಂಕರ ಭಗವತ್ಪಾದರ ಪಾಲಕಿ ಉತ್ಸವ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸಂಜೆ ಶ್ರೀ ಶಾರದಾಂಬ ಭಜನಾ ಮಂಡಳಿಯಿಂದ ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರಗಳ ಪಾರಾಯಣ ಹಾಗೂ ರಥೋತ್ಸವ ನಡೆಯಲಿದೆ ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಶ್ರೀನಿವಾಸ ಜೋಷಿ, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಶಶಿಧರ, ನಿರ್ದೇಶಕರಾದ ಅನಿಲ್ ಬಾರೆಂಗಳ್, ಬಾಲಕೃಷ್ಣ ವೈದ್ಯ, ರಮೇಶ ಪಾಟೀಲ್, ಎಚ್.ಕೆ.ವೆಂಕಟೇಶ, ರಾಘವೇಂದ್ರ, ಪಟ್ಟಾಭಿರಾಮನ್, ಶ್ರೀಶಂಕರನ್, ಮಹಿಳಾ ಮಂಡಳಿಯ ನಳಿನ ಅಚ್ಯುತ, ಸುಮ ವೆಂಕಟೇಶ,ಕಾಮಾಕ್ಷಿ, ಪುರೋಹಿತರಾದ ಸುಬ್ರಹ್ಮಣ್ಯ ಭಟ್, ರಾಮಚಂದ್ರ ಭಟ್, ವ್ಯವಸ್ಥಾಪಕ ರಮೇಶ, ಇತರರು ಭಾಗವಹಿಸಿದ್ದರು.