ಕಷ್ಟಕ್ಕೆ ಸ್ಪಂದಿಸುವ ಗುಣವನ್ನು ಮಕ್ಕಳಿಗೆ ಕಲಿಸಬೇಕು: ಅರವಿಂದ ಸೋಮಯಾಜಿ ಕರೆ

| Published : May 18 2025, 01:34 AM IST

ಕಷ್ಟಕ್ಕೆ ಸ್ಪಂದಿಸುವ ಗುಣವನ್ನು ಮಕ್ಕಳಿಗೆ ಕಲಿಸಬೇಕು: ಅರವಿಂದ ಸೋಮಯಾಜಿ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಗುಣವನ್ನು ತಾಯಂದಿರು ಮಕ್ಕಳಿಗೆ ಕಲಿಸಬೇಕು ಎಂದು ಕೊಪ್ಪದ ಸಂಸ್ಕೃತಿ ಚಿಂತಕ ಅರವಿಂದ ಸೋಮಯಾಜಿ ಕರೆ ನೀಡಿದರು.

ಕಸಾಪ ಮಹಿಳಾ ಘಟಕದಿಂದ ವಿಶ್ವ ತಾಯಂದಿರ ದಿನಾಚರಣೆ । ಆಚಾರ್ಯ ನಮನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಗುಣವನ್ನು ತಾಯಂದಿರು ಮಕ್ಕಳಿಗೆ ಕಲಿಸಬೇಕು ಎಂದು ಕೊಪ್ಪದ ಸಂಸ್ಕೃತಿ ಚಿಂತಕ ಅರವಿಂದ ಸೋಮಯಾಜಿ ಕರೆ ನೀಡಿದರು.

ಶುಕ್ರವಾರ ಅಗ್ರಹಾರದ ಉಮಾ ಮಹೇಶ್ವರ ಸಭಾ ಭವನದಲ್ಲಿ ತಾಲೂಕು ಕಸಾಪ ಮಹಿಳಾ ಘಟಕ ಏರ್ಪಡಿಸಿದ್ದ ವಿಶ್ವ ತಾಯಂದಿರ ದಿನಾಚರಣೆ ಹಾಗೂ ಆಚಾರ್ಯ ನಮನ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ತಾಯಂದಿರ ಹಾಗೂ ಶಿಕ್ಷಕರ ಪಾತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಇಂದಿನ ಮಕ್ಕಳಿಗೆ ಶಿಕ್ಷಕರ ಮೇಲೆ ಭಯವೂ ಇಲ್ಲ.ಪ್ರೀತಿಯೂ ಇಲ್ಲವಾಗಿದೆ. ಸಕಾರಾತ್ಮಕ ಚಿಂತನೆ ಹೆಚ್ಚಿಸುವ ಉತ್ತಮ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸುತ್ತಿಲ್ಲ. ಇದು ತಾಯಂದಿರ ಸೋಲಾಗಿದೆ. ಸಮಾಜದಲ್ಲಿ ನೈತಿಕತೆ ಕುಸಿದಿದೆ. ನಮ್ಮ 5 ಇಂದ್ರಿಯಗಳನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳಬೇಕು. ಬಳಸಿದಷ್ಟು ಇಂದ್ರಿಯಗಳು ಹೆಚ್ಚು ಶಕ್ತಿ ಶಾಲಿಯಾಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ತಾಯಂದಿರು, ಶಿಕ್ಷಕರು ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲ ಬಂದಿದೆ. ಗುರುಗಳು, ತಾಯಂದಿರು ಎಚ್ಚರಗೊಂಡು ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಬೇಕು ಎಂದು ಸಲಹೆ ನೀಡಿದರು.

ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಆಶಯ ಭಾಷಣ ಮಾಡಿ, 111 ವರ್ಷದ ಹಿಂದೆ ಪ್ರಾರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ ಇಂದು ಹೆಮ್ಮರವಾಗಿ ಬೆಳೆದಿದೆ. ಪ್ರಾರಂಭದಲ್ಲಿ ಕನ್ನಡದ 5 ಜನ ದಿಗ್ಗಜರು ಒಟ್ಟಾಗಿ ಪ್ರಾರಂಭಿಸಿದ ಕ.ಸಾಪದಲ್ಲಿ ಇಂದು ಲಕ್ಷಾಂತರ ಜನರು ಸದಸ್ಯರಾಗಿದ್ದಾರೆ. ರಾಜ್ಯಾದ್ಯಂತ ಕಸಾಪ ಉತ್ತಮ ಕಾರ್ಯಕ್ರಮ ನಡೆಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಸಾಪ ಮಹಿಳಾ ಘಟಕ ಪ್ರಾರಂಭವಾಗಿದ್ದು ಎನ್.ಆರ್.ಪುರ ಕಸಾಪ ಮಹಿಳಾ ಘಟಕ ಉತ್ತಮ ಕಾರ್ಯಕ್ರಮ ನಡೆಸುತ್ತಿದ್ದು ಜಿಲ್ಲೆಯಲ್ಲೇ ಉತ್ತಮ ಹೆಸರು ಮಾಡಿದೆ. ಇಂದು ತಾಯಂದಿರ ದಿನಾಚರಣೆ ಹಾಗೂ ಗುರುಗಳಿಗೆ ನಮಿಸುವ ಕಾರ್ಯಕ್ರಮ ಒಟ್ಟಾಗಿ ನಡೆಸುತ್ತಿರುವುದು ಸಕಾಲಿಕವಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ ಮಾತನಾಡಿ,ತಾಯಂದಿರು ಹಾಗೂ ಪಾಠ ಹೇಳಿ ಕೊಟ್ಟ ಗುರುಗಳು ಮಕ್ಕಳಿಗೆ ಎರಡು ಕಣ್ಣುಗಳಿದ್ದಂತೆ.ತಾಯಂದಿರ ದಿನ ಎಂದರೆ ಹೆಮ್ಮೆ ಪಡುವ ದಿನವಾಗಿದೆ. ಕುಟುಂಭದ ನಿರ್ವಹಣೆಯಲ್ಲಿ ತಾಯಿಂದರ ಪಾತ್ರ ಅತಿ ದೊಡ್ಡದಾಗಿದೆ. ಶಿಕ್ಷಕರು ಮುಂದಿನ ಭವಿಷ್ಯದ ಪ್ರಜೆಗಳಾದ ಮಕ್ಕಳನ್ನು ತಿದ್ದಿ, ತೀಡಿ ಸುಸಂಸ್ಕೃತರನ್ನಾಗಿ ಮಾಡಬೇಕಾಗಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಗುರು ಹಾಗೂ ಶಿಷ್ಯರ ಸಂಬಂಧ ಕುಸಿಯುತ್ತಿದೆ. ಹಿಂದೆ ಮಕ್ಕಳು ಶಿಕ್ಷಕರಿಗೆ ಗೌರವ ನೀಡುತ್ತಿದ್ದರು. ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿ ಅವರನ್ನು ಭಾರತ ದೇಶದ ಸತ್ರೃಜೆಯನ್ನಾಗಿ ಮಾಡುವ ಜವಬ್ದಾರಿ ತಾಯಿ ಹಾಗೂ ಶಿಕ್ಷಕರ ಮೇಲಿದೆ. ಆದ್ದರಿಂದ ತಾಯಂದಿರ ದಿನಾಚರಣೆ ಹಾಗೂ ಗುರುಗಳನ್ನು ಗೌರವಿಸುವ ಕಾರ್ಯಕ್ರಮ ಒಟ್ಟಾಗಿಸಿದ್ದೇವೆ ಎಂದರು.ಅತಿಥಿಯಾಗಿದ್ದ ನಿವೃತ್ತ ಶಿಕ್ಷಕಿ ಬಿ.ಜಯಂತಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಹಿರಿಯ ನಿವೃತ್ತ ಶಿಕ್ಷಕರಾದ ವಿ.ಎಸ್.ಕೃಷ್ಣಭಟ್,ಕೆ.ಕೆ.ಲಕ್ಷ್ಮೀರಾವ್,ಎನ್.ಎಸ್.ಕಮಲಮ್ಮ ಹಾಗೂ ಎಂ.ಜಯಮ್ಮ ಅವರನ್ನು ಸನ್ಮಾನಿಸಲಾಯಿತು. ಅತಿಥಿಯಾಗಿದ್ದ ಅರವಿಂದ ಸೋಮಯಾಜಿ ಹಾಗೂ ಬಿ.ಜಯಂತಿ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಒಂದೊಂದು ಕನ್ನಡ ಪುಸ್ತಕವನ್ನು ನೀಡಲಾಯಿತು. ವಸಂತಿ ಸ್ವಾಗತಿಸಿದರು. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.ಭಾನುಮತಿ ವಂದಿಸಿದರು.