ಸಾರಾಂಶ
ಕನ್ನಡಪ್ರಭ ವಾರ್ತೆ ದೇವನಹಳ್ಳಿ
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಪೋಷಕರು ಉನ್ನತ ವಿದ್ಯಾಭ್ಯಾಸ ಕೊಡಿಸಿದರೆ ಅದು ನೀವು ಅವರಿಗೆ ಕೊಡುವ ಆಸ್ತಿ. ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.ದೇವನಹಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಅರುಂಧತಿ ಸೇವಾ ಸಂಸ್ಥೆ ವತಿಯಿಂದ ೧೩ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರುಂಧತಿ ಸಂಸ್ಥೆಯವರು ತಾಲೂಕಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ೪೫೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಸಂತಸ ತಂದಿದ್ದು, ಈ ಸಂಸ್ಥೆಗೆ ನಾನು ಧನ್ಯವಾದ ತಿಳಿಸುತ್ತೇನೆ.
ಸಮಾಜದಲ್ಲಿ ನಾಗರಿಕರು ಗಲಾಟೆಗಳನ್ನು ಮಾಡಿಕೊಳ್ಳುವುದರಿಂದ ಏನು ಗಳಿಸಲು ಸಾಧ್ಯವಿಲ್ಲ, ಅದೇ ಪ್ರೀತಿ, ವಿಶ್ವಾಸದಿಂದ ಹೋದಾಗ ಹೆಚ್ಚಿನ ಲಾಭ ಪಡೆಯಲು ಸಹಕಾರಿಯಾಗುತ್ತದೆ. ತಾವು ವಿನಃ ಕಾರಣ ಜಮೀನುಗಳಿಂದಾಗಿ ದಾವೆಗಳನ್ನು ಹಾಕಿಕೊಳ್ಳುವುದರಿಂದ ಏನು ಪ್ರಯೋಜನವಿಲ್ಲ, ತಾವು ಪ್ರೀತಿ- ವಾತ್ಸಲ್ಯ ದಿಂದ ಅಣ್ಣ- ತಮ್ಮಂದಿರಂತೆ ಜೀವನ ಸಾಗಿಸಬೇಕು ಮತ್ತು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ಕೊಡಿಸುವಂತೆ ಮನವಿ ಮಾಡಿದರು.ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿ.ಶಾಂತಕುಮಾರ್ ಮಾತನಾಡಿ, ಇಲ್ಲಿ ನಿಮಗೆ ನೀಡುತ್ತಿರುವ ಪ್ರಶಸ್ತಿ ಪತ್ರ ಮತ್ತು ಧನ ಸಹಾಯ ದೊಡ್ಡದಲ್ಲಾ, ಮುಂದಿನ ದಿನಗಳಲ್ಲಿ ನಿಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ದೇಶಕ್ಕೆ ದೊಡ್ಡ ಕೊಡುಗೆ ನೀಡಬೇಕು, ನಿಮ್ಮ ಜವಾಬ್ದಾರಿ ಅರಿತು ಸತ್ಪ್ರಜೆಗಳಾಗಿ ಮತ್ತು ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಗಮನಹರಿಸಿ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡಲು ನಾನು ಸದಾ ಸಿದ್ಧನಿದ್ದೇನೆ, ಯಾರಿಗಾದರೂ ಶೈಕ್ಷಣಿಕವಾಗಿ ಸಹಾಯ ಬೇಕೆಂದರೆ ನನ್ನನ್ನು ಸಂಪರ್ಕಿಸಿ ಎಂದರು.
ಅರುಂಧತಿ ಸೇವಾಸಂಸ್ಥೆಯ ಅಧ್ಯಕ್ಷ ಜಾಲಿಗೆ ಮುನಿರಾಜು ಮಾತನಾಡಿ, ನಮ್ಮ ಸಂಸ್ಥೆ ಅನೇಕ ದಾನಿಗಳ ಸಹಕಾರ ಪಡೆದು ಕಳೆದ ೧೩ ವರ್ಷಗಳಿಂದ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸುವ ಕೆಲಸ ಮಾಡುತ್ತಿದೆ, ಇದುವರೆಗೂ ೩೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗಿದೆ. ಈ ವರ್ಷ ತಾಲೂಕಿನಲ್ಲಿ ಗರಿಷ್ಠ ಅಂಕಪಡೆದ ೪೫೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗಿದೆ. ಪೋಷಕರು ಸಹ ಮಕ್ಕಳನ್ನು ಶೈಕ್ಷಣಿಕವಾಗಿ ಹುರಿದುಂಬಿಸುವ ಕೆಲಸ ಮಾಡಬೇಕು. ಮಕ್ಕಳೇ ಪೋಷಕರಿಗೆ ಆಸ್ತಿ, ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರದ ಕೆಲಸ ಪಡೆದುಕೊಳ್ಳಬೇಕಾದರೆ ವಿದ್ಯಾರ್ಥಿಗಳು ಹಗಲಿರುಳು ಶ್ರಮಿಸಬೇಕು ಎಂದು ಕರೆ ನೀಡಿದರು.ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್, ಕೃಷಿಕ ಸಮಾಜದ ಅಧ್ಯಕ್ಷ ರವಿಕುಮಾರ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಂಜುನಾಥ್, ಪುರಸಭೆ ಅಧ್ಯಕ್ಷ ಮುನಿಕೃಷ್ಣ, ಉಪಾಧ್ಯಕ್ಷ ಜಿ.ಎ.ರವೀಂದ್ರ, ಹೊಸಕೋಟೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಬ್ಬರಾಜು, ಜೆಡಿಎಸ್ ಉಪಾಧ್ಯಕ್ಷ ಹನುಮಂತಪ್ಪ, ಅರುಂಧತಿ ಸೇವಾಸಂಸ್ಥೆಯ ಗೌರವಾಧ್ಯಕ್ಷ ನರಸಿಂಹಮೂರ್ತಿ, ಮಾಜಿ ಅಧ್ಯಕ್ಷ, ಹಾಲಿ ಖಜಾಂಚಿ ಜಿ.ಎನ್.ವೇಣುಗೋಪಾಲ್, ಕಾರ್ಯದರ್ಶಿ ಕೆ.ಮಂಜುನಾಥ್, ಉಪಾಧ್ಯಕ್ಷ ಸಿ.ಮುನಿಕೃಷ್ಣಪ್ಪ, ಆನಂದ್‌ಕುಮಾರ್, ಕಾರ್ಯದರ್ಶಿ ಅನಿಲ್.ಡಿ.ಎನ್., ಸಹಕಾರ್ಯದರ್ಶಿ ವಿ.ಮುನಿರಾಜು, ನಿರ್ದೇಶಕರಾದ ಅಮರನಾರಾಯಣಪ್ಪ, ಎನ್.ಮುನಿರಾಜಪ್ಪ, ಎಂ.ವೆಂಕಟೇಶ್, ಎಂ.ಹರ್ಷನಾಥ್, ಡಿ.ಮುನಿಕೃಷ್ಣಪ್ಪ, ಎನ್.ವೆಂಕಟಪ್ಪ, ಎನ್.ನರಸಿಂಹಮೂರ್ತಿ, ಸಿ.ನಾಗೇಶ್, ಸಿ.ಶ್ರೀನಿವಾಸ್(ಸೀನಪ್ಪ) ಹಾಗೂ ವಿದ್ಯಾರ್ಥಿಗಳು, ಪೋಷಕರು ಇದ್ದರು.