ಸಾಹಿತ್ಯ, ಸಂಸ್ಕೃತಿ ಬಗ್ಗೆ ಮಕ್ಕಳಿಗೆ ಅಭಿರುಚಿ ಇರಲಿ: ರವಿಚಂದ್ರ

| Published : Mar 03 2024, 01:33 AM IST

ಸಾರಾಂಶ

ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ನಗರದಲ್ಲಿ ಮಕ್ಕಳ ಹಬ್ಬ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಕ್ಕಳ ಪ್ರತಿಭೆ ಅನಾವರಣಕ್ಕೆ ‘ಮಕ್ಕಳ ಹಬ್ಬ’ ಸೂಕ್ತ ವೇದಿಕೆಯಾಗಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ತಿಳಿಸಿದರು.

ನಗರದ ಜಿಲ್ಲಾ ಬಾಲಭವನದಲ್ಲಿ ಶುಕ್ರವಾರ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಮಕ್ಕಳ ಹಬ್ಬ-2024 ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳನ್ನು ಅಂಕಗಳ ಆಧಾರದ ಮೇಲೆ ಅಳೆಯದೆ ಅವರಲ್ಲಿನ ಸುಪ್ತ ಪ್ರತಿಭೆ ಗುರುತಿಸಿ, ಸೂಕ್ತ ವೇದಿಕೆ ಒದಗಿಸಿ ಕೊಟ್ಟು ಅವರ ಕನಸುಗಳಿಗೆ ಬಣ್ಣ ತುಂಬಿದಾಗ ಅವರಿಂದ ಉತ್ತಮ ಫಲಿತಾಂಶ ಪಡೆಯ ಬಹುದು. ಪಾಠ, ಪ್ರವಚನದ ಜೊತೆಗೆ ಅವರಲ್ಲಿ ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಪರಿಸರ ಪ್ರಜ್ಞೆಯ ಬಗ್ಗೆ ಅಭಿರುಚಿ ಬೆಳೆಸಬೇಕು. ಹಿಂದೆ ಮನೆಗಳಲ್ಲಿ ನಮ್ಮ ಹಿರಿಯರು ಮಕ್ಕಳನ್ನೇ ಕೂಡಿಸಿಕೊಂಡು ಭಕ್ತಿ ಗೀತೆ, ಜಾನಪದ, ಸೋಬಾನೆ, ಕಿರು ಕಥೆಗಳನ್ನು ರಸವತ್ತಾಗಿ ಹೇಳುವ ಮೂಲಕ ಅವರ ಮನಸ್ಸು ಉಲ್ಲಾಸಗೊಳಿಸುತ್ತಿದ್ದರು. ಇಂದು ಎಲ್ಲರ ಮನೆಯಲ್ಲೂ ಒತ್ತಡದ ಬದುಕು, ಬಿಡುವಿಲ್ಲದಂತೆ ಸಮಯ ಸವೆಸುತಿದ್ದೇವೆ. ಇದರ ಪರಿಣಾಮ ನಮ್ಮ ಮಕ್ಕಳಿಗೆ ಟಿ.ವಿ ಮತ್ತು ಮೊಬೈಲ್ ಆಪ್ತವಾಗಲು ಕಾರಣವಾಗಿದ್ದು, ಅಂತಹ ವಾತಾವರಣದಿಂದ ಮಕ್ಕಳನ್ನು ಹೊರತರಲು ‘ಮಕ್ಕಳ ಹಬ್ಬ’ ದಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ ಮಾತನಾಡಿ, ಮಕ್ಕಳ ಹಬ್ಬದಲ್ಲಿ ಮಕ್ಕಳು ನೀಡಿದ ಜಾನಪದ ನೃತ್ಯ, ಕವ್ವಾಲಿ, ಕೋಲಾಟ, ದೇಶಭಕ್ತಿಗಳ ಗಾಯನ, ಚಿತ್ರಕಲೆ, ಕ್ಲೇಮಾಡಲಿಂಗ್‌ನಲ್ಲಿ ಮಕ್ಕಳು ಸಂತಸದ ಚಿಲಿಮೆಯಾಗಿ ಹೊರಹೊಮ್ಮಿದ್ದಾರೆ. ಇಂತಹ ಮಕ್ಕಳಿಗೆ ಪ್ರೋತ್ಸಾಹ, ಬೆಂಬಲ ನೀಡಿದರೆ ಮುಂದೆ ಬಹುದೊಡ್ಡ ಕಲಾವಿದರಾಗುವ ಅವಕಾಶಗಳು ದೊರಕುತ್ತದೆ. ಜಿಲ್ಲಾ ಬಾಲಭವನದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ದೊರೆತಿದ್ದು ಇಲಾಖಾ ನಿಯಮದಂತೆ ಶೀಘ್ರದಲ್ಲೇ ಅಭಿವೃದ್ಧಿಪಡಿಸಲಾಗುವುದೆಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ರಾಜಕುಮಾರ್ ರಾಥೋಡ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಎಂ.ಗುರುಸಿದ್ಧಸ್ವಾಮಿ, ಶಿಕ್ಷಣ ಸಂಯೋಜಕಿ ಶಿವಲೀಲ, ಚಿತ್ರಕಲಾ ಶಿಕ್ಷಕ ಶಾಂತಯ್ಯ ಪರಡಿಮಠ್ ಇದ್ದರು. ಶಿಕ್ಷಕಿ ಎ.ಆರ್.ಇಂದಿರಾ ಸಿದ್ದೇಶ್ ಪ್ರಾರ್ಥಿಸಿದರೆ, ಎಂ.ಗುರುಸಿದ್ಧಸ್ವಾಮಿ ಸ್ವಾಗತಿಸಿದರು. ಶಿಕ್ಷಕ ಸಿದ್ದೇಶ್ ಕತ್ತಲಗೆರೆ ವಂದಿಸಿದರು.