ಮಕ್ಕಳು ಅಂಕ ತೆಗೆಯುವ ಯಂತ್ರಗಳಾಗದಿರಲಿ: ಗುರುಸಿದ್ದನಗೌಡ

| Published : Feb 11 2024, 01:52 AM IST

ಸಾರಾಂಶ

ಇಂದು ಮಕ್ಕಳು ಅಂಕಗಳನ್ನು ತೆಗೆಯುವ ಯಂತ್ರಗಳಾಗುತ್ತಿರುವುದು ನಮ್ಮ ಸಮಾಜದ ದುರಂತವಾಗಿದೆ. ಶಿಕ್ಷಕರು ಶಾಲೆಗಳಲ್ಲಿ ಸೖಜನಶೀಲ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಗುರುಸಿದ್ದನಗೌಡ ಹೇಳಿದರು.

ಕೂಡ್ಲಿಗಿ: ಮಕ್ಕಳಿಗೆ ಜೀವನಪಾಠ, ಹೊಂದಾಣಿಕೆ ಜೀವನ ಕಲಿಸಿಕೊಡಬೇಕಾದ ಅಗತ್ಯತೆ ಇದೆ ಎಂದು ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಗುರುಸಿದ್ದನಗೌಡ ಹೇಳಿದರು.

ತಾಲೂಕಿನ ಹೊಸಹಳ್ಳಿ ಹಾರಕಬಾವಿ ಸಮೀಪದ ನಿಂಬಳಗೆರೆ ಗ್ರಾಮದಲ್ಲಿ ಶ್ರೀ ಕಲ್ಲೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಮಕ್ಕಳು ಅಂಕಗಳನ್ನು ತೆಗೆಯುವ ಯಂತ್ರಗಳಾಗುತ್ತಿರುವುದು ನಮ್ಮ ಸಮಾಜದ ದುರಂತವಾಗಿದೆ. ಶಿಕ್ಷಕರು ಶಾಲೆಗಳಲ್ಲಿ ಸೖಜನಶೀಲ ಶಿಕ್ಷಣ ನೀಡಲು ಮುಂದಾಗಬೇಕು. ಇದಕ್ಕೆ ಪೋಷಕರು ಸಹಕಾರ ನೀಡಿದಾಗ ಮಾತ್ರ ನಮ್ಮ ಮಕ್ಕಳು ಭವಿಷ್ಯತ್ತಿನಲ್ಲಿ ಉತ್ತಮ ವ್ಯಕ್ತಿತ್ವ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮಕ್ಕಳು ಸ್ಥಳೀಯ ಇತಿಹಾಸ, ಪರಂಪರೆ, ಆಚರಣೆಗಳನ್ನು ತಿಳಿದುಕೊಳ್ಳಬೇಕಾದ ವಾತಾವರಣವನ್ನು ಶಾಲೆಗಳು ನಿರ್ಮಾಣವಾಗಬೇಕು. ಈ ಮೂಲಕ ಶಿಕ್ಷಣದ ಪ್ರಮುಖ ಧ್ಯೇಯವನ್ನು ಸಾಧಿಸಬೇಕು ಎಂದರು. ಶಿಕ್ಷಕರು ಸಹ ನಿರಂತರ ಕಲಿಕೆಯಲ್ಲಿ ತೊಡಗುವ ಮೂಲಕ ಮಕ್ಕಳಿಗೆ ಪಠ್ಯದಾಚೆ ಹೊಸದನ್ನು ಕಲಿಸಲು ಉತ್ಸುಕರಾಗಬೇಕು. ಆಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದರು.

ಶ್ರೀ ಕಲ್ಲೇಶ್ವರ ಸ್ವಾಮಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಸ್. ವೀರಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಶಾಲೆಗಳು ಪಟ್ಟಣದ ಶಾಲೆಗಳಂತೆ ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಹಳ್ಳಿಗಳಲ್ಲಿಯೇ ಗುಣಮಟ್ಟದ ಶಿಕ್ಷಣ ದೊರೆತರೆ ಮಕ್ಕಳು ಪಟ್ಟಣಕ್ಕೆ ಶಿಕ್ಷಣ ಕಲಿಯಲು ವಲಸೆ ಹೋಗುವುದನ್ನು ತಪ್ಪಿಸಿದಂತಾಗುತ್ತದೆ ಎಂದರು.

ಗ್ರಾಪಂ ಉಪಾಧ್ಯಕ್ಷೆ ಮಂಗಳಮ್ಮ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎನ್.ಟಿ. ಮಲ್ಲಿಕಾರ್ಜುನಗೌಡ, ಉಪಾಧ್ಯಕ್ಷ ಹನುಮಂತಪ್ಪ, ಮಾಜಿ ಅಧ್ಯಕ್ಷ ಎನ್.ಜಿ. ಚನ್ನಬಸವನಗೌಡ, ಗ್ರಾಮದ ಯುವ ಮುಖಂಡರಾದ ಎಂ.ಜಿ. ರಾಜೇಂದ್ರಗೌಡ, ಎ. ಅನ್ವರ್ ಸಾಬ್, ಮಲ್ಲಪ್ಪ ಕ್ಯಾಸನಹಳ್ಳಿ, ಶಾಲೆಯ ಮುಖ್ಯಶಿಕ್ಷಕಿ ಕೆ. ಶಿವಲೀಲಾ, ಸಹಶಿಕ್ಷಕರಾದ ಕೆ. ಮಂಜುನಾಥ, ಎಂ. ಪರಶುರಾಮ್, ಜೆ. ಪರಿಮಳಾ, ಜೆ. ವೀಣಾ ಉಪಸ್ಥಿತರಿದ್ದರು. ಕೆ. ಸುಪ್ರಿತಾ, ಪಲ್ಲವಿ ಪ್ರಾರ್ಥಿಸಿದರು. ಶಿಕ್ಷಕರಾದ ಕೆ. ನಾಗರಾಜ, ಎಸ್. ದೊಡ್ಡಬಸಪ್ಪ ಕಾರ್ಯಕ್ರಮ ನಿರೂಪಿಸಿದರು. ಎಸ್. ರೇಖಾ ವಂದಿಸಿದರು.