ಮಕ್ಕಳು ಮೊಬೈಲ್‌, ಪ್ರೀತಿ, ಪ್ರೇಮದ ವ್ಯಾಮೋಹಕ್ಕೆ ಬೀಳದಿರಿ

| Published : Jan 12 2025, 01:16 AM IST

ಸಾರಾಂಶ

ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಮೊಬೈಲ್‌ ವ್ಯಾಮೋಹಕ್ಕೆ ಗುಡ್‌ ಬೈ ಹೇಳಬೇಕು. ಆಗ ಸುಂದರ ಜೀವನ ರೂಪಿಸಿಕೊಳ್ಳಲು ಸಾಧ್ಯ. ಮಧುಗಿರಿ ತಾಲೂಕಿನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚು ನಡೆಯುತ್ತಿರುವುದು ಆತಂಕಕಾರಿ ವಿಚಾರ ಎಂದು ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಮಕ್ಕಳು ಮೊಬೈಲ್‌ ಮತ್ತು ಪ್ರೀತಿ, ಪ್ರೇಮದ ವ್ಯಾಮೋಹಕ್ಕೆ ಬಿದ್ದು ಸಮಾಜದಲ್ಲಿ ತಪ್ಪು ಹೆಜ್ಜೆ ಇಡುವಂತಾಗಿದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನ ಹರಿಸಿ ಸುಂದರ ಜೀವನ ಹಾಳು ಮಾಡಿಕೊಳ್ಳುವುದನ್ನು ತಪ್ಪಿಸುವ ಮಹತ್ತರ ಜವಾಬ್ದಾರಿ ಹೊಂದಲಿ ಎಂದು ತುಮಕೂರು ಸರ್ಕಾರಿ ಅಭಿಯೋಜಕಿ ಆಶಾ ಕರೆ ನೀಡಿದರು.

ತಾಲೂಕಿನ ಪುರವರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್‌ ಹೋಬಳಿ ಘಟಕದಿಂದ ನಡೆದ ಪೋಕ್ಸೋ ಕಾಯ್ದೆ ಹಾಗೂ ಪೌರ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಮೊಬೈಲ್‌ ವ್ಯಾಮೋಹಕ್ಕೆ ಗುಡ್‌ ಬೈ ಹೇಳಬೇಕು. ಆಗ ಸುಂದರ ಜೀವನ ರೂಪಿಸಿಕೊಳ್ಳಲು ಸಾಧ್ಯ. ಮಧುಗಿರಿ ತಾಲೂಕಿನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚು ನಡೆಯುತ್ತಿರುವುದು ಆತಂಕಕಾರಿ ವಿಚಾರ ಎಂದು ಕಳವಳ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಜೀವನದ ಬಗ್ಗೆ ಗುರಿ ಹೊಂದಿರಬೇಕು. ತಮಗೆ ಅರಿವಿಲ್ಲದೆ ಮೊಬೈಲ್ ಮತ್ತು ಪ್ರೀತಿ, ಪ್ರೇಮದ ವ್ಯಾಮೋಹಕ್ಕೆ ಬಿದ್ದು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದೀರಿ, ಅದು ಆಗಬಾರದು, ನಿಮ್ಮ ತಂದೆ- ತಾಯಿ, ಕುಟುಂಬ ಮತ್ತು ಗಿಡ- ಮರಗಳನ್ನು ಪ್ರೀತಿಸುವುದು ಹಾಗೂ ತಮ್ಮ ಪೋಷಕರು ಕಂಡ ಕನಸು ಈಡೇರಿಸುವುದೇ ನೈಜ ಪ್ರೀತಿ, ಪ್ರೇಮ. ತಾವು ಚನ್ನಾಗಿ ಓದಿದರೆ ನಿಮಗೆ ಸರ್ಕಾರಿ ಕೆಲಸವೇನೂ ರಾಜ್ಯದ ಪ್ರಮುಖ ನಗರಗಳಲ್ಲಿರುವ ಪ್ರಸಿದ್ಧ ಕಂಪನಿಗಳಲ್ಲಿ ಒಳ್ಳೆಯ ಅವಕಾಶಗಳೇ ದೊರೆಯುತ್ತವೆ. ತಮಗೆ ಯಾರಿಂದಲಾದರೂ ಅಥವಾ ಇತರೆ ಏನೇ ಸಮಸ್ಯೆಗಳಿದ್ದರೂ ನಿಮ್ಮ ಶಾಲೆಯಲ್ಲಿರುವ ಸಲಹಾ ಪೆಟ್ಟಿಗೆಯಲ್ಲಿ ಕಾಗದದ ಮೂಲಕ ವಿಷಯ ಬರೆದರೆ ಸಾಕು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಕಠಿಣ ಕಾನೂನು ಜಾರಿಯಲ್ಲಿದೆ. ಮಕ್ಕಳು ಹಾಗೂ ಪೋಷಕರು ಅಗತ್ಯ ಬಿದ್ದಾಗ ಧೈರ್ಯವಾಗಿ ಇವುಗಳನ್ನು ಬಳಸಿಕೊಳ್ಳಿ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಿ.ಎಸ್‌.ಮುನೀಂದ್ರ ಕುಮಾರ್‌ ಮಾತನಾಡಿ, ವಿದ್ಯಾರ್ಥಿಗಳು ಹದಿಹರೆಯದರಲ್ಲಿ ಆಕರ್ಷಣೆಗೆ ಒಳಗಾಗದೇ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಸನ್ಮಾರ್ಗದತ್ತ ಸಾಗಬೇಕು ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್‌.ಹನುಮಂತರಾಯಪ್ಪ ಮಾತನಾಡಿ, ಶಾಲೆಗಳಲ್ಲಿ ದೌರ್ಜನ್ಯಕ್ಕೆ ಒಳಗಾಗುವ ಮಕ್ಕಳಿಗೆ ರಕ್ಷಣಾ ಸಮಿತಿ ಮತ್ತು ಪೋಷಕರ ಸಮಿತಿಗಳಿದ್ದು, ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿ ರಕ್ಷಣೆ ನೀಡಬೇಕು ಎಂದು ತಿಳಿಸಿ, ಪ್ರತಿ ಶಾಲೆಗಳಲ್ಲೂ ಸಲಹಾ ಪೆಟ್ಟಿಗೆ ಇಡಲು ಸೂಚಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷೆ ಸಹನಾ ನಾಗೇಶ್‌ ,ಹೋಬಳಿ ಘಟಕದ ಅಧ್ಯಕ್ಷ ರಂಗಸ್ವಾಮಿ, ಗಂಗಾಧರ್‌ ರೆಡ್ಡಿಹಳ್ಳಿ , ಕಾರ್ಯದರ್ಶಿ ಗಂಕಾರನಹಳ್ಳಿ ರಘು, ಕೆ.ಎನ್‌.ರಾಮು, ಮುಖ್ಯ ಶಿಕ್ಷಕ ಸಚ್ಚಿದಾನಂದಮೂರ್ತಿ, ಪ್ರಾಂಶುಪಾಲ ತಮ್ಮಯ್ಯ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಲತಾ, ಎಸ್‌ಡಿಎಂಸಿ ಬ್ಯಾಲ್ಯ ವರದರಾಜು, ಎಸ್‌ಡಿಎಂಸಿ ಅಧ್ಯಕ್ಷ ರಾಜಶೇಖರ್‌ ,ಸಿಆರ್‌ಪಿಗಳು ಹಾಗೂ ಸಹ ಶಿಕ್ಷಕರು ಇದ್ದರು.