ಸಾರಾಂಶ
ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಕೆಇಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ಮುಕ್ತ ಕರ್ನಾಟಕ ಅಭಿಯಾನ ನಡೆಯಿತು. ಮಾದಕ ವಸ್ತುಗಳ ಮುಕ್ತ ಅಭಿಯಾನ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ನರಗುಂದ: ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಇಂತಹ ದುಶ್ಚಟಗಳಿಗೆ ಬಲಿಯಾಗದಂತೆ ಅವರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.
ತಾಲೂಕಿನ ಕೊಣ್ಣೂರು ಗ್ರಾಮದ ಕೆಇಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜಿಪಂ, ತಾಪಂ, ಆರೋಗ್ಯ ಇಲಾಖೆ, ಗ್ರಾಪಂ ಹಾಗೂ ಕೆಇಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ನಡೆದ ಮಾದಕ ಮುಕ್ತ ಕರ್ನಾಟಕ ಅಭಿಯಾನದಲ್ಲಿ ಅವರು ಮಾತನಾಡಿದರು. ಇಳಕಲ್ಲಿನ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆಯನ್ನು ರಾಜ್ಯ ಸರ್ಕಾರ ವ್ಯಸನಮುಕ್ತ ದಿನಾಚರಣೆ ಎಂದು ಆಚರಿಸುತ್ತಿದೆ. ಮಹಾಂತ ಶಿವಯೋಗಿಗಳು 1970ರಲ್ಲಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ದೃಢಸಂಕಲ್ಪ ತೊಟ್ಟು, 1974ರಲ್ಲಿ ‘ಮಹಾಂತ ಜೋಳಿಗೆ, ದುಷ್ಚಟಗಳ ಭಿಕ್ಷೆ‘ ಎಂಬ ವಾಕ್ಯದೊಂದಿಗೆ ಆಂದೋಲನ ಆರಂಭಿಸಿದರು ಎಂದರು.ಯುವಕರು ಧೂಮಪಾನ, ಮದ್ಯಪಾನಗಳನ್ನು ಬಿಟ್ಟು ಆರೋಗ್ಯವಂತ ಜೀವನ ಕಟ್ಟಿಕೊಳ್ಳಬೇಕು. ಮೊಬೈಲ್‌ನಿಂದ, ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದು, ಶಿಕ್ಷಣ, ಕ್ರೀಡೆ, ಯೋಗಾಸನ ಅಂತಹ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು, ದೇಶದ ಹಾಗೂ ಸಮಾಜದ ಒಳಿತಿಗಾಗಿ ನಮ್ಮದೆ ಆದ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಎಸ್.ಆರ್. ದಳವಾಯಿ ಮಾತನಾಡಿ, ವಿದ್ಯಾರ್ಥಿಗಳು ಜೀವನ ಬಂಗಾರದ ಜೀವನ, ಇದನ್ನು ಹಾಳು ಮಾಡಿಕೊಳ್ಳಬಾರದು. ಇವತ್ತಿನ ಜೀವನ ಹೇಗೆ ಕಳೆಯುತ್ತಿರೋ ಅದು ಮುಂದಿನ ಜೀವನದ ಭವಿಷ್ಯ ನಿರ್ಧಾರವಾಗಲಿದೆ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ, ನಿಮ್ಮ ಜೀವನ ನಿಮ್ಮ ಕೈಯಲ್ಲಿ, ಮಾದಕ ವಸ್ತುಗಳನ್ನು ಬಿಟ್ಟು ಜೀವನ ರೂಪಿಸಿಕೊಳ್ಳಬೇಕು ಎಂದರು.ಮಾದಕ ವಸ್ತುಗಳ ಬಳಕೆಯಿಂದ ನಮ್ಮ ಮೆದುಳು ಹಾಗೂ ನರಮಂಡಲದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.
ಉಪನ್ಯಾಸಕ ಎ.ಕೆ. ಬಂಡಗಾರವರು ಮಾದಕ ವಸ್ತುಗಳ ಮುಕ್ತ ಅಭಿಯಾನ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮೋಹನಕೃಷ್ಣ, ಕಾಲೇಜ್ ಪ್ರಾಚಾರ್ಯ ಮುಕಣನವರ, ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಆರ್. ಕುಂಬಾರ, ಸಂಜೀವಿನಿ ಯೋಜನೆಯ ಸಮೂಹ ಮೇಲ್ವಿಚಾರಕ ಲಕ್ಷ್ಮಣ ಪೂಜಾರ, ಸಿದ್ಧಪ್ಪ ದೇಸಾಯಿ ಇದ್ದರು.