ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ವಿದ್ಯಾರ್ಥಿನಿಯರು ಆಸಕ್ತಿಗೆ ಅನುಗುಣವಾದ ಕ್ಷೇತ್ರಗಳಲ್ಲಿ ತೊಡಗಿ ಹೊಸ ಚಾಪು ಮೂಡಿಸಬೇಕು ಎಂದು ಚಲನಚಿತ್ರ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಕಿವಿಮಾತು ಹೇಳಿದರು.ನಗರದ ಮಹಿಳಾ ಸರ್ಕಾರಿ (ಸ್ವಾಯತ್ತ) ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿ, ನಾನು ಸಿನಿಮಾ ರಂಗಕ್ಕೆ 16ನೇ ವಯಸ್ಸಿನಲ್ಲೇ ಕಾಲಿಟ್ಟೆ ಇದು ನನ್ನ ಆಸಕ್ತಿದಾಯಕ ಕ್ಷೇತ್ರವಾಗಿತ್ತು. ನೀವು ಯಾವ ಕ್ಷೇತ್ರಕ್ಕೆ ಹೋಗಬೇಕು ಎಂಬುದನ್ನು ಈಗಲೇ ನಿರ್ಧರಿಸಿ ಅದರಲ್ಲಿ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ರಂಗಕರ್ಮಿ ಹಾಗೂ ಹಿರಿಯ ನಟ ಮಂಡ್ಯ ರಮೇಶ್ ಮಾತನಾಡಿ, ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಪೂಜನೀಯ ಸ್ಥಾನವಿದೆ. ಇಂತಹ ನಾಡಿನಲ್ಲಿ ಹೆಣ್ಣು ಭ್ರೂಣ ಹತ್ಯೆಗಳು ನಡೆಯುತ್ತಿರುವುದು ನಿಜಕ್ಕೂ ವಿಷಾದನೀಯ ಎಂದರು.ರಂಗಭೂಮಿ ಕೇವಲ ಮನೋರಂಜನೆಗಲ್ಲ ಅದು ಹೋರಾಟದ ಅಸ್ತ್ರ. ಹೆಣ್ಣು ಮಕ್ಕಳು ಸಮಾಜದಲ್ಲಿ ಅನುಭವಿಸುತ್ತಿರುವ ಅಸಮಾನತೆ, ಸೈಷ್ಣತೆ, ಹೆಣ್ಣಿನ ಮೇಲಿನ ದೌರ್ಜನ್ಯಗಳನ್ನು ನಾಟಕದ ರೂಪದಲ್ಲಿ ಕಟ್ಟಿ ನಾಟಕ ತರಬೇತಿ ಶಿಬಿರಗಳನ್ನು ಮಾಡಿ ಶಾಲಾ ಕಾಲೇಜುಗಳ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿ ಸಮಾಜದ ಕಣ್ಣು ತೆರೆಸುವ ಸಾಧನವಾಗಿದೆ ಎಂದರು.
ಮಂಡ್ಯ ವಿವಿ ಕುಲಪತಿ ಡಾ.ಶಿವಚಿತ್ತಪ್ಪ ಮಾತನಾಡಿ, ಮಂಡ್ಯ ವಿವಿಯಲ್ಲಿ ವೃತ್ತಿಪರ ಕೋರ್ಸ್‌ಗಳಾದ ಎಂಬಿಎ ಮತ್ತು ಎಂಸಿಎ ಸ್ನಾತಕೋತರ ಪದವಿ ಪ್ರಾರಂಭಿಸಲು ಅನುಮತಿ ದೊರೆತಿದೆ ಎಂದರು.ನಂತರ ವಿವಿಧ ಕ್ರೀಡೆಗಳಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಕಾಲೇಜು ಪ್ರಾಂಶುಪಾಲ ಡಾ.ಗುರುರಾಜ್ ಪ್ರಭು.ಕೆ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ನಿಂಗರಾಜು ಎಚ್.ಎಸ್, ಸಾಂಸ್ಕೃತಿಕ ವೇದಿಕೆ ಖಜಾಂಚಿ ಡಾ. ಮಂಗಳಮ್ಮ ಕೆ.ಎಂ, ಕ್ರಿಡಾ ಸಂಚಾಲಕ ಲೋಕೇಶ್ ಕೆ.ಆರ್, ಸ್ನಾತಕ ಮತ್ತು ಸ್ನಾತಕೊತ್ತರ ವಿಭಾಗದ ರಾಷ್ಟೀಯ ಸೇವಾ ಯೋಜನಾ ಅಧಿಕಾರಿ ಘಟಕ -2 ಪುಷ್ಪಲತಾ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಮಾದೇಗೌಡ ಎಂ.ಸ್ಕೌಟ್ಸ್ ಮತ್ತು ಗೈಡ್ಸ್ ರೇರ್ಸ್ ಲೀಡರ್ ರೇಖಾ ಎಂ.ಎಸ್, ಯುವ ರೆಡ್ ಕ್ರಾಸ್ ಘಟಕದ ನವೀನ್ ಎಸ್.ಪತ್ರಾಂಕಿತ ವ್ಯವಸ್ಥಾಪಕರಾದ ರವಿಕಿರಣ್ ಕೆ,ಪಿ ಮತ್ತು ಹೇಮಲತಾ ಎಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಮೂವರು ವಿದ್ಯಾರ್ಥಿನಿಯರಿಗೆ ತಲಾ 1 ಲಕ್ಷ ಪ್ರೋತ್ಸಾಹಧನ: ಪಿ.ರವಿಕುಮಾರ್
ಸರ್ಕಾರಿ ಮಹಿಳಾ ಕಾಲೇಜು (ಸ್ವಯತ್ತ) ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕ ಪಡೆಯುವ ಮೂವರು ವಿದ್ಯಾರ್ಥಿನಿಯರಿಗೆ ತಲಾ 1 ಲಕ್ಷದಂತೆ 3 ಲಕ್ಷ ರು. ಪ್ರೋತ್ಸಾಹಧನ ನೀಡುವುದಾಗಿ ಶಾಸಕ ಪಿ.ರವಿಕುಮಾರ್ ಹೇಳಿದರು.ಮಹಿಳಾ ಸರ್ಕಾರಿ (ಸ್ವಾಯತ್ತ) ಕಾಲೇಜಿನ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾ ಹಾಸ್ಟೆಲ್ ನಿರ್ವಹಣೆಗೆ 1 ಲಕ್ಷ ರು ನೀಡುತ್ತೇನೆ. ಪದವಿ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಅಂತಿಮ ಘಟ್ಟದಲ್ಲಿ ಇದ್ದೀರಿ. ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಒಳ್ಳೆಯ ಹೆಸರು ತರುವಂತೆ ಸಲಹೆ ನೀಡಿದರು.
ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಬೇಕು ಎಂಬ ಸದುದ್ದೇಶದಿಂದ ಉಚಿತವಾಗಿ ಐಎಎಸ್/ ಐಪಿಎಸ್ ತರಬೇತಿಯನ್ನು ಪ್ರಾರಂಭಿಸಲಾಗುವುದು. ಜಿಲ್ಲಾಧಿಕಾರಿಗಳ ಬಳಿ ವಿಶೇಷ ಉಪನ್ಯಾಸ ನೀಡುವಂತೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.