ಸಾರಾಂಶ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ । ಕುಡಿಯುವ ನೀರಿನ ಘಟಕ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವನ್ನು ಮಕ್ಕಳು ಸೂಕ್ತವಾಗಿ ಬಳಸುವ ಮೂಲಕ ಜ್ಞಾನವನ್ನು ಬೆಳೆಸಿಕೊಳ್ಳಬೇಕಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.
ಶನಿವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ₹5 ಲಕ್ಷ ವೆಚ್ಚದ ಕುಡಿಯುವ ನೀರಿನ ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ತಂತ್ರಜ್ಞಾನ ವೇಗವಾಗಿ ಮಂದುವರಿಯುತ್ತಿದ್ದು ಮಕ್ಕಳ ಜ್ಞಾನ ಮಟ್ಟವೂ ಸಹ ಬೆಳೆಯುತ್ತಿದೆ. ಇಂದು ಮೊಬೈಲ್ ಮೂಲಕ ಅಂಗೈಯಲ್ಲೇ ಪ್ರಪಂಚ ಸುತ್ತಬಹುದು. ಇಂತಹ ತಂತ್ರಜ್ಞಾನವನ್ನು ಮಕ್ಕಳು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣ ಅಮೂಲ್ಯ ಹಾಗೆಯೇ ಪ್ರಾಥಮಿಕ ಶಿಕ್ಷಣ ಜೀವನದಲ್ಲಿ ಅತಿ ಮುಖ್ಯವಾದ ಘಟ್ಟವಾಗಿದೆ. ಮುಂದಿನ ಸಮಾಜ ನಿರ್ಮಾಣ ಮಾಡುವವರು ಇಂದಿನ ವಿದ್ಯಾರ್ಥಿಗಳೇ ಆಗಿದ್ದಾರೆ ಅವರಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.ಮಕ್ಕಳು ಗುರು ಹಿರಿಯರಿಗೆ, ಪಾಠ ಮಾಡಿದ ಶಿಕ್ಷಕರಿಗೆ ಗೌರವ ನೀಡಬೇಕು. ತಂದೆ, ತಾಯಿ ಹಾಗೂ ಪೋಷಕರು ಸಹ ಮಕ್ಕಳ ಬೆಳವಣಿಗೆ, ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಹಿರಿಯರ ತಮ್ಮ ಅನುಭವದ ನುಡಿಗಳನ್ನು ಕಿರಿಯರು ಕೇಳಬೇಕು. ಹಿರಿಯರನ್ನು ಎಂದಿಗೂ ತಾತ್ಸಾರದಿಂದ ನೋಡಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ನಾನು ಶಾಸಕನಾದ ಮೇಲೆ ಶೃಂಗೇರಿ ಕ್ಷೇತ್ರದ 3 ತಾಲೂಕುಗಳ ಸರ್ಕಾರಿ ಕಾಲೇಜು ಗಳಿಗೆ ಹಣ ಮಂಜೂರು ಮಾಡಿಸಿದ್ದು ಒಂದೊಂದು ಕಾಲೇಜಿಗೆ ಅಂದಾಜು ₹10 ರಿಂದ ₹12 ಕೋಟಿ ಕಾಮಗಾರಿ ನಡೆದಿದೆ. ನರಸಿಂಹರಾಜಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ₹4.20 ಕೋಟಿ ಮಂಜೂರು ಮಾಡಿಸಿದ್ದೇನೆ. ಇಲ್ಲಿನ ಕಾಲೇಜಿನ ಎಲ್ಲಾ ಬೇಡಿಕೆ ಈಡೇರಿಸಿದ್ದೇನೆ. ಇಂದು ಮಾಹಿತಿ ತಂತ್ರಜ್ಞಾನ ಬೆಳವಣಿಗೆ ವೇಗವಾಗಿ ಆಗುತ್ತಿರುವುದರಿಂದ ಮಕ್ಕಳ ಬುದ್ದಿವಂತಿಕೆ ಬೆಳೆಯುತ್ತಿದೆ. ಇಂದು ಪ್ರತಿಯೊಬ್ಬರಿಗೂ ಶಿಕ್ಷಣದ ಅವಶ್ಯಕತೆ ಇದೆ. ವಿದ್ಯಾರ್ಥಿ ಗಳು ಜಾತ್ಯಾತೀತ ಮನೋಭಾವ ಬೆಳೆಸಿ ಕೊಳ್ಳಬೇಕು.ನಾವು ಭಾರತೀಯರು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ಮುಖ್ಶ ಅತಿಥಿಯಾಗಿದ್ದ ಶಿವಮೊಗ್ಗ ಭದ್ರಾ ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ಮಾತನಾಡಿ, ಶಾಸಕ ಟಿ.ಡಿ.ರಾಜೇಗೌಡರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಎನ್.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದಾರೆ. ಕಾಲೇಜು ಅಭಿವೃದ್ಧಿ ಸಮಿತಿ ಯವರು ಇದನ್ನು ಉಪಯೋಗಿ ಸಿಕೊಂಡು ಎಲ್ಲಾ ಮೂಲಭೂತ ಸೌಕರ್ಯ ಮಾಡಿಸಿ ಕೊಡುತ್ತಿದ್ದಾರೆ.ಮಕ್ಕಳನ್ನು ವಿದ್ಯಾವಂತ ರನ್ನಾಗಿ ಮಾಡುವಲ್ಲಿ ಪೋಷಕರು ತ್ಯಾಗ ಅಪಾರ. ಅವರ ತ್ಯಾಗ ಗಮನಿಸಿ ಉತ್ತಮ ಶಿಕ್ಷಣ ಪಡೆಯಬೇಕು.ಯಾವುದೇ ದುಶ್ಚಟಗಳನ್ನು ಕಲಿಯದೇ ಸೋಲು, ಗೆಲುವುಗಳನ್ನು ಸಮನಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ, ಅತಿಥಿಗಳಾಗಿ ಪಪಂ ಅಧ್ಯಕ್ಷೆ ಜುಬೇದ, ಗಡಿಗೇಶ್ವರ ಗ್ರಾಪಂ ಸದಸ್ಯ ಗೇರ್ ಬೈಲು ನಟರಾಜ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಬಿ.ಎಸ್.ಸುಬ್ರಮಣ್ಯ, ದೇವಂತರಾಜ್, ಕಿರಣ್, ಕಳ್ಳಿಕೊಪ್ಪ ಸುರೇಶ್,ಶಿಲ್ಪ, ಅಶ್ವಲ್ ಇದ್ದರು. ಉಪನ್ಯಾಸಕ ಡಾ.ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.-- ಬಾಕ್ಸ್ --
ಆಡಿಟೋರಿಯಲ್ ನಿರ್ಮಾಣಕ್ಕೆ 1 ಕೋಟಿಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಿಟೋರಿಯಲ್ ನಿರ್ಮಾಣಕ್ಕೆ ಸಚಿವ ಜಾರ್ಜ್ ಕರ್ನಾಟಕ ಪವರ್ ಕಾರ್ಪೋರೇಷನ್ ನ ಸಿಎಸ್ಆರ್ ನಿಂದ ₹1 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ತಿಳಿಸಿದರು.
ಕಳೆದ 7 ವರ್ಷಗಳ ಹಿಂದೆ ಕಾಲೇಜಿನ ನ್ಯಾಕ್ ತಂಡ ಬಂದ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಕೊಠಡಿಗಾಗಿ ₹2 ಕೋಟಿ ಮಂಜೂರು ಮಾಡಿಸಿದ್ದರು. ಈಗ ರಸ್ತೆ ಅಭಿವೃದ್ಧಿಗಾಗಿ ಶಾಸಕರ ವಿಶೇಷ ಅನುದಾನದಡಿ ₹20 ಲಕ್ಷ ಮಂಜೂರು ಮಾಡಿಸಿದ್ದಾರೆ. ಈ ಹಿಂದೆ ಶಾಸಕರು ಕುಡಿವ ನೀರಿನ ಘಟಕಕ್ಕೆ ₹5 ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಈ ಹಿಂದೆ ಕಾಂಪೌಂಡು ನಿರ್ಮಾಣಕ್ಕಾಗಿ ₹50 ಲಕ್ಷ ಬಿಡುಗಡೆ ಮಾಡಿದ್ದರು. ಈಗ ಆಡಿಟೋರಿಯಮ್ ಗೆ ಚರಂಡಿ, ಇಂಟರ್ ಲಾಕ್, ವಿದ್ಯುತ್ ದೀಪಕ್ಕಾಗಿ ₹27.94ಲಕ್ಷ ಬಿಡುಗಡೆ ಮಾಡಿದ್ದಾರೆ ಎಂದರು.- ಬಾಕ್ಸ್- ಹುಟ್ಟೂರಿನ ನೆನಪಿಗಾಗಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಎನ್.ಆರ್.ಪುರ ಪಟ್ಟಣದ ರಸ್ತೆ ಅಗಲೀಕರಣಕ್ಕಾಗಿ ಸರ್ಕಾರದಿಂದ ₹60 ಕೋಟಿ ಮಂಜೂರು ಮಾಡಿಸಿಕೊಂಡು ಬಂದಿದ್ದು ಭಾನುವಾರ ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯಕ್ಕಾಗಿ ನರಸಿಂಹರಾಜಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.
ಎಂ.ಶ್ರೀನಿವಾಸ್ ಅವರ ಪ್ರಯತ್ನದಿಂದ ಹೊನ್ನೇಕೊಡಿಗೆ ಸಂಪರ್ಕ ಸೇತುವೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ₹ 35 ಕೋಟಿ ಮಂಜೂರು ಮಾಡಿಸಿಕೊಂಡು ಬಂದಿದ್ದು ಸೇತುವೆ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಆ ಸಂಪರ್ಕ ಸೇತುವೆಯ ರಸ್ತೆ ಕಾಮಗಾರಿಗೆ ₹5 ಕೋಟಿ ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ ಎಂದರು.