ಮಕ್ಕಳು ಓದಿನೊಂದಿಗೆ ಸಾಹಿತ್ಯ ಒಲವು ತೋರಿಸಿ: ಅನಂತಶಯನ

| Published : Jul 08 2024, 12:31 AM IST

ಸಾರಾಂಶ

ಸಾಹಿತಿ ದಿ. ಜಿ.ಟಿ. ನಾರಾಯಣ ರಾವ್‌ ಬದುಕು ಬರಹ ಕುರಿತು ಉಪನ್ಯಾಸ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮಕ್ಕಳು ಓದಿನೊಂದಿಗೆ ಸಾಹಿತ್ಯ ಕ್ಷೇತ್ರದತ್ತಲೂ ಒಲವು ತೋರಬೇಕು ಎಂದು ಬಿ.ಜಿ. ಅನಂತಶಯನ ಈ ಸಂದರ್ಭ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಕ್ಕಳು ಓದಿನೊಂದಿಗೆ ಸಾಹಿತ್ಯ ಕ್ಷೇತ್ರದತ್ತಲೂ ಒಲವು ತೋರಬೇಕೆಂದು ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ.ಅನಂತಶಯನ ಹೇಳಿದರು.

ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಅಂಗವಾಗಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಾಹಿತಿ ದಿ. ಜಿ.ಟಿ.ನಾರಾಯಣ ರಾವ್ ಬದುಕು ಬರಹ ಕುರಿತ ಉಪನ್ಯಾಸ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬರಹದಲ್ಲಿ ಕಲಾತ್ಮಕತೆ, ಸೃಜಶೀಲತೆ ಇರುತ್ತದೆ. ಇದೆಲ್ಲ ಇರದಿದ್ದಲ್ಲಿ ಆತನ ಬರಹದಲ್ಲಿ ಭಾವನೆಗಳು ಇರುವದಿಲ್ಲ. ಸುಪ್ತ ಮನಸು ಇದ್ದಲ್ಲಿ ಎಲ್ಲವೂ ಇರುತ್ತದೆ. ನಿಮ್ಮಲ್ಲಿಯೂ ಸುಪ್ತ ಮನಸು ಇದೆ, ನೀವೂ ಕೂಡ ಸಾಹಿತಿಗಳಾಗಬಹುದು. ನಿರಂತರ ಕಲಿಕೆ, ಪ್ರಯತ್ನದಿಂದ ಎಲ್ಲವೂ ಸಾಧ್ಯವಾಗುತ್ತದೆ. ಕಣ್ಣು, ಕಿವಿ ತೆರೆದಿರಬೇಕು, ಆಗ ಸುಪ್ತ ಮನಸು ಜಾಗೃತಗೊಳ್ಳುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಡಿಕೇರಿ ನಗರಸಭಾ ಸದಸ್ಯ ಕೆ.ಎಸ್. ರಮೇಶ್, ಏನಾದರೂ ಸಾಧನೆ ಮಾಡಿದರೆ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ. ವಿದ್ಯಾರ್ಥಿಗಳು ಕೂಡ ಸಾಧನೆ ಮಾಡಬೇಕು. ಈಗಿನಿಂದಲೇ ಸಣ್ಣ ಪುಟ್ಟ ಕವನಗಳನ್ನು ಬರೆಯುತ್ತಾ ಮುಂದೊಂದು ಪುಸ್ತಕವಾಗಿ ಪ್ರಕಟ ಮಾಡಬಹುದು. ಸಾಹಿತ್ಯದತ್ತಲೂ ಒಲವು ತೋರಬೇಕೆಂದು ಹೇಳಿದರು.

ನಾರಾಯಣ ರಾವ್ ಅವರ ಬದುಕು ಬರಹದ ಬಗ್ಗೆ ಉಪನ್ಯಾಸ ನೀಡಿದ ಜಯಲಕ್ಷ್ಮೀ ಶೇಖರ್, ನಾರಾಯಣ ರಾವ್ ಅವರು ಅನೇಕ ಕೃತಿಗಳನ್ನು ರಚನೆ ಮಾಡಿದ್ದು, ಹಲವಷ್ಟು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡವರು. ಅವರ ಬದುಕು ಹಾಗೂ ಕೃತಿಗಳನ್ನು ಗಮನಿಸಿದರೆ ಜೀವನದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ನೋಬೆಲ್ ಪ್ರಶಸ್ತಿ ವಿಜೇತರನ್ನು ಸಂದರ್ಶನ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಒಳಗಾದವರು ನಾರಾಯಣ ರಾವ್ ಎಂದು ಹೇಳಿದರು.

ಪತ್ರಕರ್ತ ಕುಡೆಕಲ್ ಸಂತೋಷ್ ಮಾತನಾಡಿ, ವಿದ್ಯಾರ್ಥಿಗಳು ಓದಿನೊಂದಿಗೆ ಇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಸಾಹಿತ್ಯದಲ್ಲಿ ತೊಡಗಿಸಿಕೊಂಡರೆ ಜ್ಞಾನಾರ್ಜನೆಯೊಂದಿಗೆ ವಿಷಯದ ಗ್ರಹಿಕೆಯಾಗುತ್ತದೆ ಎಂದರು.

ಸಾಹಿತಿ ಕಿಗ್ಗಾಲು ಗಿರೀಶ್ ಮಾತನಾಡಿ, ಕೊಡಗಿನಲ್ಲಿ ಸಾಹಿತ್ಯದ ಅಭಿರುಚಿಯಿಲ್ಲ ಎಂಬ ಮಾತು ಇತ್ತು, ಆದರೆ ಅದು ಸುಳ್ಳು ಎಂಬದಕ್ಕೆ ಇತ್ತೀಚಿನ ದಿನಗಳಲ್ಲಿ ತಿಂಗಳಿಗೆ ಎರಡು, ಮೂರು ಕೃತಿಗಳು ರಚನೆಯಾಗುತ್ತಿರುವದೇ ಸಾಕ್ಷಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ನೇಹ ಸಿರಿ ಬಳಗದ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಕರ್ನಾಟಕದ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಸಾಧನೆ ಮಾಡಿದ, ಶ್ರಮಿಸಿದವರಿಗೆ ಗೌರವ ನೀಡುವುದು, ಅವರನ್ನು ನೆನಪಿಸಿಕೊಳ್ಳುವದರೊಂದಿಗೆ ಅವರ ಬಗ್ಗೆ ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದೊಂದಿಗೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬಳಗದ ಮೂಲಕ ಒಂದು ವರ್ಷದಲ್ಲಿ 50 ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಹೊಂದಿದ್ದು, ಇದು 19ನೇ ಕಾರ್ಯಕ್ರಮವಾಗಿದೆ. ಜಿಲ್ಲಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ನಡೆಸುವದರಿಂದ ಮಹನೀಯರ ಪರಿಚಯವಾಗುವದರೊಂದಿಗೆ ಮಕ್ಕಳಲ್ಲಿ ಸಾಹಿತ್ಯದ ಅರಿವು ಮೂಡುತ್ತದೆ ಎಂದರು.

ಪುಸ್ತಕ ಬಿಡುಗಡೆ: ಕಿಗ್ಗಾಲು ಗಿರಿಶ್ ಬರೆದ ‘ಕಳೆದುಕೊಂಡವನು ಮತ್ತು ಇತರ ಕತೆಗಳು’ ಕೃತಿಯನ್ನು ಬಿ.ಜಿ.ಅನಂತಶಯನ ಬಿಡುಗಡೆ ಮಾಡಿದರು. ಕಾಲೇಜಿನ ಪ್ರಾಂಶುಪಾಲ ವಿಜಯ ಅವರನ್ನು ಬಳಗದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕ ಚಿದಾನಂದ ಸ್ವಾಗತಿಸಿದರು. ಉಪನ್ಯಾಸಕಿ ಪೂರ್ಣಿಮಾ ನಿರೂಪಿಸಿದರು. ಕವಿ ಪಿ.ಎಸ್.ವೈಲೇಶ್ ವಂದಿಸಿದರು.