ಮಗು-ದೇಶದ ಭವಿಷ್ಯ ಕಟ್ಟುವವರು ಶಿಕ್ಷಕರು: ಶಾಸಕ ಕೆ.ಎಸ್.ಆನಂದ್.

| Published : Sep 12 2024, 01:48 AM IST

ಮಗು-ದೇಶದ ಭವಿಷ್ಯ ಕಟ್ಟುವವರು ಶಿಕ್ಷಕರು: ಶಾಸಕ ಕೆ.ಎಸ್.ಆನಂದ್.
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ದೇಶದ ಶಿಕ್ಷಣ ಮತ್ತು ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣನ್ ಬದಲಾವಣೆಗೆ ಸಾಕಷ್ಟು ಶ್ರಮಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಶಿಕ್ಷಕ ವೃಂದ ಸಾಗಬೇಕಿದೆ ಎಂದು ಕ್ಷೇತ್ರ ಶಾಸಕ ಕೆ.ಎಸ್.ಆನಂದ್ ಕರೆ ನೀಡಿದರು.

ಬೀರೂರು ಶೈಕ್ಷಣಿಕ ತಾಲೂಕು ವಲಯದ ಶಿಕ್ಷಕರ ದಿನಾಚರಣೆ । ಸರ್ವಪಲ್ಲಿ ರಾಧಕೃಷ್ಣನ್‌ರ ಆದರ್ಶ ಮೈಗೂಡಿಸಿಕೊಳ್ಳಿ

ಕನ್ನಡಪ್ರಭ ವಾರ್ತೆ ಬೀರೂರು.ದೇಶದ ಶಿಕ್ಷಣ ಮತ್ತು ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣನ್ ಬದಲಾವಣೆಗೆ ಸಾಕಷ್ಟು ಶ್ರಮಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಶಿಕ್ಷಕ ವೃಂದ ಸಾಗಬೇಕಿದೆ ಎಂದು ಕ್ಷೇತ್ರ ಶಾಸಕ ಕೆ.ಎಸ್.ಆನಂದ್ ಕರೆ ನೀಡಿದರು.ಪಟ್ಟಣದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್‌ ಜಯಂತಿ ಅಂಗವಾಗಿ ಬುಧವಾರ ಗುರುಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಬೀರೂರು ಶೈಕ್ಷಣಿಕ ತಾಲೂಕು ವಲಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 63ನೇ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬಹುಪಾಲು ಅನುದಾನ ಬಿಡುಗಡೆ ಮಾಡಿದ್ದರೂ ಸಾಕ್ಷರತೆ ಪ್ರಮಾಣದಲ್ಲಿ ನಾವಿಂದು ಹಿಂದುಳಿದಿದ್ದೇವೆ. ಕೇವಲ 77%ರಷ್ಟು ಮಾತ್ರ ಸಾಕ್ಷರತೆ ಕಂಡಿದ್ದೇವೆ. ಇದು ಮುಂದುವರಿದ ರಾಷ್ಟ್ರ ಗಳಿಗೆ ಹೋಲಿಸಿದರೆ ಮುಂದೊಂದು ದಿನ ದೇಶದ ಅಭಿವೃದ್ಧಿಗೆ ಸಮಸ್ಯೆಯಾಗಲಿದೆ ಎಂದರು.ಸಮಾಜದ ಪರಿವರ್ತನೆ ಶಿಕ್ಷಕರು ಮತ್ತು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಸಮಾನತೆ ಹಾಗೂ ಮಾನವೀಯ ಗುಣ ಕಲಿಸಲು ಅವಕಾಶವಿದೆ. ಸಮಾಜದಲ್ಲಿ ಶಿಕ್ಷಕರಿಗೆ ಉನ್ನತ ಸ್ಥಾನ ಇದ್ದು ಅದನ್ನು ಉಳಿಸಿಕೊಳ್ಳುವ ಹೊಣೆ ನಿಮ್ಮ ಮೇಲಿದೆ. ನೀವು ತಪ್ಪು ಮಾಡಿದರೆ ಇಡೀ ಸಮಾಜದ ವ್ಯವಸ್ಥೆ ಹಾಳಾಗುತ್ತದೆ. ಹಾಗಾಗಿ ಭವಿಷ್ಯದ ಸೃಷ್ಠಿಕರ್ತರ ಬಗ್ಗೆ ನನಗೆ ಅಪಾರ ಗೌರವ. ನಿಮ್ಮಗಳ ಸಮಸ್ಯೆಗೆ ಧನಿಯಾಗುವ ಜೊತೆ, ಕ್ಷೇತ್ರಕ್ಕೆ 5 ಕೆಪಿಎಸ್ಸಿ ನೂತನ ಶಾಲೆಗಳ ಆರಂಭಕ್ಕೆ ಹಾಗೂ ಹೊಸ ಮತ್ತು ಶಾಲಾ ಕಟ್ಟಡ ದುರಸ್ತಿಗೆ ಹೆಚ್ಚಿನ ಅನುದಾನ ತರುವ ಮೂಲಕ ನಿಮ್ಮ ಜೊತೆ ಸದಾ ಇರುತ್ತೇನೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ನಿಮ್ಮಗಳ ಹೋರಾಟ ಮನಗಂಡು ರಾಜ್ಯದಲ್ಲಿ ಪಂಚಗ್ಯಾರಂಟಿ ನೀಡಿದ್ದರು. 7ನೇ ವೇತನ ಆಯೋಗವನ್ನು ಮಂಜೂರು ಮಾಡಿ ಶಿಕ್ಷಕರ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಮಾತನಾಡಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಿಗೆ ತಮ್ಮ ಜನ್ಮದಿನ ಮೀಸಲಿಟ್ಟು ಗುರುಸ್ಥಾನದ ಮಹತ್ವ ಉಳಿಸಿ ಬೆಳೆಸಿಕೊಂಡು ಬರುವಲ್ಲಿ ನೀಡಿರುವ ಕೊಡುಗೆ ನಮ್ಮ ವೃತ್ತಿಪಾವಿತ್ರ್ಯದ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರತಿಯೊಬ್ಬ ಮಗುವಿಗೆ ಹುಟ್ಟುವ ಕನಸನ್ನು ನನಸು ಮಾಡುವವರು ಶಿಕ್ಷಕರು. ಹಾಗಾಗಿ ಶಿಕ್ಷಕರಲ್ಲಿ ತಾಳ್ಮೆ ಮತ್ತು ಸಮಯ ಪಾಲನೆ ಅತ್ಯವಶ್ಯಕ ಎಂದರು.ಪುರಸಭೆ ಅಧ್ಯಕ್ಷೆ ಟಿ.ಎಂ.ವನಿತಮಧು ಮಾತನಾಡಿ, ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ತರ. ಮಕ್ಕಳ ಮೇಲೆ ಶಿಕ್ಷಕರು ಹೆಚ್ಚಿನ ಪ್ರಭಾವ ಬೀರುತ್ತಾರೆ. ಆ ನಿಟ್ಟಿನಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.ಪುರಸಭೆ ಸದಸ್ಯ ಬಿ.ಆರ್.ಮೋಹನ್ ಕುಮಾರ್ ಮಾತನಾಡಿ, ಅಜ್ಞಾನದಿಂದ ಸುಜ್ಞಾನದೆಡೆಗೆ , ಕತ್ತಲೆಯಿಂದ ಬೆಳಕಿನೆಡೆಗೆ ಮಾರ್ಗದರ್ಶನ ತೋರುವುದೇ ಶಿಕ್ಷಕರ ವೃತ್ತಿ. ಮಕ್ಕಳ ಜೀವನ ರೂಪಿಸು ವವರು ಶಿಕ್ಷಕರೆ ಆಗಿರುವುದರಿಂದ ಸಮಾಜದಲ್ಲಿ ಹೆಚ್ಚಿನ ಗೌರವ ಶಿಕ್ಷಕರದ್ದೆ ಆಗಿದೆ ಎಂದರು. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಭೋಜಾನಾಯ್ಕ್ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಪೋಷಕರು ಸರ್ಕಾರಿ ಶಾಲೆ ತ್ಯಜಿಸಿ ಖಾಸಗಿ ಶಾಲೆಗಳತ್ತ ಮುಖಮಾಡುತ್ತಿರುವುದು ಸರ್ಕಾರಿ ಶಾಲೆಗಳ ಅಧಃಪತನಕ್ಕೆ ಕಾರಣ. ಶಿಕ್ಷಕರು ಮಕ್ಕಳಿಗೆ ಮಾನವೀಯ ಮೌಲ್ಯ ನೀಡುವ ಶಿಕ್ಷಣವನ್ನು ಶಾಲೆಗಳಲ್ಲಿ ನೀಡಬೇಕು. ಶಿಕ್ಷಣ ವ್ಯಾಪಾರೀಕರಣ ಆಗಿರುವುದು ನಿಲ್ಲಬೇಕು. ಸಮಾಜದ ಅಭಿವೃದ್ಧಿಗೆ ಅನ್ನದಾನ ಮತ್ತು ವಿದ್ಯಾದಾನ ಮಹತ್ತರ. ವಿದ್ಯಾದಾನ ಮಾಡುವ ಶಿಕ್ಷಕರ ವೃತ್ತಿಗೆ ಹೆಚ್ಚಿನ ಮೌಲ್ಯ ಹೊಂದಿದೆ ಎಂದರು.ಜಿ ಪ್ರಾ.ಶಾ.ಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ.ಜೆ.ಜಗದೀಶ್ ಮಾತನಾಡಿ, ವಲಯದ ಎಲ್ಲಾ ಶಿಕ್ಷಕರ ಸಹಕಾರದಿಂದ ಬೀರೂರು ಶೈಕ್ಷಣಿಕ ವಲಯ ತನ್ನದೇ ಹೆಸರು ಮಾಡಿದ್ದು, ನಿಮ್ಮೆಲ್ಲರ ಸಹಕಾರಕ್ಕೆ ಚಿರಋಣಿ. ಮುಂದೆಯೂ ಇಂತಹ ವಿಶೇಷ ಕಾರ್ಯ ಕ್ರಮಗಳನ್ನು ಜಿಲ್ಲಾ ಮತ್ತು ತಾಲೂಕು ಸಂಘ ನೀಡಲಿದೆ ಎಂದರು.ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಅತಿಹೆಚ್ಚು ಅಂಕಗಳಿಸಿದ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ವೇದಿಕೆಯಲ್ಲಿ ಪುರಸಭಾ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಜಿ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಭೈರೇಗೌಡ, ಬೀರೂರು ವಲಯದ ಅಧ್ಯಕ್ಷೆ ಯಮುನಾ ಮೋಹನ್, ರಾಜಕುಮಾರ್, ಶಶಿಧರ್, ಲೋಕೇಶಪ್ಪ, ಮೋಹನ್ ಕುಮಾರ್, ಬಿಆರ್‌ಸಿ ಶೇಖರಪ್ಪ, ಜಯದೇವಪ್ಪ, ಆರ್.ಟಿ.ಅಶೋಕ್, ಬಸಪ್ಪ, ಮರುಳಸಿದ್ದಪ್ಪ,ಕುಮಾರ್, ನಾಗರಾಜಪ್ಪ, ಶಿವಕುಮಾರ್, ವಸಂತ್, ಮಾದಯ್ಯ, ಜನಾರ್ಧನ್, ಕವಿತಾಪುಟ್ಟಸ್ವಾಮಿ,ಮೈಲಾರಪ್ಪ, ಗೀತಾ.ವಿ, ಮಹೇಶ್ ಸೇರಿದಂತೆ ಮತ್ತಿತರರು ಇದ್ದರು.11 ಬೀರೂರು 1ಬೀರೂರು ಪಟ್ಟಣದ ಸರ್ವಪಲ್ಲಿ ರಾಧಕೃಷ್ಣನ್‌ ಜಯಂತಿ ಅಂಗವಾಗಿ ಬುಧವಾರ ಗುರುಭವನದಲ್ಲಿ 63ನೇ ಶಿಕ್ಷಕರ ದಿನಾಚರಣೆ , ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶಾಸಕ ಕೆ.ಎಸ್. ಆನಂದ್ ಉದ್ಘಾಟಿಸಿದರು. ಬಿಇಒ ರುದ್ರಪ್ಪ, ಪುರಸಭಾಧ್ಯಕ್ಷೆ ವನಿತಾ ಮಧು, ಬಿ.ಜೆ.ಜಗದೀಶ್ ಮತ್ತಿತರಿದ್ದರು.11 ಬೀರೂರು 2ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.