ಸಾರಾಂಶ
ಚಿಣ್ಣರ ಉತ್ಸವದಲ್ಲಿ 10 ಅನಾಥಾಶ್ರಮಗಳ ಸುಮಾರು 450ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಕ್ರೀಡಾ ಸ್ಪರ್ಧೆಗಳೊಂದಿಗೆ ಆರಂಭಗೊಂಡ ಉತ್ಸವ ಬಳಿಕ ಗಾನ, ನೃತ್ಯ, ನಾಟಕ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಂಡಿತು. ಮಕ್ಕಳ ಸಂಭ್ರಮ ಮುಗಿಲು ಮುಟ್ಟಿತ್ತು.
ಕನ್ನಡಪ್ರಭ ವಾರ್ತೆ ಮಂಗಳೂರು
ಹೆತ್ತವರ ಪ್ರೀತಿ ವಂಚಿತ ವಿವಿಧೆಡೆಯ ನೂರಾರು ಮಕ್ಕಳು ನಗರದ ಉರ್ವ ಕೆನರಾ ಹೈಸ್ಕೂಲ್ ಆವರಣದಲ್ಲಿ ಆಡಿ ನಲಿದು ಸಂಭ್ರಮಿಸಿದರು.ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್, ರೋಟರಿ ಮಂಗಳೂರು ಸೆಂಟ್ರಲ್ ಫೌಂಡೇಶನ್ ಮತ್ತು ರೋಟರ್‍ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಆಶ್ರಯದಲ್ಲಿ ನಡೆದ 24ನೇ ವರ್ಷದ ‘ರೋಟರಿ ಚಿಣ್ಣರ ಉತ್ಸವ’ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟವು ಅನಾಥ ಮಕ್ಕಳ ಪಾಲಿಗೆ ವಿಶಿಷ್ಟ ಸಡಗರದ ವಾತಾವರಣ ಕಲ್ಪಿಸಿತ್ತು.
ಚಿಣ್ಣರ ಉತ್ಸವದಲ್ಲಿ 10 ಅನಾಥಾಶ್ರಮಗಳ ಸುಮಾರು 450ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಕ್ರೀಡಾ ಸ್ಪರ್ಧೆಗಳೊಂದಿಗೆ ಆರಂಭಗೊಂಡ ಉತ್ಸವ ಬಳಿಕ ಗಾನ, ನೃತ್ಯ, ನಾಟಕ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಂಡಿತು. ಮಕ್ಕಳ ಸಂಭ್ರಮ ಮುಗಿಲು ಮುಟ್ಟಿತ್ತು.ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ಹೆತ್ತವರ ಪ್ರೀತಿ, ವಾತ್ಸಲ್ಯ ವಂಚಿತ ಮಕ್ಕಳ ಉತ್ಸಾಹಕ್ಕೆ ಸ್ಪಂದಿಸಿ ಪ್ರೋತ್ಸಾಹ ನೀಡುವ ರೋಟರಿ ಸಂಸ್ಥೆಯ ಕಾರ್ಯ ಪ್ರಶಂಸನೀಯ ಎಂದರು.
ರೋಟರಿ 3181 ವಲಯ 2ರ ಸಹಾಯಕ ಗವರ್ನರ್ ಕೃಷ್ಣ ಎಂ. ಹೆಗ್ಡೆ ಮಾತನಾಡಿದರು. ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಅಧ್ಯಕ್ಷ ಬ್ರಾಯಾನ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಂಸ್ಥೆಯ ಪ್ರಮುಖರಾದ ರಾಜೇಶ್ ಸೀತಾರಾಮ, ಅಕ್ಷಯ್ ಬಿ.ರೈ, ಪ್ರೇಮನಾಥ ಕುಡ್ವ, ರಾಜ್ ಗೋಪಾಲ್ ರೈ, ರಾಜೇಶ್ ಶೆಟ್ಟಿ, ಭಾಸ್ಕರ್ ರೈ ಕಟ್ಟ, ಕಾರ್ಯಕ್ರಮ ಸಂಯೋಜಕ ಕರಣ್ ಜೈನ್, ಚಿಣ್ಣರ ಬಣ್ಣ ಉತ್ಸವದ ಚೇರ್ಮನ್ ರೊನಾಲ್ಡ್ ಮೆಂಡೋನ್ಸಾ ಇದ್ದರು.