ಮತದಾನ ಜಾಗೃತಿಗೆ ಬಂದ ಮಕ್ಕಳು

| Published : Apr 23 2024, 12:50 AM IST

ಸಾರಾಂಶ

ಮುಂಡಗೋಡ ಪಟ್ಟಣದ ವಿವೇಕಾನಂದ ನಗರದ ನಿವಾಸಿ ಪ್ರೀತಂಕುಮಾರ್ ಹಾಗೂ ಪ್ರತೀಕ್ ಎಂಬ ಬಾಲಕರೇ ಮತದಾನ ಜಾಗೃತಿ ಅಭಿಯಾನ ಕೈಗೊಂಡಿದ್ದಾರೆ.

ಸಂತೋಷ ದೈವಜ್ಞ

ಮುಂಡಗೋಡ: ಲೋಕಸಭಾ ಚುನಾವಣೆ ಹಿನ್ನೆಲೆ ಪಟ್ಟಣದ ಇಬ್ಬರು ವಿದ್ಯಾರ್ಥಿಗಳು (ಸಹೋದರರು) ವಿಶೇಷ ಶೈಲಿಯಲ್ಲಿ ಮತದಾನ ಜಾಗೃತಿ ಅಭಿಯಾನ ಆರಂಭಿಸಿದ್ದು, ಸಾರ್ವಜನಿಕರ ಗಮನ ಸೆಳೆದಿದ್ದಾರೆ.

ಪಟ್ಟಣದ ವಿವೇಕಾನಂದ ನಗರದ ನಿವಾಸಿ ಪ್ರೀತಂಕುಮಾರ್ ಹಾಗೂ ಪ್ರತೀಕ್ ಎಂಬ ಬಾಲಕರೇ ಮತದಾನ ಜಾಗೃತಿ ಅಭಿಯಾನ ಕೈಗೊಂಡಿದ್ದು, ಪೊಲೀಸ್‌ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಕಾಶೀನಾಥ್ ದಂಪತಿಯ ಮಕ್ಕಳಾದ ಇವರು ಇಲ್ಲಿನ ಲೋಯೊಲಾ ಕೇಂದ್ರೀಯ ವಿದ್ಯಾಲಯದಲ್ಲಿ ಏಳನೇ ತರಗತಿ ಹಾಗೂ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಪ್ರೀತಂಕುಮಾರ್ ಹಾಗೂ ಪ್ರತೀಕ್ ಅವರು ತಮ್ಮ ಟೀ ಶರ್ಟ್ ಹಾಗೂ ಪ್ಯಾಂಟ್ ಮೇಲೆ ಮತದಾರರ ಪ್ರತಿಜ್ಞಾವಿಧಿ, ಮತದಾನ ಜಾಗೃತಿ ಅಭಿಯಾನದ ಸ್ಲೋಗನ್, ಗಿಡ- ಮರಗಳ ಹಾಗೂ ಪರಿಸರದ ಕಾಳಜಿ, ರಕ್ತದಾನದ ಮಹತ್ವ, ಪೊಲೀಸ್ ಇಲಾಖೆಯ ೧೧೨ ವಾಹನದ ಮಹತ್ವ ಹಾಗೂ ಸಂಚಾರ ನಿಯಮದ ಪಾಲನೆ ಹಾಗೂ ಅದರ ಮಹತ್ವ ಸಾರುವ ಸಂದೇಶ ಹಾಕಿಸಿಕೊಂಡಿದ್ದಾರೆ. ಆ ಮೂಲಕ ವಿಭಿನ್ನವಾಗಿ ಮತದಾನ ಜಾಗೃತಿ ಅಭಿಯಾನ ಮಾಡುತ್ತಿದ್ದಾರೆ.

ರಾಷ್ಟ್ರಧ್ವಜ ಪ್ರದರ್ಶಿಸುವ ಮೂಲಕ ಪಟ್ಟಣದ ಬಸ್ ನಿಲ್ದಾಣ ಹಾಗೂ ವಿವಿಧ ಸಾರ್ವಜನಿಕ ಸ್ಥಳದಲ್ಲಿ ಮತದಾನದ ಹಕ್ಕಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ನಿರತರಾಗಿದ್ದಾರೆ. ಪ್ರೀತಂಕುಮಾರ್ ಸ್ಕೇಟಿಂಗ್ ಧರಿಸಿ ಕೈಯಲ್ಲಿ ಮೈಕ್ ಹಿಡಿದುಕೊಂಡು ಲೋಕಸಭಾ ಚುನಾವಣೆ ದೇಶಕ್ಕೆ ಹಬ್ಬವಿದ್ದಂತೆ. ಕಡ್ಡಾಯವಾಗಿ ಮತದಾನ ಮಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಮುಂದಾಗೋಣ ಎಂದು ಹೇಳುತ್ತಾ ಜಾಗೃತಿ ಕರಪತ್ರ ಹಂಚುತ್ತಿದ್ದಾರೆ.

ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಹಾಗೂ ಯಾವುದೇ ಆಸೆ- ಆಮಿಷಗಳಿಗೆ ಒಳಗಾಗದೆ ತಮ್ಮ ಪವಿತ್ರವಾದ ಮತ ಚಲಾಯಿಸಬೇಕು ಮತ್ತು ಮತದಾನ ಶಾಂತ ರೀತಿಯಿಂದ ನಡೆಸಿಕೊಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದಾರೆ. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾಲೂಕಿನ ಹಲವು ಹಳ್ಳಿಗಳಿಗೆ ತೆರಳಿ ಮತದಾನ ಜಾಗೃತಿ ಅಭಿಯಾನ ಮಾಡಿದ್ದರು.

ಅಲ್ಲದೇ ಪ್ರೀತಂ ಕುಮಾರ್ ರಾಷ್ಟ್ರಮಟ್ಟದ ರೋಲರ್ ಹಾಕಿ ಸ್ಕೇಟಿಂಗ್‌ ಕ್ರೀಡಾಪಟು ಆಗಿರುವುದು ಗಮನಾರ್ಹ.