ಶೌಚಾಲಯಕ್ಕೆ ಬಯಲನ್ನೇ ಅವಲಂಬಿಸಿದ ಮಕ್ಕಳು!

| Published : May 24 2024, 12:49 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿವೈಯಕ್ತಿಕ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಲು ಬಯಲು ಶೌಚಮುಕ್ತ ದೇಶ ಮಾಡೋಣ ಎಂದು ಸರ್ಕಾರ ಲಕ್ಷಾಂತರ ರುಪಾಯಿ ಹಣ ಖರ್ಚು ಮಾಡುತ್ತಿದೆ. ಅದರೆ, ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ. ಇದರಿಂದ ಮಕ್ಕಳು ಬಯಲಿನಲ್ಲಿಯೇ ಶೌಚಕ್ಕೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿವೈಯಕ್ತಿಕ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಲು ಬಯಲು ಶೌಚಮುಕ್ತ ದೇಶ ಮಾಡೋಣ ಎಂದು ಸರ್ಕಾರ ಲಕ್ಷಾಂತರ ರುಪಾಯಿ ಹಣ ಖರ್ಚು ಮಾಡುತ್ತಿದೆ. ಅದರೆ, ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ. ಇದರಿಂದ ಮಕ್ಕಳು ಬಯಲಿನಲ್ಲಿಯೇ ಶೌಚಕ್ಕೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದೀಗ ಜಾಲವಾದ ಗ್ರಾಮ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯಗಳೇ ಇಲ್ಲ. ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.

ತಾಲೂಕಿನ ಜಾಲವಾದ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಶೌಚಾಲಯಕ್ಕೆ ಬಯಲನ್ನೇ ಅವಲಂಬಿಸಿದ್ದಾರೆ. ಜಾಲವಾದ ಕ್ಲಸ್ಟರ್ ವ್ಯಾಪ್ತಿಯಲ್ಲಿ ಸಿಆರ್‌ಪಿ ಕೆ.ಎಸ್.ವಾಲಿಕಾರ ಅವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಮಸ್ಯೆ ಕುರಿತು ಮನವಿ ಪತ್ರ ಸಲ್ಲಿಸಿ ಕೈ ತೊಳೆದುಕೊಂಡಿದ್ದಾರೆ. ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ, ವಿದ್ಯಾರ್ಥಿಗಳಿಗೆ ಶೌಚಾಲಯ, ಶಾಲಾ ಕೋಣೆ ದುರಸ್ತಿ, ಕಾಂಪೌಂಡ್, ಬಾಗಿಲು, ಕಿಟಕಿ, ನೆಲ ರಿಪೇರಿ, ನೀರಿನ ವ್ಯವಸ್ಥೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ.

ಈ ಕುರಿತು ಪತ್ರ ಬರೆದರೂ ಕ್ಯಾರೇ ಎನ್ನದ ಅಧಿಕಾರಿಗಳು. ಶಾಲೆಗಳಲ್ಲಿ ಶೌಚಾಲಯವಿಲ್ಲದ್ದರಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಬಯಲಿಗೆ ಹೋಗಬೇಕಿದೆ. ಆದರೆ, ಶಿಕ್ಷಕಿಯರು ಹಾಗೂ ವಿದ್ಯಾರ್ಥಿನಿಯರ ಪಾಡು ಹೇಳತೀರದು.

ಶಾಲೆಗಳಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಲು ಸಾರ್ವಜನಿಕರು ಅಧಿಕಾರಿಗಳಿಗೆ ಹೇಳುತ್ತಿದ್ದಾರೆ. ಶಾಲೆಗಳಿಗೆ ಶೌಚಾಲಯ ಕಟ್ಟಿಸಿ ಕೊಡಲು ಶಾಲೆಯ ಮುಖ್ಯೋಪಾಧ್ಯಾಯರು ಅಧಿಕಾರಿಗಳಿಗೆ ಹಲವಾರು ಬಾರಿ ಪತ್ರ ಬರೆದು, ಅಲೆದಾಡುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಅವಕಾಶ ಇದೆ. ತಾಲೂಕಿನ ಅನೇಕ ಶಾಲೆಗಳಲ್ಲಿ ಶೌಚಾಲಯಗಳ ಕೊರತೆ ಇದ್ದರೂ ನರೇಗಾ ಯೋಜನೆಯಡಿ ಇನ್ನೊಂದು ಶೌಚಾಲಯ ಕಟ್ಟಿಸಲಾಗಿದೆ. ಆದರೆ, ಈ ಶಾಲೆಯಲ್ಲಿ ಮಕ್ಕಳಿಗೆ ಇನ್ನೂ ಸಮರ್ಪಕ ಶೌಚಾಲಯದ ವ್ಯವಸ್ಥೆ ಇಲ್ಲ. ಗ್ರಾಪಂ ಅಧಿಕಾರಿಗಳು ಶೌಚಾಲಯ ಕಟ್ಟಿಸಲು ಮುಂದಾಗುತ್ತಿಲ್ಲ ಯಾಕೇ. ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಶಾಲಾ ಮಕ್ಕಳ ಬಗ್ಗೆ ಅಪಾರ ಗೌರವವಿದೆ. ಹೀಗಾಗಿ ಶಾಲೆಯ ವಿದ್ಯಾರ್ಥಿಗಳ ಕಷ್ಟವನ್ನು ಕೇಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನಾದರೂ ಇಂತಹ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಸರ್ಕಾರಿ ಶಾಲೆಗಳಿಗೆ ಅಗತ್ಯವಾಗಿ ಬೇಕಾಗಿರುವ ಮೂಲ ಸೌಲಭ್ಯಗಳನ್ನು ನೀಡಬೇಕಿದೆ.

----------------------------------

ಕೋಟ್‌

ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿಯೇ ಶೌಚಾಲಯದ ಕೊರತೆ ಇದೆ. ದಿನನಿತ್ಯ ಕಚೇರಿಯ ಕೆಲಸಕ್ಕೆ ಹಲವಾರು ಶಿಕ್ಷಕರು, ಶಿಕ್ಷಕಿಯರು ಬರುತ್ತಾರೆ. ಅವರ ಸಮಸ್ಯೆ ದೇವರೇ ಬಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ನಾಚಿಕೆ ಆಗಬೇಕು. ಇಂಥ ಅಧಿಕಾರಿಗಳಿಂದ ಕ್ಷೇತ್ರದ ಶಾಲೆಗಳ ಸುಧಾರಣೆ ಹೇಗೆ ಸಾಧ್ಯ. ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಮಳೆ ಬಂದರೆ ಸಾಕು ಸೋರುತ್ತವೆ, ಕಾಂಪೌಂಡ್, ಶೌಚಾಲಯ ಹಾಗೂ ಕೋಣೆಗಳ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಮನವಿ ಮಾಡಿದ್ದೇವೆ.

- ಸಿದ್ದು ಪಾಟೀಲ, ಜಾಲವಾದ, ನಾಗರಿಕ

----------------------------------------

ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆಗಳಲ್ಲಿ ಶೌಚಾಲಯ, ಕಾಂಪೌಂಡ್ ನಿರ್ಮಾಣಕ್ಕೆ ಅವಕಾಶ ಇದೆ. ಜಾಲವಾದ ಗ್ರಾಪಂ ಪಿಡಿಒ ಜೊತೆ ಮಾತನಾಡಿ ಒಂದು ವಾರದಲ್ಲಿ ಶಾಲೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ.

-ಸಂಜೀವಕುಮಾರ ಜಿನ್ನುರ, ತಾಪಂ ಇಒ ದೇವರಹಿಪ್ಪರಗಿ.

---------

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆರೋಗ್ಯ ಇಲಾಖೆಯ ಜಾಗದಲ್ಲಿದೆ. ಪ್ರತ್ಯೇಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಜಾಗ, ಬಟ್ಟೆ ಹಾಗೂ ಪುಸ್ತಕಗಳ ಗೋದಾಮು, ಶಿಕ್ಷಕರ ಸಮಸ್ಯೆಗಳ ಕುರಿತು ಮತ್ತು ಮೀಟಿಂಗ್ ಹಾಲ್ ಸೇರಿದಂತೆ ಹಲವಾರು ಮೂಲ ಸೌಕರ್ಯಗಳ ಕುರಿತು ಮೇಲಾಧಿಕಾರಿಗಳ ಹಾಗೂ ಶಾಸಕರಿಗೆ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದೇನೆ. ಜಾಲವಾದ ಗ್ರಾಪಂ ವ್ಯಾಪ್ತಿಯ ಶಾಲೆಗಳ ಶೌಚಾಲಯಗಳ ಕುರಿತು ತಾಪಂ ಇಒ ಅವರಿಗೆ ತಿಳಿಸಲಾಗಿದೆ.

- ಆರೀಫ್ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿಂದಗಿ.