ಸಾರಾಂಶ
ಬಸವನ ಕುಡಚಿಯ ದೇವರಾಜ ಅರಸ್ ಬಡಾವಣೆಯಲ್ಲಿರುವ ನಾಗನೂರು ಶ್ರೀ ಶಿವಬಸವೇಶ್ವರ ಟ್ರಸ್ಟಿನ್ ಶ್ರೀಮತಿ ಹಿರೇಮಠ ವೃದ್ಧಾಶ್ರಮಕ್ಕೆ ಗೋಕಾಕ ಕೆ.ಎಲ್.ಇ ಸಂಸ್ಥೆಯ ಮಹಾದೇವಪ್ಪಣ್ಣ ಮುನವಳ್ಳಿ ಶಾಲೆಯ ವಿದ್ಯಾರ್ಥಿಗಳು ಭೇಟಿ ನೀಡಿ ಹಿರಿಯ ನಾಗರಿಕರೊಂದಿಗೆ ಬೆರೆಯುವ ಮೂಲಕ ಅಜ್ಜ,ಅಜ್ಜಿಯರಿಗೆ ಪ್ರೀತಿ ವಾತ್ಸಲ್ಯ ನೀಡಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬಸವನ ಕುಡಚಿಯ ದೇವರಾಜ ಅರಸ್ ಬಡಾವಣೆಯಲ್ಲಿರುವ ನಾಗನೂರು ಶ್ರೀ ಶಿವಬಸವೇಶ್ವರ ಟ್ರಸ್ಟಿನ್ ಶ್ರೀಮತಿ ಹಿರೇಮಠ ವೃದ್ಧಾಶ್ರಮಕ್ಕೆ ಗೋಕಾಕ ಕೆ.ಎಲ್.ಇ ಸಂಸ್ಥೆಯ ಮಹಾದೇವಪ್ಪಣ್ಣ ಮುನವಳ್ಳಿ ಶಾಲೆಯ ವಿದ್ಯಾರ್ಥಿಗಳು ಭೇಟಿ ನೀಡಿ ಹಿರಿಯ ನಾಗರಿಕರೊಂದಿಗೆ ಬೆರೆಯುವ ಮೂಲಕ ಅಜ್ಜ,ಅಜ್ಜಿಯರಿಗೆ ಪ್ರೀತಿ ವಾತ್ಸಲ್ಯ ನೀಡಿದರು.ಸಂಸ್ಥೆಯ ಚೇರ್ಮನ್ ಡಾ.ಪ್ರಭಾಕರ ಕೋರೆಯವರ ಜನ್ಮದಿನ ನಿಮಿತ್ತ ಹಮ್ಮಿಕೊಂಡ ವಿಶೇಷ ಕಾರ್ಯದಡಿ ವೃದ್ಧಾಶ್ರಮಕ್ಕೆ ಆಗಮಿಸಿದ್ದರು. ಶಾಲೆಯ ಪ್ರಾಚಾರ್ಯೆ ನಂದಾ ಚುನಮುರಿ ಮಾತನಾಡಿ, ಡಾ ಕೋರೆಯವರು ಸಮಾಜಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಅವರ ದಾರಿಯಲ್ಲಿ ನಾವು ಮುನ್ನೆಡೆಯ ಬೇಕಾಗಿದೆ. ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ತುಂಬುವ ಪ್ರಯತ್ನವಾಗಿ ಈ ಭೇಟಿ ಆಯೋಜಿಸಲಾಗಿದೆ ಎಂದರು. ಕೌಟುಂಬಿಕ ಜೀವನದಲ್ಲಿ ಅಜ್ಜ ಅಜ್ಜಿಯರ ಪ್ರೀತಿ ವಾತ್ಸಲ್ಯ ಮಕ್ಕಳಿಗೆ ಅತ್ಯಂತ ಮುಖ್ಯವಾಗಿದ್ದು, ಇಂದಿನ ದಿನಗಳಲ್ಲಿ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳಿಹಿಸುವ ಪ್ರಕರಣ ಹೆಚ್ಚಾಗುತ್ತಿರುವದರಿಂದ ಮಕ್ಕಳು ಹಿರಿಯರ ಪ್ರೀತಿ ಮತ್ತು ಮಾರ್ಗದರ್ಶನದಿಂದ ವಂಚಿತರಾಗುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಆಶ್ರಮಕ್ಕೆ ಅವಶ್ಯಕವಾಗಿರುವ ಧವಸಧಾನ್ಯಗಳನ್ನು ದೇಣಿಗೆ ನೀಡಿದರು. ಸ್ಕೌಟ್ಸ್ ಶಿಕ್ಷಕರಾದ ಪ್ರಕಾಶ ಪಾಟೀಲ, ಕಬ್ ಮಾಸ್ಟರ್ ಚೇತನಾ ಪಾಟೀಲ ಗೈಡ್ಸ್ ಶಿಕ್ಷಕರಾದ ಸುಜಾತಾ ತೊಂಡಿಕಟ್ಟಿ, ನಂದಾದೀಪಾ ಶಿರಾಳಕರ, ಶ್ರೀಶೈಲ್ ಕೊಳದುರ್ಗಿ ಆಗಮಿಸಿದ್ದರು. ಸಂಸ್ಥೆಯ ಸಂಯೋಜಕ ಎಂ.ಎಸ್. ಚೌಗಲಾ ವೃದ್ಧಾಶ್ರಮದ ಕಾರ್ಯಚಟುವಿಕೆಗಳ ಬಗ್ಗೆ ವಿವರಿಸಿದರು. ಪ್ರಾಚಾರ್ಯ ಕಿರಣ ಚೌಗಲಾ ಉಪಸ್ಥಿತರಿದ್ದರು.