ಬೀದಿ ನಾಯಿಗಳ ದಾಳಿಗೆ ನಲುಗಿದ ಮಕ್ಕಳು

| Published : Oct 02 2024, 01:11 AM IST

ಸಾರಾಂಶ

ಕಳೆದೆರಡು ದಿನಗಳಲ್ಲಿ ಮೂವರು ಮಕ್ಕಳು ಸೇರಿದಂತೆ ಬರೋಬ್ಬರಿ 6 ಜನರ ಮೇಲೆ ನಾಯಿ ದಾಳಿ ಮಾಡಿದ್ದು, ತೀವ್ರವಾಗಿ ಗಾಯಗೊಂಡಿರುವ ಮಕ್ಕಳನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

- ಕೊಪ್ಪಳದಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಬೀದಿ ನಾಯಿಗಳ ಹಾವಳಿ

- ಎರಡೇ ದಿನಗಳಲ್ಲಿ ಮಕ್ಕಳು ಸೇರಿ 6 ಜನರ ಮೇಲೆ ದಾಳಿ

- ಬೀದಿ ನಾಯಿಗಳ ನಿಯಂತ್ರಣಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ ಕೊಪ್ಪಳ

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ದಿನ ಒಂದಿಲ್ಲೊಂದು ಕಡೆ ದಾಳಿ ಮಾಡುತ್ತಲೇ ಇರುತ್ತವೆ. ಅದರಲ್ಲೂ ಶಾಲೆಗೆ ತೆರಳುವ ಮಕ್ಕಳು ಇದರಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದೆರಡು ದಿನಗಳಲ್ಲಿ ಮೂವರು ಮಕ್ಕಳು ಸೇರಿದಂತೆ ಬರೋಬ್ಬರಿ 6 ಜನರ ಮೇಲೆ ನಾಯಿ ದಾಳಿ ಮಾಡಿದ್ದು, ತೀವ್ರವಾಗಿ ಗಾಯಗೊಂಡಿರುವ ಮಕ್ಕಳನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ನಗರದ ದಿನ್ನಿಯರ ಓಣಿಯ 14 ವರ್ಷದ ಅಬ್ರಾರ್ ಹಾಗೂ 5 ವರ್ಷ ಫಾರ್ಹನ್ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ 35 ವರ್ಷದ ಮಂಜುನಾಥ ಎಂಬವರ ಮೇಲೆಯೂ ನಾಲ್ಕೈದು ನಾಯಿ ಸೇರಿ ದಾಳಿ ಮಾಡಿವೆ. ಇದು, ಕೇವಲ ಮಂಗಳವಾರ ನಡೆದಿರುವ ಘಟನೆಗಳಾಗಿವೆ. ಸೋಮವಾರವೂ ನಾಲ್ಕಾರು ಕಡೆ ನಾಯಿಗಳ ದಾಳಿ ಮಾಡಿರುವ ವರದಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ.

ಇದು, ಕೇವಲ ಎರಡು ದಿನಗಳ ಕತೆಯಲ್ಲ, ಕಳೆದೊಂದು ತಿಂಗಳಿಂದ ನಿರಂತರವಾಗಿ ನಾಯಿಗಳು ದಾಳಿ ಮಾಡುತ್ತಿವೆ.

ಬೀದಿ ನಾಯಿಗಳು ಮಿತಿಮೀರಿದ್ದು, ಅವುಗಳನ್ನು ನಿಯಂತ್ರಣ ಮಾಡದಿದ್ದರೇ ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಕಷ್ಟವಾಗುತ್ತದೆ. ಹೀಗಾಗಿ, ಈಗಲೇ ಅವುಗಳನ್ನು ನಿಯಂತ್ರಣ ಮಾಡಿ ಎಂದು ಪಾಲಕರು ಆಗ್ರಹಿಸಿದ್ದಾರೆ.

ನಗರದಲ್ಲಿ ಬೀದಿ ನಾಯಿಗಳು ಮತ್ತು ಹಂದಿಗಳ ಹಾವಳಿ ಮಿತಿಮೀರಿದೆ. ನಾಯಿ ಮತ್ತು ಹಂದಿಗಳು ಕಚ್ಚಾಡುತ್ತಿರುತ್ತವೆ. ಆಗ ಮಧ್ಯ ಯಾರಾದರೂ ಬಂದರೇ ಅವರ ಮೇಲೆ ದಾಳಿ ಮಾಡುತ್ತವೆ. ಕೆಲವೊಂದು ಕಡೆ ಹಂದಿಗಳು ಸಹ ದಾಳಿ ಮಾಡಿ ಮಕ್ಕಳನ್ನು ಗಾಯಗೊಳಿಸಿದ ಉದಾಹರಣೆ ಸಾಕಷ್ಟು ಇವೆ.

ನಿದ್ರೆಯಲ್ಲಿ ನಗರಸಭೆ:ಕೊಪ್ಪಳ ನಗರಸಭೆ ನಿದ್ರೆಯಲ್ಲಿರುವಂತೆ ಕಾಣುತ್ತಿದೆ. ಪದೇ ಪದೇ ನಾಯಿ ಮತ್ತು ಹಂದಿಗಳ ದಾಳಿಯಾಗುತ್ತಿದ್ದರೂ ಅದನ್ನು ನಿಯಂತ್ರಣ ಮಾಡಬೇಕು ಎನ್ನುವ ಕನಿಷ್ಠ ಕಾಳಜಿ ಇಲ್ಲವಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಂದಿಗಳನ್ನು ಹೊರಹಾಕುವ ಕುರಿತು ಪ್ರತಿ ವರ್ಷವೂ ನಾಲ್ಕಾರು ಬಾರಿ ಪ್ರಕಟಣೆ ನೀಡುತ್ತದೆ ಹೊರತು ಹಂದಿಗಳನ್ನು ಇದುವರೆಗೂ ಹೊರಹಾಕಿದ ಉದಾಹರಣೆಯಿಲ್ಲ. ಹೀಗಾಗಿ, ಬೀದಿ ನಾಯಿ ಮತ್ತು ಹಂದಿಗಳನ್ನು ನಿಯಂತ್ರಣ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.