ಸಾರಾಂಶ
ಭಾರತ ಚುನಾವಣಾ ಆಯೋಗ, ಜಿಲ್ಲಾ ಸ್ವೀಪ್ ಕಮಿಟಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ಸಹಯೋಗದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ, ತುಮಕೂರುಭಾರತ ಚುನಾವಣಾ ಆಯೋಗ, ಜಿಲ್ಲಾ ಸ್ವೀಪ್ ಕಮಿಟಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ಸಹಯೋಗದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮತದಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಜಾಗೃತಿ ಜಾಥಾ ಮತ್ತು ಪತ್ರ ಚಳವಳಿ ಆಯೋಜಿಸಿದ್ದು, ನಗರದ ವಿವಿಧ ಶಾಲೆಗಳ ಸುಮಾರು 1 ಸಾವಿರಕ್ಕೂ ಅಧಿಕ ಮಕ್ಕಳು ತಮ್ಮ ತಂದೆ, ತಾಯಿ, ಪರಿಚಯಸ್ಥರು, ಸಂಬಂಧಿಕರಿಗೆ ಪತ್ರದ ಮೂಲಕ ಮತದಾನ ಮಾಡುವಂತೆ ಕೋರಿರುವ ಪತ್ರಗಳನ್ನು ಅಂಚೆ ಪೆಟ್ಟಿಗೆಗೆ ಹಾಕಿ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸ್ವೀಪ್ ಕಮಿಟಿ ಅಧ್ಯಕ್ಷ ಹಾಗೂ ಸಿಇಒ ಜಿ.ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯಬೇಕು. ಎಲ್ಲ ಅರ್ಹ ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡಬೇಕು ಎಂಬ ಉದ್ದೇಶದಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮತ ದಾನ ಜಾಗೃತಿ ಕಾರ್ಯಕ್ರಮ ಜಿಲ್ಲೆಯಾದ್ಯಂತ ಕೈಗೊಳ್ಳಲಾಗಿದೆ. ಇಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಗರದ ವಿವಿಧ ಶಾಲೆಗಳ ಸುಮಾರು 1 ಸಾವಿರ ಮಕ್ಕಳೊಂದಿಗೆ ಜಾಥಾ ನಡೆಸಿ, ಮಕ್ಕಳ ಕೈಯಿಂದ ಪೋಷಕರಿಗೆ ಮತದಾನದ ಅರಿವಿನ ಪತ್ರ ಬರೆದು, ಪೋಸ್ಟ್ ಮಾಡಿಸುವ ಮೂಲಕ ವಿನೂತನವಾಗಿ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಶೇ.100ರಷ್ಟು ಮತದಾನವಾಗಬೇಕೆಂಬುದು ಇದರ ಹಿಂದಿನ ಉದ್ದೇಶ ಎಂದರು.ನಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಇರುವ ಏಕೈಕ ಮಾರ್ಗ ಚುನಾವಣೆ. ಹಾಗಾಗಿಯೇ ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ ಎಂದು ಬಣ್ಣಿಸಲಾಗುತ್ತಿದೆ. ಮತದಾನದಲ್ಲಿ ಮಕ್ಕಳು ನೇರವಾಗಿ ಭಾಗವಹಿಸದಿದ್ದರೂ, ಅವರು ತಮ್ಮ ಪೋಷಕರಿಗೆ, ನೆರೆ ಹೊರೆಯವರಿಗೆ ಮತದಾನ ಅರಿವು ಮೂಡಿಸಿ, ಮತದಾನ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಪ್ರಭಾಪ್ರಭುತ್ವ ವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಾರೆ ಎಂಬ ನಂಬಿಕೆಯಲ್ಲಿ ಮಕ್ಕಳೊಂದಿಗೆ ಜಾಥಾ ನಡೆಸಲಾಗಿದೆ. ರಾಜ್ಯದಲ್ಲಿ ಸುಮಾರು ೪.೫೦ಲಕ್ಷ ವಿದ್ಯಾರ್ಥಿಗಳು ಪತ್ರಗಳ ಮೂಲಕ ತಮ್ಮ ಪೋಷಕರು, ಸಂಬಂಧಿಕರಿಗೆ ಮತದಾನ ಮಾಡುವಂತೆ ಪ್ರೇರೆಪಿಸಿದ್ದಾರೆ. ಇದಕ್ಕಾಗಿ ಮಕ್ಕಳಿಗೆ ಸ್ವೀಪ್ ಸಮಿತಿಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.ಭಾರತದ ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ತನ್ನದೆ ಆದ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಅದು ಈಡೇರಬೇಕಾದರೆ ದೇಶದ ಚುನಾವಣೆ ಗಳಲ್ಲಿ ಜನರು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಬೇಕಾಗಿದೆ. ಉತ್ತನ ಜನನಾಯಕನನ್ನು ಆಯ್ಕೆ ಮಾಡಿಕೊಂಡು, ಆ ಮೂಲಕ ತಮಗೆ ಸಂವಿಧಾನಾತ್ಮ ಕವಾಗಿ ದಕ್ಕಿರುವ ಹಕ್ಕುಗಳನ್ನು ಪಡೆದುಕೊಳ್ಳಲು ಚುನಾವಣೆ ಸಹಕಾರಿಯಾಗಲಿದೆ ಎಂದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ ಮಾತನಾಡಿ, ಶಿಕ್ಷಣ ಇಲಾಖೆಯಿಂದ ಸ್ವೀಪ್ ಕಾರ್ಯಕ್ರಮದ ಅಡಿಯಲ್ಲಿ ಜಾಗೃತಿ ಜಾಥಾ ಮತ್ತು ಪತ್ರ ಚಳವಳಿ ಕಾರ್ಯಕ್ರಮ ನಡೆಸಲಾಗಿದೆ. ಏಂಪ್ರೆಸ್ ಶಾಲೆಯ ಮಕ್ಕಳೊಂದಿಗೆ ನಗರದ ಇತರೆ ಶಾಲೆಗಳ ಸುಮಾರು ೧ಸಾವಿರಕ್ಕೂ ಅಧಿಕ ಮಕ್ಕ ಳಿಂದ ಶಾಲೆಯ ಶಿಕ್ಷಕರ ಮೂಲಕ ಪೋಷಕರಿಗೆ ಪತ್ರ ಬರೆದು, ಮತದಾನದಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ. ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳು ಪತ್ರ ಬರೆದು ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಸ್ವೀಪ್ ಕಮಿಟಿ ಆಶಯ ಈಡೇರಬೇಕೆಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಸಕ್ರಿಯವಾಗಿ ಮಕ್ಕಳನ್ನು ತೊಡಗಿಕೊಂಡು, ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.ಈ ವೇಳೆ ಜಿಲ್ಲಾ ಸ್ವೀಪ್ ಕಮಿಟಿ ನೋಡಲ್ ಅಧಿಕಾರಿ ಅಶೋಕ್, ಡಿಡಿಪಿಐ ರಂಗಧಾಮಪ್ಪ, ಡಿಡಿಪಿಐ ಕಚೇರಿಯ ರಂಗಧಾಮಪ್ಪ, ಬಿಇಒ ಡಾ.ಸೂರ್ಯಕಲಾ, ಪ್ರಾಂಶುಪಾಲರಾದ ಮಲ್ಲಯ್ಯ, ಉಪಪ್ರಾಂಶುಪಾಲರಾದ ಜೆಬಿವುಲ್ಲಾ ಸೇರಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಏಂಪ್ರೆಸ್ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.