ಸಾರಾಂಶ
-ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ನ ಶೋಭಾ ವೆಂಕಟರಮಣ ಮಾಹಿತಿ । ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಣ ಸಂಸ್ಥೆ ತೋರಿದ ಸಾಧನೆ ಅಪಾರ
---------ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಶ್ರೀರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ನಿಂದ ನಡೆಸುತ್ತಿರುವ ಅನುಪಿನಕಟ್ಟೆಯ ಶ್ರೀರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜನವರಿ 1 ರಂದು ಹೊಸವರ್ಷ ಹಾಗೂ ಕಲ್ಪತರು ದಿನದ ಪ್ರಯುಕ್ತ ಜನ್ಮದಾತರಿಗೆ ಮಕ್ಕಳಿಂದ ಪಾದ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಶೋಭಾ ವೆಂಕಟರಮಣ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ಸಂಸ್ಥಾಪಕ ಡಿ.ಎಂ. ವೆಂಕಟರಮಣ ಅವರ ಚಿಂತನೆಯಂತೆ ಈ ಪಾದ ಪೂಜಾ ಕಾರ್ಯಕ್ರಮ ಕಳೆದ 16 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರಲಾಗುತ್ತಿದೆ. ಪ್ರತಿ ವರ್ಷವೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಕ್ಕಳ ಹಾಗೂ ಪೋಷಕರ ಸಂಭ್ರಮ ವರ್ಣಾನಾತೀತ ಎಂದರು.
ಈ ಕಾರ್ಯಕ್ರಮವು ತಂದೆ, ತಾಯಿ ಹಾಗೂ ಮಕ್ಕಳ ಭಾವನ್ಮಾತಕ ಬೆಸುಗೆಗೆ ಕಾರಣಿಭೂತವಾಗಿದೆ. ಈ ವರ್ಷ ವಸತಿ ಶಾಲೆಯ 830 ಮಕ್ಕಳು ಈ ಪುಣ್ಯ ಕಾರ್ಯಕ್ರಮದಲ್ಲಿ ತಮ್ಮ ಪೋಷಕರೊಂದಿಗೆ ಪಾಲ್ಗೊಳ್ಳುತ್ತಿದ್ದಾರೆ. ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಮತ್ತು ಶ್ರೀ ರಾಮಕೃಷ್ಣ ಗುರುಕುಲ ವಸತಿ ಶಾಲೆಗಳು ಮಕ್ಕಳಲ್ಲಿ ಒಂದು ಸಂಸ್ಕಾರಯುತ, ಮೌಲ್ಯವರ್ದಿತ ಉತ್ಕ್ರಷ್ಟ ಶಿಕ್ಷಣ ನೀಡುವಲ್ಲಿ ದಿಟ್ಟ ಹೆಜ್ಜೆಯನ್ನು ಇಡುತ್ತಿದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗುವ ಕ್ರೀಡಾಕ್ಷೇತ್ರ, ವಿಜ್ಞಾನಕ್ಷೇತ್ರ, ಆಧ್ಯಾತ್ಮಿಕಕ್ಷೇತ್ರ ಹಾಗೂ ಶೈಕ್ಷಣಿಕ ರಂಗದಲ್ಲಿ ಅತಿ ಹೆಚ್ಚಿನ ಸಾಧನೆಯನ್ನು ವರ್ಷದಿಂದ ವರ್ಷಕ್ಕೆ ಮಾಡುತ್ತಿದೆ ಎಂದು ಹೇಳಿದರು.ಶಿಕ್ಷಣ ಕ್ಷೇತ್ರದಲ್ಲಿ ರಾಮಕೃಷ್ಣ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಈಗಾಗಲೇ 625ಕ್ಕೆ 625 ಅಂಕ ಪಡೆದಿದ್ದಾರೆ. ಪ್ರಸಕ್ತ ಈ ಸಾಲಿನಲ್ಲಿ ಅನೇಕ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದು, ಚಿನ್ಮಯ್ ಎಂ. ಗೌಡ ಗುಜರಾತ್‍ನಲ್ಲಿ ನಡೆದ ಈಜು ಸ್ಪರ್ಧೆ, ವಿಲಾಸ್ ಅಂದ್ರಡೆ ಭೂಪಾಲ್‍ನಲ್ಲಿ ನಡೆದ ಚೆಸ್‍ನಲ್ಲಿ ವೇದಾ.ಕೆ ಯುಪಿ ಯಲ್ಲಿ ನಡೆದ ಹ್ಯಾಮರ್ ಥ್ರೋ ನಲ್ಲಿ, ವಿಜ್ಞಾನ ಕ್ಷೇತ್ರದಲ್ಲಿ ಪಾಂಡಿಚೇರಿಯಲ್ಲಿ ಜನವರಿ 21 ರಿಂದ 25ರವರೆಗೆ ನಡೆಯುವ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ದಕ್ಷಿಣಭಾರತ ವಲಯಮಟ್ಟಕ್ಕೆ ಶಾಲೆಯ ಪ್ರೀತಮ್ ಎಸ್.ಎಂ. ಹಾಗೂ ಚಿರಂತನ್ ಟಿ.ಎಸ್. ಆಯ್ಕೆಯಾಗಿದ್ದಾರೆ. ಈ ಮೇಲಿನ ಎಲ್ಲಾ ವಿದ್ಯಾರ್ಥಿಗಳು ಸಂಸ್ಥೆಯ ಗರಿಮೆಯನ್ನು ಹೆಚ್ಚಿಸಿರುತ್ತಾರೆ ಎಂದು ಅವರು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಡಾ. ಡಿ. ಆರ್. ನಾಗೇಶ್ ಮಾತನಾಡಿ, ಸಂಸ್ಥೆಯ ಈ ಬೆಳವಣಿಗೆಗೆ ಶಿಕ್ಷಕ ವೃಂದ, ದಕ್ಷ ಆಡಳಿತ ಮಂಡಳಿ, ಪೋಷಕ ವೃಂದ ಹಾಗೂ ಗುಣಾತ್ಮಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿವೃಂದ ಕಾರಣವಾಗಿದೆ ಎಂದರು.ಇಂದು ಮೌಲ್ಯ ಮತ್ತು ಸಂಸ್ಕ್ರತಿ ಕೊರತೆಯಿಂದಾಗಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಕೊನೆ ಕಾಲದಲ್ಲಿ ಮಕ್ಕಳು ತಂದೆ, ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳಿಸಬಾರದು. ಆ ಭಾವನೆಗಳನ್ನು ಮಕ್ಕಳಲ್ಲಿ ಬೆಳೆಸಬೇಕಾಗಿದೆ ಎಂದರು.
ಜನವರಿ 1 ರಂದು ನಡೆಯುವ ಜನ್ಮದಾತರಿಗೆ ಪಾದ ಪೂಜೆ ಕಾರ್ಯಕ್ರಮದಲ್ಲಿ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪಟ್ಟಾದ್ಯಕ್ಷರು, ತರಳಬಾಳು ಜಗದ್ಗುರು ಶಾಖಾಮಠ ಸಾಣೇಹಳ್ಳಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಮುಖ್ಯ ಅತಿಥಿಗಳಾಗಿ ಚಿಂತಕ ಜಿ.ಎಸ್. ನಟೇಶ್ ಅವರು ತಂದೆ, ತಾಯಿ ಮತ್ತು ಮಗುವಿನ ಸಂಬಂಧದ ಬಗ್ಗೆ ಮಾತನಾಡಲಿದ್ದಾರೆ ಹಾಗೂ ರಾಮಕೃಷ್ಣ ಶಾಲೆಯ ಸಾಧಕ ವಿದ್ಯಾರ್ಥಿ ಡಾ. ಜಿ.ಎಚ್.ಸುಮನ್ ಪಟೇಲ್ಗ ಭಾವಹಿಸಲಿದ್ದಾರೆ ಎಂದು ವಿವರಿಸಿದರು.
ಗೋಷ್ಟಿಯಲ್ಲಿ ಸಂಸ್ಥೆಯ ಕೋ ಆರ್ಡಿನೇಟರ್ ಆದ ಕೆ.ಎಚ್. ಅರುಣ್, ಶರತ್, ಮುಖ್ಯಶಿಕ್ಷಕರಾದ ತೀರ್ಥೇಶ್, ಎಚ್.ಎಂ. ವೆಂಕಟೇಶ್ ಇದ್ದರು.-------------------
ಪೋಟೋ: 28ಎಸ್‌ಎಂಜಿಕೆಪಿ01ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಶೋಭಾ ವೆಂಕಟರಮಣ ಮಾತನಾಡಿದರು.