ಗುಣಮಟ್ಟದ ಶಿಕ್ಷಣ, ನೈತಿಕ ಮೌಲ್ಯ ಹಾಗೂ ದೇಶಪ್ರೇಮ ಬೆಳೆಸುವುದು ಇಲಾಖೆಯ ಗುರಿಯಾಗಿದ್ದು, ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು
ಗದಗ: ಮಕ್ಕಳ ದಿನಾಚರಣೆಯು ಕೇವಲ ಒಂದು ದಿನದ ಸಂಭ್ರಮಕ್ಕೆ ಸೀಮಿತವಾಗದೆ, ಮಕ್ಕಳ ಹಕ್ಕುಗಳು, ಸುರಕ್ಷತೆ ಮತ್ತು ಸರ್ವತೋಮುಖ ಅಭಿವೃದ್ಧಿಯನ್ನು ನಿರಂತರವಾಗಿ ನೆನಪಿಸುವ ದಿನವಾಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಕೆ.ಡಿ. ಬಡಿಗೇರ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಹಾಗೂ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜವಾಹರಲಾಲ್ ನೆಹರು ಚಿಂತನೆಗಳ ಭಾಷಣ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಗುಣಮಟ್ಟದ ಶಿಕ್ಷಣ, ನೈತಿಕ ಮೌಲ್ಯ ಹಾಗೂ ದೇಶಪ್ರೇಮ ಬೆಳೆಸುವುದು ಇಲಾಖೆಯ ಗುರಿಯಾಗಿದ್ದು, ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂದರು.ಮುಖ್ಯೋಪಾಧ್ಯಾಯಿನಿ ಲಲಿತಾ ವಣಕ್ಯಾಳ ಅಧ್ಯಕ್ಷತೆ ವಹಿಸಿದ್ದರು. ಡಯಟ್ ಉಪನ್ಯಾಸಕ ಎಚ್.ಬಿ. ರಡ್ಡೇರ, ಜೆ.ಡಿ. ದಾಸರ, ನೋಡಲ್ ಅಧಿಕಾರಿ ಎಂ.ಎಚ್. ಸವದತ್ತಿ, ನಿರ್ಣಾಯಕರಾದ ಎಂ.ಬಿ. ಕರಡ್ಡಿ, ಎಸ್.ಎ. ಕುಂಬಾರ, ಆರ್.ಜಿ. ಕವಲಗೇರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ವಿಜೇತರು: ಹೊಳೆಆಲೂರಿನ ಇಂದಿರಾ ಗಾಂಧಿ ವಸತಿ ಶಾಲೆಯ ಕಾರ್ತಿಕ್ ಗೌಡ ಪಾಟೀಲ (ಪ್ರಥಮ), ಗದಗ ಬ್ರೈಟ್ ಹಾರಿಜನ್ ಶಾಲೆಯ ಹಫ್ಸಾ ಎಸ್. ಯರಗುಡಿ (ದ್ವಿತೀಯ), ಸೆಂಟ್ ಜಾನ್ ಶಾಲೆಯ ಅನನ್ಯ ಗೋಟೂರ (ತೃತೀಯ) ಬಹುಮಾನ ಪಡೆದರು. ಸುಭಾಷ ಗೌಡ ಸಟಕನಾಳ, ವಿಶ್ವನಾಥ್ ಹೂಗಾರ್ ಹಾಗೂ ಸಿಂಚನ ಬ್ಯಾಲಹುಣಿಸಿ ಸಮಾಧಾನಕರ ಬಹುಮಾನ ಪಡೆದರು.