ಶಾಲೆಯಲ್ಲಿ ಮಾರ್ದನಿಸಿದ ಮಕ್ಕಳ ಕಲರವ

| Published : Jun 01 2024, 12:45 AM IST

ಸಾರಾಂಶ

ಶುಕ್ರವಾರ ಬೆಳಗ್ಗೆ ಶಾಲೆಗೆ ಮಕ್ಕಳು ಆಗಮಿಸುತ್ತಿದ್ದಂತೆ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಮಕ್ಕಳಿಗೆ ಪುಷ್ಪವೃಷ್ಟಿ ಗೈಯುವ ಮೂಲಕ ಸ್ವಾಗತಿಸಿದರು. ಕೆಲವೆಡೆ ಮಕ್ಕಳಿಗೆ ಬಲೂನ್‌, ಗುಲಾಬಿ ಹೂ ನೀಡಿ ಬರಮಾಡಿಕೊಂಡರು.

ಹುಬ್ಬಳ್ಳಿ:

ಎರಡು ತಿಂಗಳು ರಜೆ ಮುಗಿಸಿ ರಜೆಯ ಮಜಾ ಅನುಭವಿಸಿದ್ದ ವಿದ್ಯಾರ್ಥಿಗಳು ಶುಕ್ರವಾರದಿಂದ ಮತ್ತೆ ಶಾಲೆಯತ್ತ ಮುಖ ಮಾಡಿದ್ದಾರೆ. ಮಕ್ಕಳಿಗೆ ಪುಷ್ಪವೃಷ್ಟಿ ಗೈಯುವ, ಸಿಹಿ ತಿನ್ನಿಸುವ, ಆರತಿ ಮಾಡುವ ಮೂಲಕ ಅದ್ಧೂರಿಯಾಗಿ, ಆತ್ಮೀಯವಾಗಿ ಶಿಕ್ಷಕರು ಬರಮಾಡಿಕೊಂಡಿದ್ದಾರೆ. ಈ ನಡುವೆ ಧಾರವಾಡದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ತಾವೇ ಮಕ್ಕಳಿಗೆ ಮೊದಲ ದಿನ ಇಂಗ್ಲಿಷ್‌ ಪಾಠ ಮಾಡುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ್ದಾರೆ.

ಮೇ 29 ಹಾಗೂ 30ರಂದು ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಶಾಲೆಗಳಿಗೆ ತೆರಳಿ ಶುಚಿಗೊಳಿಸಿ, ತಳಿರು-ತೋರಣಗಳಿಂದ ಶಾಲೆಗಳನ್ನೆಲ್ಲ ಸಿಂಗರಿಸಿದ್ದರು. ಶಾಲಾ ಆವರಣದಲ್ಲಿ ರಂಗೋಲಿ ಬಿಡಿಸಿ ಮಕ್ಕಳ ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಶುಕ್ರವಾರ ಬೆಳಗ್ಗೆ ಶಾಲೆಗೆ ಮಕ್ಕಳು ಆಗಮಿಸುತ್ತಿದ್ದಂತೆ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಮಕ್ಕಳಿಗೆ ಪುಷ್ಪವೃಷ್ಟಿ ಗೈಯುವ ಮೂಲಕ ಸ್ವಾಗತಿಸಿದರು. ಕೆಲವೆಡೆ ಮಕ್ಕಳಿಗೆ ಬಲೂನ್‌, ಗುಲಾಬಿ ಹೂ ನೀಡಿ ಬರಮಾಡಿಕೊಂಡರೆ, ಇತರೆಡೆ ಮಕ್ಕಳಿಗೆ ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ಅಧ್ಯಕ್ಷರು ಗುಲಾಬಿ ಹೂ ನೀಡಿ, ಸಿಹಿ ತಿನ್ನಿಸಿ, ಪಠ್ಯಪುಸ್ತಕ ನೀಡುವ ಮೂಲಕ ಶಾಲೆಗೆ ಬರಮಾಡಿಕೊಂಡರು. ಶಾಲೆಗಳಲ್ಲಿ ಮಕ್ಕಳ ಕಲರವ ಮಾರ್ದನಿಸುತ್ತಿತ್ತು. ಮೊದಲ ದಿನದ ಆಗಮನದ ಸಂಭ್ರಮದಲ್ಲಿದ್ದ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಬೆರೆತು ಸಂಭ್ರಮಿಸಿದರು. ಕುಣಿದು ಕುಪ್ಪಳಿಸಿದರು.

ಪಠ್ಯ ಪುಸ್ತಕ ಪಠ್ಯ ವಿತರಣೆ:

ಕಳೆದ ವರ್ಷದಂತೆ ಈ ವರ್ಷವು ಶಾಲಾ ಆರಂಭದ ದಿನದಂದೇ ಮಕ್ಕಳಿಗೆ ಪಠ್ಯಪುಸ್ತಕ ನೀಡುವ ಕಲ್ಪನೆ ಶಿಕ್ಷಣ ಇಲಾಖೆಯದ್ದಾಗಿತ್ತು. ಆದರೆ, ಈ ಬಾರಿ ಶೇ. 70ರಷ್ಟು ಶಾಲೆಗಳಿಗೆ ಮಾತ್ರ ಪಠ್ಯ ಪುಸ್ತಕ ವಿತರಿಸಲಾಗಿದ್ದು, ಇನ್ನುಳಿದ ಶಾಲೆಗಳಿಗೆ ಶನಿವಾರ ದೊಳಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಎಲ್ಲೆಲ್ಲಿ ಶಾಲೆಗಳಿಗೆ ಪಠ್ಯಪುಸ್ತಕ ಸರಬರಾಜು ಆಗಿದೆಯೋ ಅಲ್ಲಿ ಶಿಕ್ಷಕರು ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಿದರು.

15 ದಿನ ಸೇತುಬಂಧ ಶಿಕ್ಷಣ:

ಶಾಲಾ ಆರಂಭದ 15 ದಿನ ಮಕ್ಕಳಿಗೆ ಸೇತುಬಂಧ ಶಿಕ್ಷಣದ ಮೂಲಕ ಬೋಧನೆ ಮಾಡಲಾಗುತ್ತದೆ. ಮಕ್ಕಳು ಕಳೆದ ವರ್ಷದಲ್ಲಿ ಕಲಿತ ವಿಷಯಗಳ ಕುರಿತು ಮತ್ತೊಮ್ಮೆ ಮೆಲಕು ಹಾಕುವ ಮೂಲಕ ಅವರಿಗೆ ಪರಿಹಾರ ಬೋಧನಾ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ನಿರಂತರ ಶಿಕ್ಷಣದ ಅಡಿ ಶಾಲಾ ಅವಧಿ ಹೊರತುಪಡಿಸಿ ವಿಶೇಷ ತರಬೇತಿ ನೀಡುವ ಕಾರ್ಯ ವರ್ಷವಿಡೀ ನಡೆಸಲಾಗುತ್ತದೆ.

ಎಲ್ಲೆಡೆ ಜಾಗೃತಿ ಜಾಥಾ:

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಶಾಲಾ ಆರಂಭದ ಪೂರ್ವದಲ್ಲಿಯೇ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲೂ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿತ್ತು. ಹಾಗೆಯೇ ಶಾಲಾ ಶಿಕ್ಷಕರು ಸಹ ತಮ್ಮ ಶಾಲೆಯ ಮಕ್ಕಳ ಪಾಲಕರಿಗೆ ಕರೆ ಮಾಡಿ ಕಡ್ಡಾಯವಾಗಿ ಶಾಲಾ ಆರಂಭದ ದಿನದಿಂದಲೇ ಶಾಲೆಗೆ ಕಳಿಸುವಂತೆ ಮನವರಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಶಾಲಾ ಆರಂಭದ ದಿನದಂದೇ ಶೇ. 60ರಷ್ಟು ಮಕ್ಕಳು ಶಾಲೆಗೆ ಆಗಮಿಸಿದ್ದರು

ಶುಕ್ರವಾರದಿಂದ ಆರಂಭವಾಗಿರುವ ಶಾಲಾ ತರಗತಿಯಿಂದಾಗಿ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡುವುದರೊಂದಿಗೆ ಮತ್ತೆ ಮಕ್ಕಳ ಕಲರವದೊಂದಿಗೆ ಶಾಲೆಗಳು ರಂಗುಪಡೆದುಕೊಂಡಿದೆ.