ಸಾರಾಂಶ
ಕನ್ನಡಪ್ರಭ ವಾರ್ತೆ ಸಂಡೂರು
ತಾಲೂಕಿನ ಹೊಸ ದರೋಜಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಜಿಲ್ಲಾಡಳಿತ, ಜಿಪಂ, ಗ್ರಾಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಇವುಗಳ ಸಹಯೋಗದಲ್ಲಿ ಬಾಲ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದಡಿಯಲ್ಲಿ ಬಾಲ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಲಿಕೆ ಟಾಟಾ ಟ್ರಸ್ಟ್ ಜಿಲ್ಲಾ ವ್ಯವಸ್ಥಾಪಕ ಜಗನ್ನಾಥ್ ಮಾತನಾಡಿ, ಗುಣಮಟ್ಟದ ಶಾಲಾ ಪೂರ್ವ ಶಿಕ್ಷಣ ಅನುಷ್ಠಾನಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕರಿಗೆ ವಿವಿಧ ಹಂತದ ತರಬೇತಿಗಳಲ್ಲಿ ಅಂಗನವಾಡಿ ಮಕ್ಕಳ ಬೆಳವಣಿಗೆಗೆ ಪೂರಕವಾದ ದೈಹಿಕ ಆಟಗಳು, ಭಾಷಾ ಹಾಗೂ ಬೌದ್ಧಿಕ ಬೆಳವಣಿಗೆ, ಗಣಿತ ಕಲಿಕೆ ಹಾಗೂ ಆರಂಭಿಕ ಸಾಕ್ಷರತೆಯ ಕುರಿತಂತೆ ತರಬೇತಿಗಳನ್ನು ನೀಡಲಾಗಿದೆ. ಮಕ್ಕಳಿಗೆ ಪ್ರತಿದಿನ ವೇಳಾಪಟ್ಟಿಗೆ ಅನುಗುಣವಾಗಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಚಟುವಟಿಕೆಗಳನ್ನು ಸಮುದಾಯಕ್ಕೆ ಪರಿಚಯಿಸಲು ಪ್ರತಿ ತಿಂಗಳು ಸಮುದಾಯ ಚಿತ್ತ ಅಂಗನವಾಡಿ ಅತ್ತ ಎನ್ನುವ ಸಭೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ವೇಷಭೂಷಣ ತೊಟ್ಟಿದ್ದ ಅಂಗನವಾಡಿ ಮಕ್ಕಳನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಲಾಯಿತು. ಸೆಲ್ಫಿ ಕಾರ್ನರ್, ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದಡಿಯಲ್ಲಿ ವಿವಿಧ ತರಬೇತಿಗಳ ಅನುಸಾರ ರಚಿಸಲಾದ ಕಲಿಕಾ ಸಾಮಾಗ್ರಿಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಅಂಗನವಾಡಿ ಮಕ್ಕಳು ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಗಳು, ಬಯಲಾಟ ಪ್ರದರ್ಶನ, ನೃತ್ಯ, ಕಿರು ನಾಟಕ, ಅಭಿನಯ ಗೀತೆಗಳನ್ನು ಪ್ರಸ್ತುತಪಡಿಸಿದರು.ಅಂಗನವಾಡಿ ಮಕ್ಕಳ ಮಹಿಳಾ ಪೋಷಕರಿಗೆ ರಂಗೋಲಿ ಸ್ಪರ್ಧೆ, ಪುರುಷ ಪೋಷಕರಿಗೆ ಹಾಗೂ ಅಂಗನವಾಡಿ ಸಹಾಯಕಿಯರಿಗೆ ದಾರದ ಮೂಲಕ ಚಕ್ಕುಲಿ ತಿನ್ನುವ ಸ್ಪರ್ಧೆ ಮತ್ತು ಅಂಗನವಾಡಿ ಶಿಕ್ಷಕಿಯರಿಗೆ ಮ್ಯೂಜಿಕಲ್ ಚೇರ್ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಂಗನವಾಡಿ ಶಿಕ್ಷಕಿಯರಾದ ಕಲಾವತಿ ಸ್ವಾಗತಿಸಿದರು. ಶೈಲಜಾ ಮತ್ತು ನಾಗರತ್ನ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ಹಾಗೂ ಕೋಮಲ ವಂದಿಸಿದರು.ಗ್ರಾಪಂ ಅಧ್ಯಕ್ಷೆ ಗೀತಾ, ಪಿಡಿಒ ಗಣೇಶ, ಸದಸ್ಯರಾದ ಮಾಯಣ್ಣ, ತಿಮ್ಮಪ್ಪ, ಹಂಪಮ್ಮ, ಬಾಬಯ್ಯ, ರುದ್ರಪ್ಪ, ಹೊನ್ನೂರಸ್ವಾಮಿ, ಅಂಜಿನಿ, ಮುಖ್ಯಶಿಕ್ಷಕಿ ಹೂಲೆಶಿ, ಮೇಲ್ವಿಚಾರಕರಾದ ಲಕ್ಷ್ಮೀಬಾಯಿ ಕಂಕನವಾಡಿ ಮುಂತಾದವರಿದ್ದರು.