ಸಾರಾಂಶ
ಹಾವೇರಿ: ಮಕ್ಕಳಿಗೆ ಶಿಕ್ಷಣ, ಆಟ-ಪಾಠಗಳ ಜೊತೆಗೆ ವ್ಯಾವಹಾರಿಕ ಜ್ಞಾನ ಬೆಳಸಿಕೊಳ್ಳಲು ಮಕ್ಕಳ ಸಂತೆ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ಹಾವೇರಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯ ಅಧಿಕಾರಿ ಮಹದೇವಪ್ಪ ಮಾದರ ಹೇಳಿದರು. ತಾಲೂಕು ನಾಗನೂರು ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಕ್ಕಳು ವ್ಯಾವಹಾರಿಕ ಜ್ಞಾನ, ಲಾಭ-ನಷ್ಟ, ಸಹಕಾರ, ಸಹಬಾಳ್ವೆ, ಹೊಂದಾಣಿಕೆ ಗುಣಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಮಕ್ಕಳು ತಮ್ಮ ತಮ್ಮ ಬುದ್ಧಿಶಕ್ತಿಯನ್ನು ಬಳಸಿಕೊಳ್ಳಲು ಅನುಕೂಲಕರವಾಗಿದೆ. ಮುಂದಿನ ದಿನಗಳಲ್ಲಿ ಅವರು ತಮ್ಮ ಬುದ್ಧಿಶಕ್ತಿಯನ್ನು ಬಳಸಿಕೊಂಡು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.ಮಕ್ಕಳು ತರಕಾರಿ, ಕಿರಾಣಿ, ನೋಟಬುಕ್, ವಿವಿಧ ಕಾಳುಗಳು, ಬೇಕರಿ ಪದಾರ್ಥಗಳು, ಹಣ್ಣುಗಳು ಮತ್ತು ಸ್ಟೇಷನರಿ ಸಾಮಗ್ರಿಗಳನ್ನು ಮಾರಾಟ ಮಾಡಿ ಗ್ರಾಮದ ಜನರ ಹೊಗಳಿಕೆಗೆ ಪಾತ್ರರಾದರು. ಗ್ರಾಮದ ಜನರು ಸಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರು.ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್ ಹಂಡೆಗಾರ, ದೇವಿಹೊಸೂರ ಸಿಆರ್‌ಪಿ ನಾಗರಾಜ ಕಣವಿ, ಮುಖ್ಯ ಶಿಕ್ಷಕ ಸಿ.ಆರ್. ಚೂರಿ, ಎಸ್‌ಡಿಎಂಸಿ ಅಧ್ಯಕ್ಷ ಚನ್ನಬಸಯ್ಯಾ ಹಿರೇಮಠ, ಉಪಾಧ್ಯಕ್ಷೆ ವಂದನಾ ಬಡಿಗೇರ, ಸದಸ್ಯರಾದ ಗದಿಗೆಪ್ಪ ರತ್ತಿಹಳ್ಳಿ, ಸಂಗಪ್ಪ ಒಂಕರಣ್ಣನವರ, ಸಿದ್ರಾಮಪ್ಪ ಕುಂಬಾರಿ, ನಿಂಗಪ್ಪ ಬುಲ್ಲಣ್ಣನವರ ಇದ್ದರು.