ಸಾರಾಂಶ
ಮಕ್ಕಳು ಕೇವಲ ಪುಸ್ತಕ ಓದುವಿಕೆಗೆ ಮಾತ್ರ ಸೀಮಿತವಾಗದೇ ಮಕ್ಕಳ ಕಲ್ಪನೆ, ಸೃಜನಶೀಲತೆ, ಭಾಷಾ ಕೌಶಲ್ಯ ಮತ್ತು ಸಂಸ್ಕೃತಿ ಪರಂಪರೆಯ ವೃದ್ಧಿಗೆ ಸಾಹಿತ್ಯವು ಬೇಕು. ಈ ಹಿನ್ನೆಲೆಯಲ್ಲಿ ಮಕ್ಕಳ ಸಮ್ಮೇಳನ ಆಯೋಜಿಸಲಾಗುತ್ತಿದೆ.
ಧಾರವಾಡ:
ಇಲ್ಲಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೆ.ಇ. ಬೋರ್ಡ್ ವತಿಯಿಂದ ನ. 6ರಂದು ಕರ್ನಾಟಕ ಪ್ರೌಢಶಾಲೆ ಆವರಣದಲ್ಲಿ ಶರಣ ಸಾಹಿತ್ಯ ವಿಷಯದ ಮೇಲೆ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಹೇಳಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಕ್ಕಳು ಕೇವಲ ಪುಸ್ತಕ ಓದುವಿಕೆಗೆ ಮಾತ್ರ ಸೀಮಿತವಾಗದೇ ಮಕ್ಕಳ ಕಲ್ಪನೆ, ಸೃಜನಶೀಲತೆ, ಭಾಷಾ ಕೌಶಲ್ಯ ಮತ್ತು ಸಂಸ್ಕೃತಿ ಪರಂಪರೆಯ ವೃದ್ಧಿಗೆ ಸಾಹಿತ್ಯವು ಬೇಕು. ಈ ಹಿನ್ನೆಲೆಯಲ್ಲಿ ಸಂಸ್ಥೆ ವತಿಯಿಂದ ಪ್ರತಿ ವರ್ಷ ತನ್ನ ಅಡಿಯ ಶಾಲೆಗಳಲ್ಲಿ ಮಕ್ಕಳ ಸಮ್ಮೇಳನ ಆಯೋಜಿಸುತ್ತಿದ್ದು ಈ ಬಾರಿಯ ಸಮ್ಮೇಳನವನ್ನು ಕರ್ನಾಟಕ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ ಎಂದರು.
ಗುರುವಾರ ಬೆಳಗ್ಗೆ 8ಕ್ಕೆ ಕಡಪಾ ಮೈದಾನದಿಂದ ಜಿಲ್ಲಾಸ್ಪತ್ರೆ ಮಾರ್ಗವಾಗಿ ಮೆರವಣಿಗೆ ನಡೆಯಲಿದೆ. ಕುಂಭಮೇಳ, ಡೊಳ್ಳು ಕುಣಿತ, ಹೆಜ್ಜೆ ಮೇಳ, ಶಿವಶರಣರ ಗಾಯನ, ವಿವಿಧ ವಾದ್ಯ ಹಾಗೂ ಶರಣರ ಛದ್ಮವೇಷಗಳೊಂದಿಗೆ ಘೋಷಣೆಗಳು ಮೊಳಗಲಿವೆ. ಮೆರವಣಿಗೆ ಹಾಗೂ ನಂತರ ನಡೆಯುವ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಡಿ 18 ಶಾಲಾ-ಕಾಲೇಜುಗಳ ಆಯ್ದ ಮಕ್ಕಳು, ಶಿಕ್ಷಕರು ಹಾಗೂ ಸಿಬ್ಬಂದಿ ಭಾಗವಹಿಸಲಿದ್ದಾರೆ. ಹಿರಿಯ ಸಾಹಿತಿ ಶ್ರೀನಿವಾಸ ವಾಡಪ್ಪಿ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಬೆಳಗ್ಗೆ 9.30ಕ್ಕೆ ಹಿರಿಯ ಸಾಹಿತಿ ಜಯಂತ ಕಾಯ್ಕಿಣಿ ಚಾಲನೆ ನೀಡಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಎಂ.ಎನ್. ಜೋಶಿ ಅಧ್ಯಕ್ಷತೆ ವಹಿಸುತ್ತಾರೆ ಎಂದರು.ಮೂರು ಗೋಷ್ಠಿ:
ಶಂಕರ ಹಲಗತ್ತಿ ಅಧ್ಯಕ್ಷತೆಯಲ್ಲಿ ಪ್ರಾತಃಸ್ಮರಣೀಯರು, ಶಶಿಧರ ತೋಡಕರ ಅಧ್ಯಕ್ಷತೆಯಲ್ಲಿ ಸಾವಿಲ್ಲದ ಶರಣರು ಹಾಗೂ ಡಾ. ವೀಣಾ ಹೂಗಾರ ಅಧ್ಯಕ್ಷತೆಯಲ್ಲಿ ಅರಿವೇ ಗುರು ಎಂಬ ಮೂರು ಗೋಷ್ಠಿಗಳು ಜರುಗಲಿದ್ದು, ಸಂಸ್ಥೆಯ ವಿವಿಧ ಶಾಲಾ-ಕಾಲೇಜು ಮಕ್ಕಳಿಂದಲೇ ವಿವಿಧ ವಿಷಯಗಳ ಚರ್ಚೆ, ಸಂವಾದ ಹಾಗೂ ನಿರ್ವಹಣೆ ನಡೆಯಲಿದೆ ಎಂದ ಅವರು, ಸಂಜೆ 4.10ಕ್ಕೆ ನಡೆಯುವ ಸಮಾರೋಪದಲ್ಲಿ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶರಣ ಸಾಹಿತ್ಯ ಚಿಂತಕ ನಾಗರಾಜ ದ್ಯಾಮನಕೊಪ್ಪ ಹಾಗೂ ಕೆ.ಇ. ಬೋರ್ಡ್ ಆಡಳಿತ ಮಂಡಳಿ ಸದಸ್ಯರು ಅತಿಥಿಗಳಾಗಿ ಭಾಗವಹಿಸುವರು ಎಂದು ಶ್ರೀಕಾಂತ ಪಾಟೀಲ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಎನ್.ಎಸ್. ಕುಲಕರ್ಣಿ, ವಿಶ್ವನಾಥ ದೇಶಪಾಂಡೆ, ವಸಂತ ಮುರ್ಡೇಶ್ವರ, ಜಿ.ಆರ್. ಭಟ್ ಹಾಗೂ ಎನ್.ಎನ್. ಸವಣೂರ ಇದ್ದರು.
;Resize=(128,128))
;Resize=(128,128))