ಸಾರಾಂಶ
ಹಾವೇರಿ: ಮಕ್ಕಳ ಸಾಹಿತ್ಯ ಕೇವಲ ಮಕ್ಕಳಿಗಷ್ಟೇ ಸೀಮಿತಗೊಳಿಸುವ ಪರದೆಯಿಂದ ಓದುಗರು ಹೊರಬರಬೇಕಿದೆ ಎಂದು ಸಾಹಿತಿ ಆನಂದ ಪಾಟೀಲ ಅಭಿಪ್ರಾಯ ಪಟ್ಟರು. ನಗರದ ನೈಸ್ ಅಕಾಡೆಮಿಯಲ್ಲಿ ಸಾಹಿತಿ ಕಲಾವಿದರ ಬಳಗ ಹಾಗೂ ಕಸ್ತೂರಿ ಪ್ರಕಾಶನ ತಂಗೋಡ ಸಹಯೋಗದಲ್ಲಿ ಭಾನುವಾರ ಜರುಗಿದ ಮಕ್ಕಳ ಕಾದಂಬರಿ ಬೆರಗು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಚರ್ಚೆ, ಸಂವಾದಗಳು ಗಾಂಭೀರ್ಯತೆ ಪಡೆಯಬೇಕಿದೆ. ಮಕ್ಕಳ ಸಾಹಿತ್ಯ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಲೇಖಕ ನಾಗರಾಜ ಹುಡೇದ ಅವರು, ಬಾಲ್ಯಕ್ಕೆ ತನ್ನನ್ನು ಅರ್ಪಿಸಿಕೊಂಡು ಅನುಭವ ಕಥನ ರೂಪದಲ್ಲಿ ಬರೆದ ಬೆರಗು ಮಕ್ಕಳ ಕಾದಂಬರಿ ಸಾಹಿತ್ಯ ವಲಯದಲ್ಲಿ ವಿನೂತನ ಆಶಯಗಳನ್ನು ಸೃಜಿಸಿದೆ. ಮಕ್ಕಳು ಕಾಡು ಮೇಡು ಸುತ್ತುತ್ತ ಹಿರಿಯರ ಜೊತೆಗೆ ಬೆರೆಯುವ ಆಪ್ತತೆ ನಿರೂಪಣೆ ಶೈಲಿಯಲ್ಲಿ ಸೊಗಸಾಗಿ ಮೂಡಿ ಬಂದಿದೆ. ಸಾಹಿತ್ಯ ರಚಿಸಿ ಪ್ರಕಟಿಸುವುದು ಕಷ್ಟದ ಕೆಲಸ. ಮಾರುಕಟ್ಟೆಯ ಪೈಪೋಟಿ ಸಂದರ್ಭದಲ್ಲಿ ಬೆರಗು ಮಕ್ಕಳ ಕಾದಂಬರಿ ಆಪ್ತ ಭಾವ ಮೂಡಿಸುತ್ತದೆ ಎಂದರು.ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಸಾಹಿತಿಗಳಾದ ಪಿ.ಲಂಕೇಶ್, ಯು.ಆರ್.ಅನಂತಮೂರ್ತಿ, ಶಿವರಾಂ ಕಾರಂತ ಅವರು ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಬಾಲ್ಯವನ್ನು ನೆನಪಿಸುವ ಸಂಗತಿಗಳನ್ನು ಕಟ್ಟಿಕೊಟ್ಟಿದ್ದಾರೆ. ಅಂಥ ಮೇರು ಹಿನ್ನೆಲೆ ಇರುವ ಮಕ್ಕಳ ಸಾಹಿತ್ಯಕ್ಕೆ ಹೊಸತನ ಮತ್ತು ಆಧುನಿಕತೆ ಮೂಡಿಸುವ ಮನೋಭಾವಕ್ಕೆ ಇಳಿದು ಬರೆಯುವುದು ಸವಾಲಿನ ಕೆಲಸ. ಆದರೆ ಲೇಖಕ ನಾಗರಾಜ ಹುಡೇದ ಅವರು ತಮ್ಮ ಬಾಲ್ಯದ ಅನುಭವಗಳನ್ನು ಗಟ್ಟಿಗೊಳಿಸಿ ಬೆರಗು ರೂಪದಲ್ಲಿ ಕಟ್ಟಿಕೊಡುವ ಮೂಲಕ ಮಕ್ಕಳ ಸಾಹಿತ್ಯಕ್ಕೆ ಮಾದರಿ ಆಗಿದ್ದಾರೆ.ಲೇಖಕಿ ಅನಿತಾ ಹರನಗಿರಿ ಕೃತಿ ವಿಶೇಷ ಕುರಿತು ಮಾತನಾಡಿ, ಬೆರಗು ಮಕ್ಕಳ ಕಾದಂಬರಿ ನಮ್ಮೆಲ್ಲರ ಬಾಲ್ಯವನ್ನು ನೆನಪಿಸಿಕೊಡುವ ಮೂಲಕ ಬಾಂಧವ್ಯವನ್ನು ಉಳಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಮಕ್ಕಳಲ್ಲಿ ಸಾಹಸ ಮತ್ತು ಕುತೂಹಲ ಮನೋಭಾವ ಮೂಡಿಸಲು ಸಹಕರಿಸುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ನೈಸ್ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ನಿಂಗರಾಜು ಸುಳ್ಳಳ್ಳಿ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯ ಅಧ್ಯಯನದ ಅಭಿರುಚಿ ಮೂಡಿಸುವ ಹೊಣೆಗಾರಿಕೆ ಪಾಲಕರ ಮೇಲಿದೆ. ಜೊತೆಗೆ ಓದುವ ಆಸಕ್ತಿ ಹೆಚ್ಚಿಸಬೇಕಿದೆ. ಅಷ್ಟೇ ಅಲ್ಲದೇ ಹೊಸ ಲೇಖಕರನ್ನು ಪ್ರೋತ್ಸಾಹಿಸಲು ಪುಸ್ತಕ ಖರೀದಿ ಪ್ರವೃತ್ತಿ ಬೆಳೆಯಬೇಕಿದೆ ಎಂದರು.ಸಾಕ್ಷ್ಯಚಿತ್ರ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ ಮಾತನಾಡಿದರು. ಸಾಹಿತಿ ಕಲಾವಿದರ ಬಳಗದ ಎಸ್.ಆರ್. ಹಿರೇಮಠ, ಚಂದ್ರಶೇಖರ ಮಾಳಗಿ, ಈರಣ್ಣ ಬೆಳವಡಿ, ರೇಣುಕಾ ಗುಡಿಮನಿ, ಜುಬೇದಾ ನಾಯಕ್, ನೇತ್ರಾವತಿ ಅಂಗಡಿ, ಅಕ್ಕಮಹಾದೇವಿ ಹಾನಗಲ್ಲ, ಗೀತಾ ಸುತ್ತಕೋಟಿ, ಕೋಳೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಿ.ಎಂ. ಅಂಗಡಿ, ಟಿ.ಜೆ. ಬಡಪ್ಪನವರ, ಎಸ್.ಬಿ. ಬೆಳ್ಳಟ್ಟಿಮಠ, ಸಹನಾ ವಡ್ನಿಕೊಪ್ಪ, ತಂಗೋಡ ಗ್ರಾಮದ ಶಿವನಗೌಡ ದೊಡ್ಡಗೌಡ್ರ, ಟಿ.ಬಿ. ನಾವಿ, ಯಲ್ಲಾಪುರದ ನಾರಾಯಣ ಕಾಂಬ್ಳೆ, ಗಂಗಾಧರ ಎಸ್.ಎಲ್. ಉಪಸ್ಥಿತರಿದ್ದರು.ಶಂಕರ ಬಡಿಗೇರ ಸ್ವಾಗತಿಸಿದರು. ಪೃಥ್ವಿರಾಜ ಬೆಟಗೇರಿ ಹಾಗೂ ಕಲವೀರೇಶ ಸೊರಬದ ನಿರೂಪಿಸಿದರು. ಸೋಮನಾಥ ಡಿ. ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))