ಕನ್ನಡಪ್ರಭ ಹಾಗೂ ಏಷ್ಯಾನೆಟ್ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.

ಕಾರವಾರ: ಗಡಿ ಪ್ರದೇಶದ ಶಾಲೆಗಳು ಮುಚ್ಚುತ್ತಿರುವ ಸಂದರ್ಭದಲ್ಲಿ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್ ಜಿಲ್ಲಾ ಮಟ್ಟದ ಗಡಿ ಪ್ರದೇಶದ ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.

ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ತಾಲೂಕಿನ ಅಸ್ನೋಟಿ ಶಿವಾಜಿ ವಿದ್ಯಾಮಂದಿರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ -2025ರ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಮಕ್ಕಳ ಪ್ರತಿಭೆಯನ್ನು ಗುರುತಿಸಲು ಕನ್ನಡಪ್ರಭ ಹಾಗೂ ಏಷಿಯಾನೆಟ್ ಸುವರ್ಣ ನ್ಯೂಸ್ ಈ ಚಿತ್ರಕಲಾ ಸ್ಪರ್ಧೆ ಆಯೋಜಿಸಿದ್ದಾರೆ. ಕೇವಲ ಶಾಲಾ ಪಠ್ಯದಲ್ಲಿ ಇರುವುದಷ್ಟೆ ಓದಿದರೆ ಸಾಲದು. ಜಗತ್ತಿನಲ್ಲಿ, ಊರಿನಲ್ಲಿ, ಜಿಲ್ಲೆ, ರಾಜ್ಯದಲ್ಲಿ ಏನು ನಡಿತಿದೆ ಎಂದು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಕೇವಲ ಮೊಬೈಲ್‌ ಗೀಳಿನಲ್ಲಿ ಬೀಳದೆ ಹೊರ ಪ್ರಪಂಚದ ಅರಿವು ಪಡೆದುಕೊಳ್ಳಬೇಕು ಎಂದರು.

ಗಡಿಭಾಗದಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ತೀವ್ರ ನೋವಿನ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಗಡಿ ಶಾಲೆಯಾದ ಶಿವಾಜಿ ವಿದ್ಯಾಮಂದಿರ ಕನ್ನಡವನ್ನು ಬೆಳೆಸುತ್ತಿದೆ. ಇಂದು ಒಬ್ಬರಿಗೆ ಪ್ರಶಸ್ತಿ ಸಿಕ್ಕಿದೆ, ಮತ್ತೊಬ್ಬರಿಗೆ ಸಿಕ್ಕಿಲ್ಲ ಎಂದು ಬೇಸರ ಮಾಡಿಕೊಳ್ಳಬಾರದು. ಪ್ರತಿಯೊಬ್ಬರೂ ತಮ್ಮಲ್ಲಿರುವ ಪ್ರತಿಭೆಯನ್ನು ಬೆಳೆಸಿಕೊಂಡು ಗಣನೀಯ ಸಾಧನೆ ಮಾಡಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾ.ಅ.) ಮಂಜುನಾಥ ನಾವಿ, ಮಾಧ್ಯಮ ಸಂಸ್ಥೆ ಅರಣ್ಯ ಜಾಗೃತಿ ಮೂಡಿಸುತ್ತಿರುವುದು ಪ್ರಶಂಸನೀಯ. ಮುಂದಿನ ಪೀಳಿಗೆಗೆ ನಾವು ಹಸಿರನ್ನು ಬಿಟ್ಟು‌ ಹೋಗಬೇಕು. ಉತ್ತರಕನ್ನಡ ಜಿಲ್ಲೆ ಹೆಚ್ಚಿನ ಭಾಗ ಅರಣ್ಯ ಭಾಗದಿಂದ ತುಂಬಿದ್ದು, ಪ್ರಪಂಚದ ಪ್ರಮುಖ ಅರಣ್ಯಭಾಗಗಳಲ್ಲಿ ಜಿಲ್ಲೆಯ ಪರ್ವತ ಶ್ರೇಣಿಗಳು ಸೇರಿವೆ. ಹುಲಿಗಳು, ಹಾರ್ನ್‌ಬಿಲ್, ವಿವಿಧ ಪ್ರಾಣಿ ಸಂತತಿ, ಸಸ್ಯ ಸಂತತಿಗಳಿವೆ. ಕಾಡು ಬೆಳೆಸುವ ಉದ್ದೇಶದಿಂದ ಈ ಶಿವಾಜಿ ಶಾಲೆಯ ಪರಿಸರಲ್ಲಿ ಮೂರು ಸಾವಿರ ಗಿಡಗಳನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ. ಅಲ್ಲದೇ, ವಿವಿಧ ಗಿಡಗಳ, ಪ್ರಭೇದಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ, ಮಾಹಿತಿ ನೀಡುವ ಕೆಲಸವಾಗುತ್ತದೆ. ಉಜ್ವಲ ಭವ್ಯ ಭಾರತ ಕಟ್ಟಲು ಮಕ್ಕಳ ಪಾತ್ರ ಪ್ರಮುಖವಾದುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಸ್ನೋಟಿ ಗ್ರಾಪಂ ಅಧ್ಯಕ್ಷ, ಅಸ್ನೋಟಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಂಜಯ ಜಿ.ಸಾಳುಂಕೆ, ಕನ್ನಡ ಶಾಲೆಗಳ ಬಗ್ಗೆ ಸರ್ಕಾರಕ್ಕೆ ಕಾಳಜಿಯಿಲ್ಲ. ಗಡಿಭಾಗಗಳ ಶಾಲೆಗಳು ಮುಚ್ಚುತ್ತಿದೆ. ಇದಕ್ಕೆ ಸರ್ಕಾರ ಕಾರಣ. ಆದರೆ ಗಡಿನಾಡಿನ ಶಾಲೆಗಳನ್ನು ಉಳಿಸಲು ನಾವು ಪ್ರಯತ್ನ ಪಡುತ್ತಿದ್ದೇವೆ. ಕನ್ನಡ ಪ್ರಭ- ಸುವರ್ಣ ನ್ಯೂಸ್ ಈ ಸ್ಪರ್ಧೆಯ ಮೂಲಕ ಕನ್ನಡ ಶಾಲೆಗಳ ಮಕ್ಕಳನ್ನು ಹಾಗೂ ಪರಿಸರ ಬೆಳೆಸಲು ಕೊಡುಗೆ ನೀಡುತ್ತಿದೆ ಎಂದರು. ‌

ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ.ಬಿ. ಹರಿಕಾಂತ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ತುತ್ಯಾರ್ಹ ಕೆಲಸ ಮಾಡಿದೆ ಎಂದು ಹೇಳಿದರು.

ಸ್ಪರ್ಧಾ ವಿಜೇತರಿಗೆ 3 ಸೈಕಲ್ ಗಳನ್ನು ಕೊಡುಗೆಯಾಗಿ ನೀಡಿದ ಸೈಕಲ್ ಝೋನ್ ಮಾಲಕ ಸಂದೀಪ ತಲಗುಂದ್, ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಯುವ ಮುಖಂಡ ಸುಭಾಷ್ ಗುನಗಿ ಶುಭ ಕೋರಿದರು.

ಕನ್ನಡಪ್ರಭದ ಹಿರಿಯ ವಿಶೇಷ ವರದಿಗಾರ ವಸಂತಕುಮಾರ್ ಕತಗಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಾಧ್ಯಾಪಕ ಗಣೇಶ ಭಿಷ್ಠಣ್ಣನವರ ನಿರೂಪಿಸಿದರು.

ಸುವರ್ಣ ನ್ಯೂಸ್ ಕ್ಯಾಮೆರಾಮನ್ ಗಿರೀಶ ನಾಯ್ಕ ವಂದಿಸಿದರು. ಶಿಕ್ಷಕ ತಿಪ್ಪೇಸ್ವಾಮಿ ಪರಿಸರ, ವನ್ಯಜೀವಿ ಕುರಿತ ಕಿರುಚಿತ್ರ ಪ್ರದರ್ಶಿಸಿದರು. ಸುವರ್ಣ ನ್ಯೂಸ್ ಜಿಲ್ಲಾ ವರದಿಗಾರ ಭರತರಾಜ್ ಕಲ್ಲಡ್ಕ, ಎಲ್.ಎಸ್. ಫರ್ನಾಂಡಿಸ್ ಹಾಗೂ ಶಿಕ್ಷಕರು ಸಹಕರಿಸಿದರು. ಎಲ್ಲ ಅತಿಥಿಗಳನ್ನು ಕನ್ನಡಪ್ರಭ ಹಾಗೂ ಸುವರ್ಣನ್ಯೂಸ್ ನಿಂದ ಸತ್ಕರಿಸಲಾಯಿತು. ಚಿತ್ರಕಲಾ ಸ್ಪರ್ಧೆ ವಿಜೇತರು

8ನೇ ತರಗತಿ

ದರ್ಶನ್ ನಾರಾಯಣ ಗಾವಡಾ, ಜೋಯಿಡಾ ಪ್ರಥಮ, ಈಶ್ವರ ನಾಗೇಂದ್ರ ಕದಂ ದಾಂಡೇಲಿ ದ್ವಿತೀಯ, ವಸಂತಿ ಬಾಂದೋಳ್ಕರ ತೃತೀಯ, ಅನಿಶಾ ದಯಾನಂದ ಗಾಂವಕರ ಸಮಾಧಾನಕರ ಬಹುಮಾನ ಪಡೆದರು.

9ನೇ ತರಗತಿ

ರಿತೇಶ ರಾಜೇಶ ನಾರ್ವೇಕರ ಜೋಯಿಡಾ ಪ್ರಥಮ, ಶ್ವೇತಾ ದೇವಳಿ ದ್ವಿತೀಯ, ಸಮರ್ಥ ಕುಂಬಾರ ತೃತೀಯ, ವಿನೋದ ಡಿ. ಗವಳಿ ಸಮಾಧಾನಕರ ಬಹುಮಾನ ಪಡೆದರು.

10ನೇ ತರಗತಿ

ನಿವೇಶ ಎಸ್. ವೇಳಿಪ್ ಪ್ರಥಮ, ಅಭಯ ಅಶೋಕ ಕೊಠಾರಕರ ದ್ವಿತೀಯ, ಮನೀಷಾ ದಯಾನಂದ ವೇಳಿಪ್ ತೃತೀಯ, ಪ್ರಜ್ವಲ್ ವೇಳಿಪ್ ಸಮಾಧಾನಕರ ಬಹುಮಾನ ಪಡೆದರು. ಯುವ ಆವೃತ್ತಿ ಬಿಡುಗಡೆ

ಕನ್ನಡಪ್ರಭದ ಯುವ ಆವೃತ್ತಿಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ಬಿಡುಗಡೆಗೊಳಿಸಿದರು. ಅತಿಥಿಗಳು ಯುವ ಆವೃತ್ತಿಯನ್ನು ಪ್ರಶಂಸಿಸಿದರು. ಕನ್ನಡಪ್ರಭದ ಪ್ರಸರಣಾ ವಿಭಾಗದ ಪ್ರತಿನಿಧಿ ಮೌಲಾಲಿ ಎಂ.ಕೊಟಗುಣಸಿ ಪಾಲ್ಗೊಂಡಿದ್ದರು.ವಿಜೇತರಿಗೆ ಸೈಕಲ್ ಝೋನ್ ಹಾಗೂ ಟಿಐ ಸೈಕಲ್ಸ್ ಕೊಡುಗೆ

ಕಾರವಾರ: ಚಿತ್ರಕಲಾ ಸ್ಪರ್ಧೆಯಲ್ಲಿ 8, 9 ಹಾಗೂ 10ನೇ ತರಗತಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಸೈಕಲ್ ಗಳನ್ನು ಬಹುಮಾನವಾಗಿ ನೀಡಲಾಯಿತು. ಟಿಐ ಸೈಕಲ್ಸ್ ಆಫ್ ಇಂಡಿಯಾ ಹಿರಿಯ ಮಾರಾಟ ಅಧಿಕಾರಿ ಅಜಿತ್ ಎನ್. ಚೌಹಾಣ ಹಾಗೂ ಸೈಕಲ್ ಝೋನ್ ಮಾಲಕ ಸಂದೀಪ ತಲಗುಂದ ಸೈಕಲ್ ಗಳನ್ನು ಪ್ರಾಯೋಜಿಸಿದ್ದರು. ಸೈಕಲ್ ಬಹುಮಾನ ಪಡೆದ ಬಗ್ಗೆ ವಿಜೇತ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು. ಅಜಿತ್ ಚೌಹಾಣ ಹಾಗೂ ಸಂದೀಪ ತಲಗುಂದ ವಿಜೇತರಿಗೆ ಸೈಕಲ್ ನೀಡಿ ಪ್ರೋತ್ಸಾಹಿಸಿದ ಬಗ್ಗೆ ಅತಿಥಿಗಳು ಮೆಚ್ಚುಗೆ ಸೂಚಿಸಿದರು.