ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸಲು ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಶಾಲಾ ಸಂಸತ್ತು ಅತ್ಯಗತ್ಯ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.ಅವರು ಭೈರಾಪುರದ ಬೆಥಸ್ದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಾಲಾ ಸಂಸತ್ತು ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿಸಿ ಮಾತನಾಡಿ, ಶಾಲಾ ಸಂಸತ್ತಿನ ಚುನಾವಣೆಗಳು ಸಾಮಾನ್ಯವಾಗಿ ವಿದ್ಯಾರ್ಥಿಗಳು ತಮ್ಮ ಹಿತಾಸಕ್ತಿಗಳನ್ನು ಪ್ರತಿಪಾದಿಸುವ ಮತ್ತು ಶಾಲಾ ಸಮುದಾಯದೊಳಗಿನ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅವಕಾಶ ಮಾಡಿಕೊಡುತ್ತವೆ. ಈ ಪ್ರತಿನಿಧಿಗಳು ಸಾಮಾನ್ಯವಾಗಿ ವಿದ್ಯಾರ್ಥಿಗಳು ಮತ್ತು ಶಾಲಾ ಆಡಳಿತದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ. ಇಂತಹ ಚುನಾವಣೆಗಳು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಪ್ರಕ್ರಿಯೆ, ಪ್ರಚಾರ ಮತ್ತು ನಾಯಕತ್ವದ ಬಗ್ಗೆ ಕಲಿಯಲು ಅಮೂಲ್ಯವಾದ ಅವಕಾಶಗಳನ್ನು ಒದಗಿಸುತ್ತವೆ. ಇದು ಆರೋಗ್ಯಕರ ಸ್ಪರ್ಧೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ವಿದ್ಯಾರ್ಥಿಗಳು ತಮ್ಮ ಸಾರ್ವಜನಿಕ ಭಾಷಣ, ಸಾಂಸ್ಥಿಕ ಮತ್ತು ತಂಡದ ಕೆಲಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಮಕ್ಕಳು, ಮಕ್ಕಳಿಂದ, ಮಕ್ಕಳಿಗಾಗಿ ಆಯ್ಕೆಯಾದ ಸದಸ್ಯರ ಒಂದು ಸಂಸ್ಥೆ ಅಥವಾ ಸಂಘವೇ ಶಾಲಾ ಮಕ್ಕಳ ಸಂಸತ್ ಆಗಿದೆ. ಮಕ್ಕಳ ಸಂಸತ್‌ನಲ್ಲಿ ಮಕ್ಕಳೇ ಸಂಪೂರ್ಣ ಭಾಗಿದಾರರಾಗಿರುತ್ತಾರೆ. ತಮ್ಮ ಹಕ್ಕುಗಳನ್ನು ಪಡೆಯುವ ಮೂಲಕ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಕಲಿಯುವ ವೇದಿಕೆ. ಮಕ್ಕಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಣ ಮೌಲ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಸಂಸತ್ ಹೆಚ್ಚು ಮಹತ್ವ ಪಡೆದಿದೆ ಎಂದರು.
ಪ್ರಾಂಶುಪಾಲೆ ರೀನಾ ಮ್ಯಾಥೀವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಅಭಿವೃದ್ಧಿ ಪಡಿಸುವ ಅಗತ್ಯತೆ ಎದ್ದು ಕಾಣುತ್ತಿದೆ. ಮಕ್ಕಳಲ್ಲಿ ಇಂತಹ ಗುಣಗಳನ್ನು ಬೆಳೆಸುವಲ್ಲಿ ಮಕ್ಕಳ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಸಂಸತ್ ಎಂಬುದು ಮಕ್ಕಳ ಪ್ರಾತಿನಿಧಿಕ ರಚನೆಯಾಗಿದ್ದು, ಶಾಲಾ ಸಿಬ್ಬಂದಿ ಜೊತೆ ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನೂ ಪಾಲುದಾರರನ್ನಾಗಿ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಜವಾಬ್ದಾರಿ ನಿರ್ವಹಣೆಯ ಜೊತೆಗೆ ಶಾಲಾ ಆಡಳಿತದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ ಜವಾಬ್ದಾರಿಯುತ ಭಾವಿ ನಾಗರಿಕರನ್ನು ಬೆಳೆಸಲು ಅನುಕೂಲವಾಗುತ್ತದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾಜ ಸೇವಕ ಎಂ. ಬಾಲಕೃಷ್ಣ ಮಾತನಾಡಿ, ಮಕ್ಕಳೂ ಸಹ ದೇಶದ ಪ್ರಜೆಗಳಾಗಿರುವುದರಿಂದ ಶಾಲಾ ಕಲಿಕೆಯ ಜೊತೆಜೊತೆಗೆ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು. ಈ ಹಿನ್ನೆ ಲೆಯಲ್ಲಿ ಮಕ್ಕಳ ಸಂಸತ್ತು ಹೆಚ್ಚು ಮಹತ್ವ ಪಡೆದಿದೆ. ಶಾಲೆಯ ಪ್ರತಿಯೊಂದು ಚಟುವಟಿಕೆ ಹಾಗೂ ಕಾರ್ಯಕ್ರಮಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಮತ್ತು ಅಭಿವ್ಯಕ್ತಿ ಪ್ರಕ್ರಿಯೆ ಅತ್ಯಂತ ಮಹತ್ವದ್ದು. ಶಾಲೆಗೆ ಸಂಬಂಧಿಸಿದ ಕೆಲ ಚಟುವಟಿಕೆಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳಲು ಮಕ್ಕಳೂ ಕೂಡ ಅರ್ಹರು. ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ ಮಕ್ಕಳಿಗೆ ಸಂಬಂಧಿಸಿದ ಪ್ರತಿಯೊಂದು ಚಟುವಟಿಕೆ ಹಾಗೂ ನಿರ್ಣಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಮಕ್ಕಳಿಗೆ ಇದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಮ್ಯಾಥೀವ್ ವರ್ಗೀಸ್, ಹಿರಿಯ ಶಿಕ್ಷಕ ನಾಗೇಂದ್ರ, ಶುಭಾ, ಪತ್ರಕರ್ತ ಟಿ.ಕೆ. ಕುಮಾರಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸುನಿಲ್, ಶಿಲ್ಪ ಕೃತಿ ಹಾಗೂ ಸಿಂಹ ಶಿಕ್ಷಕಿಯರಾದ ಸೌಮ್ಯ ಚೌತ, ಐಶ್ವರ್ಯ ಕಾರ್ಯಕ್ರಮ ನಿರ್ವಹಿಸಿದರು.