ಸಾರಾಂಶ
ದರದಲ್ಲಿ ಸ್ಥಿರತೆ, ನಿರಾತಂಕವಾಗಿ ಮುಗಿದ ಟೆಂಡರ್ ಪ್ರಕ್ರಿಯೆ ಕನ್ನಡಪ್ರಭ ವಾರ್ತೆ ಬ್ಯಾಡಗಿ
ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ಎರಡನೇ ಬಾರಿಗೆ 3 ಲಕ್ಷ ಮೆಣಸಿನಕಾಯಿ ಚೀಲ ಆವಕವಾಗಿದ್ದು, 3 ತಳಿಗಳ ದರದಲ್ಲಿ ಸ್ಥಿರತೆ ಕಂಡು ಬಂದಿದೆ.ಕಳೆದ ಗುರುವಾರವಷ್ಟೇ (ಮಾರುಕಟ್ಟೆ ಆರಂಭವಾದ ದಿನದಿಂದ) ಇತಿಹಾಸದಲ್ಲಿಯೇ ಅತ್ಯಧಿಕ ಎಂಬಂತೆ ಮಾರುಕಟ್ಟೆಗೆ ಒಟ್ಟು 3.33 ಲಕ್ಷ ಮೆಣಸಿನಕಾಯಿ ಚೀಲ ಆವಕಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿತ್ತು. ಇದೀಗ ಮತ್ತೆ ಆವಕದ ಗಡಿ 3.01 (301934) ಲಕ್ಷ ದಾಟಿದ್ದು ಎರಡನೇ ಅತೀ ಹೆಚ್ಚು ಆವಕವೆನಿಸಿದೆ.
ಸೋಮವಾರ ಮಾರುಕಟ್ಟೆ ಅಕ್ಷರಶಃ ಮೆಣಸಿನಕಾಯಿ ಚೀಲಗಳಿಂದ ತುಂಬಿ ಹೋಗಿತ್ತು, ಕಣ್ಣು ಹಾಯಿಸಿದಷ್ಟು ಸಾಗರದಂತೆ ಮೆಣಸಿನಕಾಯಿ ಚೀಲಗಳೇ ಕಂಡು ಬಂದವು. ಕಳೆದ ಹಲವು ವರ್ಷಗಳಿಂದ 1-2 ಲಕ್ಷದ ಆಸುಪಾಸಿನಲ್ಲಿದ್ದ ಆವಕ ಕಳೆದ 2 ವಾರದಲ್ಲಿ ಗಣನೀಯ ಏರಿಕೆ ಕಂಡು ಬಂದ ಕಾರಣ 3 ಲಕ್ಷದ ಗಡಿ ದಾಟುವಂತಾಗಿದೆ.ದರದಲ್ಲಿ ಸ್ಥಿರತೆ: ಒಟ್ಟು 301934 ಅಧಿಕ ಮೆಣಸಿನಕಾಯಿ ಚೀಲಗಳು ಮಾರುಕಟ್ಟೆಗೆ ಆಗಮಿಸಿದ ಕಾರಣ ನೂರಾರು ವಾಹನಗಳಲ್ಲಿ ಸಾವಿರಾರು ಚೀಲಗಳು ಅನಲೋಡ್ ಆಗದೇ ಉಳಿದವು. ಉಳಿದಂತೆ ಸೋಮವಾರ ಆವಕ ಮತ್ತೊಮ್ಮೆ 3 ಲಕ್ಷದ ಗಡಿ ದಾಟಿದ್ದರೂ ಸಹ ಸರಾಸರಿ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕಡ್ಡಿ, ಡಬ್ಬಿ ಗುಂಟೂರ ತಳಿ ಮೆಣಸಿನಕಾಯಿ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
ಸೋಮವಾರದ ಮಾರುಕಟ್ಟೆ ದರ:ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹2389, ಗರಿಷ್ಠ ₹38091, ಸರಾಸರಿ ₹34059, ಡಬ್ಬಿ ತಳಿ ಕನಿಷ್ಠ ₹3069, ಗರಿಷ್ಠ ₹55009, ಸರಾಸರಿ ₹38529, ಗುಂಟೂರು ಕನಿಷ್ಠ ₹1589, ಗರಿಷ್ಠ ₹18129, ಸರಾಸರಿ ₹13589 ಗೆ ಮಾರಾಟವಾಗಿವೆ.
29 ರಂದು ಮಾರುಕಟ್ಟೆಗೆ ರಜೆ:ಇಲ್ಲಿನ ಮಾರುಕಟ್ಟೆಗೆ ನಿರಂತರವಾಗಿ ಮೆಣಸಿನಕಾಯಿ ಬರುತ್ತಿದ್ದು, ಬಳ್ಳಾರಿ ಜಿಲ್ಲೆಯ ಸುಕ್ಷೇತ್ರ ಮೈಲಾರ ಜಾತ್ರೆಯ ನಿಮಿತ್ತ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಮಾರುಕಟ್ಟೆಯಲ್ಲಿ ಚೀಲಗಳ ವಿಲೇವಾರಿ ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆ ಗುರುವಾರ ಫೆ.29 ರಂದು ವರ್ತಕರು ಟೆಂಡರ್‌ನಿಂದ ಹಿಂದೆ ಸರಿದಿದ್ದು ಮಾರುಕಟ್ಟೆಗೆ ರಜೆ ಘೋಷಿಸಲಾಗಿದೆ.