ಸಾರಾಂಶ
ಬ್ಯಾಡಗಿ: ಶನಿವಾರ ಸಂಜೆ ತಾಲೂಕಿನಾದ್ಯಂತ ಗುಡುಗು ಮಿಂಚು ಸಹಿತ ಸುರಿದ ಮಳೆ ಗಾಳಿಗೆ ಮುಖ್ಯರಸ್ತೆ ಸೇರಿದಂತೆ ಇನ್ನಿತರ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಗಾಳಿಯ ವೇಗಕ್ಕೆ ಪಟ್ಟಣದ ಕಾಕೋಳ ರಸ್ತೆಯಲ್ಲಿ ಮರವೊಂದು ನೆಲಕ್ಕುರುಳಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಆದರೆ ಯಾವುದೇ ಸಾವು ನೋವು ಸಂಭವಿಸಿದ ಕುರಿತು ವರದಿಯಾಗಿಲ್ಲ.
ಬೆಳಗ್ಗೆಯಿಂದಲೂ 40 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಸಂಜೆ 4 ಗಂಟೆಯಿಂದ ಮೋಡ ಕವಿದ ವಾತಾವರಣ ಆರಂಭವಾಗಿ ಮಳೆ ಸುರಿಯುವ ಎಲ್ಲಾ ಲಕ್ಷಣಗಳಿದ್ದವು ಆದರೂ ಸಹ ಒಂದೇ ಒಂದು ಮಳೆಹನಿ ನೆಲಕ್ಕೆ ಬೀಳಲಿಲ್ಲ, ಆದರೆ ಸಂಜೆ 6 ಗಂಟೆಯಾಗುತ್ತಿದ್ದಂತೆ ಗುಡುಗು ಮಿಂಚು ಆರಂಭವಾಯಿತು. 10 ನಿಮಿಷದ ಬಳಿಕ ಒಂದೇ ಸಮನೆ ಏಕಾಏಕಿ ಮಳೆ ಸುರಿಯಲಾರಂಭಿಸಿತು. ಅದರಲ್ಲೂ ದೊಡ್ಡದೊಡ್ಡ ಹನಿಗಳೊಂದಿಗೆ ಅರಂಭವಾದ ಮಳೆ ಕೆಲವೇ ನಿಮಿಷಗಳಲ್ಲಿ ಪಟ್ಟಣದಾದ್ಯಂತ ನೀರು ಸಂಗ್ರಹಗೊಂಡು ತಗ್ಗು ಪ್ರದೇಶಗಳು ಜಲಾವೃತಗೊಂಡವು. ಅದರಲ್ಲೂ ಮುಖ್ಯರಸ್ತೆಯಲ್ಲಿ ಚರಂಡಿಗಳು ತುಂಬಿ ರಸ್ತೆಯ ಮೇಲೆಲ್ಲಾ ನೀರು ಹರಿದು ವಾಹನ ಸಂಚಾರ ವ್ಯತ್ಯಯಗೊಂಡಿತು.ತಾಡಪಲ್‌ಗಳಿಂದ ಮೆಣಸಿನಕಾಯಿ ಬಚಾವ್: ಶನಿವಾರ ಸಂಜೆ ಸುರಿದ ಮಳೆಗೆ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಸೇರಿದಂತೆ ಮೆಣಸಿನಕಾಯಿ ನಗರಿ ಕೆಲಕಾಲ ಬೆಚ್ಚಿ ಬೀಳುವಂತಾಯಿತು. ಏಕಾಏಕಿ ಸುರಿದ ಮಳೆಯಿಂದಾಗಿ, ಮೆಣಸಿನಕಾಯಿ ರಾಶಿಗಳನ್ನು ತಾಡಪಲಗಳಿಂದ ಮುಚ್ಚುವಲ್ಲಿ ಕಾರ್ಮಿಕರು ಹರಸಾಹಸ ಪಡುತ್ತಿದ್ದ ದೃಶ್ಯಗಳು ಕಂಡು ಬಂದವು.ಹಾಳಾದ ಸಂತೆ ದುಬಾರಿ ತರಕಾರಿ ನೀರಿಗೆ:ಶನಿವಾರ ಬ್ಯಾಡಗಿ ಪಟ್ಟಣದಲ್ಲಿ ಸಂತೆಯ ದಿನವಾಗಿದ್ದು, ಮಧ್ಯಾಹ್ನ ಬಿಸಿಲಿಗೆ ಮಹಿಳೆಯರು ಹೊರಬಂದು ಸಂತೆಯ ಕಡೆಗೆ ತಲೆ ಹಾಕಿರಲಿಲ್ಲ. ಇನ್ನೇನು ಸಂಜೆ ವೇಳೆ ಸಂತೆಗೆ ಹೋಗುವ ಹೊತ್ತಿಗೆ ಗುಡುಗು ಮಿಂಚು ಪ್ರಾರಂಭವಾಯಿತಲ್ಲದೇ ಬಳಿಕ ಮಳೆ ಸುರಿಯಲಾರಂಭಿಸಿತು. ಇದರಿಂದ ಸಂತೆಯಲ್ಲಿ ಮಾರಾಟವಾಗಬೇಕಿದ್ದ ದುಬಾರಿ ತರಕಾರಿ ನೀರಲ್ಲಿ ತೇಲಿ ಹೋಯಿತು.ಮರ ತೆರವುಗೊಳಿಸಿದ ಪೊಲೀಸರು: ಶನಿವಾರ ಸಂಜೆ ಸುರಿದ ಮಳೆಗಾಳಿಗೆ ಸ್ಥಳೀಯ ನ್ಯಾಯಾಲಯದ ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶರಾದ ಎಸ್.ಟಿ. ಸತೀಶ ಅವರ ನಿವಾಸದ ಮುಂದಿರುವ ಬೃಹತ್ ಬೇವಿನಮರವೊಂದು ಧರೆಗುರುಳಿದ್ದು ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲಿಲ್ಲ. ಮರವು ಧರೆಗೆ ಬೀಳುವ ಮುನ್ನ ವಿಚಿತ್ರವಾದ ಶಬ್ದವೊಂದು ಕೇಳಿಸಿತಾದರೂ ಮರ ಧರೆಗೆ ಉರುಳುವುದೆಂದು ಊಹಿಸಿರಲಿಲ್ಲ, ಆದಾದ 10 ನಿಮಿಷದಲ್ಲಿ ಬಹುದೊಡ್ಡ ಶಬ್ದದೊಂದಿಗೆ ಬೇವಿನ ಮರ ರಸ್ತೆಗೆ ಅಡ್ಡಲಾಗಿ ನೆಲಕ್ಕುರುಳಿತು. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಿಪಿಐ ಮಹಾಂತೇಶ ಲಂಬಿ, ಪಿಎಸ್ಐ ಅರವಿಂದ ಹಾಗೂ ಪುರಸಭೆ ಸಿಬ್ಬಂದಿ ಜೆಸಿಬಿ ಸಹಕಾರದಿಂದ ರಸ್ತೆಯಲ್ಲಿ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.