ಹನುಮಸಾಗರ ಹೋಬಳಿಯ ಮಿಯಾಪುರ ಗ್ರಾಮದ ರೈತ ಶರಣಪ್ಪ ಬಾಳಪ್ಪ ಬೇವೂರು ಅವರು ಕೇವಲ ಒಂದು ಇಂಚಿನ ಬೋರ್ವೆಲ್ ನೀರಿನ ಆಶ್ರಯದಲ್ಲಿ ಮೂರು ಎಕರೆ ಪ್ರದೇಶದಲ್ಲಿ ಸಿಂಜೆಂಟಾ ಕಂಪನಿಯ 5531 ತಳಿಯ ಒಣಮೆಣಸಿನಕಾಯಿ ಬೆಳೆದಿದ್ದಾರೆ.
ಪರಶಿವಮೂರ್ತಿ ಮಾಟಲದಿನ್ನಿ
ಕುಷ್ಟಗಿ: ಒಂದು ಕಡೆ ಮಳೆ ಕೈಕೊಟ್ಟಿದೆ, ಮತ್ತೊಂದು ಕಡೆ ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ನೀರಿನ ಕೊರತೆಯಿಂದ ಕೃಷಿಯೇ ಸವಾಲಾಗಿರುವ ಬರಪೀಡಿತ ಕುಷ್ಟಗಿ ತಾಲೂಕಿನಲ್ಲಿ, ಅಲ್ಪ ನೀರಿನಲ್ಲಿಯೇ ಒಣಮೆಣಸಿನಕಾಯಿ ಬೆಳೆದು ಲಕ್ಷಾಂತರ ರುಪಾಯಿ ಆದಾಯದ ನಿರೀಕ್ಷೆ ಮೂಡಿಸಿರುವ ರೈತರೊಬ್ಬರ ಪ್ರಯತ್ನ ಗಮನ ಸೆಳೆದಿದೆ.ತಾಲೂಕಿನ ಹನಮಸಾಗರ ಹೋಬಳಿಯ ಮಿಯಾಪುರ ಗ್ರಾಮದ ರೈತ ಶರಣಪ್ಪ ಬಾಳಪ್ಪ ಬೇವೂರು ಅವರು ಕೇವಲ ಒಂದು ಇಂಚಿನ ಬೋರ್ವೆಲ್ ನೀರಿನ ಆಶ್ರಯದಲ್ಲಿ ಮೂರು ಎಕರೆ ಪ್ರದೇಶದಲ್ಲಿ ಸಿಂಜೆಂಟಾ ಕಂಪನಿಯ 5531 ತಳಿಯ ಒಣಮೆಣಸಿನಕಾಯಿ ಬೆಳೆದಿದ್ದಾರೆ. ನೀರಿನ ಅಭಾವದ ನಡುವೆಯೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಲಭ್ಯವಿರುವ ಅಲ್ಪ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ.
ಸಾಂಪ್ರದಾಯಿಕ ಬೆಳೆಗಳಿಗೆ ಪರ್ಯಾಯ: ವರ್ಷದಿಂದ ವರ್ಷಕ್ಕೆ ಕೃಷಿ ವೆಚ್ಚ ಹೆಚ್ಚಳ, ಮಳೆಯ ಅನಿಶ್ಚಿತತೆ ಹಾಗೂ ಸಾಂಪ್ರದಾಯಿಕ ಬೆಳೆಗಳಿಂದ ನಿರೀಕ್ಷಿತ ಆದಾಯ ಬಾರದಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆಯತ್ತ ಮುಖ ಮಾಡಿರುವ ಶರಣಪ್ಪ, ಕಡಿಮೆ ನೀರಿನಲ್ಲಿ ಉತ್ತಮ ಆದಾಯ ನೀಡಬಹುದೆಂಬ ನಿರೀಕ್ಷೆಯಿಂದ ಒಣಮೆಣಸಿನಕಾಯಿ ಕೃಷಿಗೆ ಮುಂದಾಗಿದ್ದಾರೆ. ಸದ್ಯ ಬೆಳೆ ಉತ್ತಮವಾಗಿ ಬಂದಿದ್ದು, ರೈತನಲ್ಲಿ ಹೊಸ ಭರವಸೆ ಮೂಡಿಸಿದೆ.20 ಕ್ವಿಂಟಲ್ ಇಳುವರಿಯ ನಿರೀಕ್ಷೆ: ಮೂರು ಎಕರೆ ಪ್ರದೇಶದಿಂದ ಸುಮಾರು 2 ಸಾವಿರ ಕೆ.ಜಿ. (20 ಕ್ವಿಂಟಲ್) ಒಣಮೆಣಸಿನಕಾಯಿ ಇಳುವರಿ ಪಡೆಯುವ ನಿರೀಕ್ಷೆಯಿದೆ. ಪ್ರತಿ ಕೆ.ಜಿ.ಗೆ ಸರಾಸರಿ ₹80 ಬೆಲೆ ದೊರೆತರೆ ₹16 ಲಕ್ಷ ಒಟ್ಟು ಆದಾಯ ಬರಬಹುದು. ಕೃಷಿ ನಿರ್ವಹಣೆ, ಗೊಬ್ಬರ, ಔಷಧ ಸೇರಿದಂತೆ ₹2.5ರಿಂದ ₹3 ಲಕ್ಷ ವೆಚ್ಚವಾಗುವ ಅಂದಾಜಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಸುಮಾರು ₹13 ಲಕ್ಷ ನಿವ್ವಳ ಲಾಭ ಗಳಿಸಬಹುದು ಎಂಬ ಲೆಕ್ಕಾಚಾರ ರೈತರದ್ದಾಗಿದೆ.
ಇತರ ರೈತರಿಗೂ ಪ್ರೇರಣೆ: ನೀರಿನ ಲಭ್ಯತೆಗೆ ಅನುಗುಣವಾಗಿ ಬೆಳೆ ಆಯ್ಕೆ ಮಾಡಿಕೊಂಡು, ಹನಿ ನೀರಾವರಿ ಹಾಗೂ ವೈಜ್ಞಾನಿಕ ನಿರ್ವಹಣೆಗೆ ಆದ್ಯತೆ ನೀಡಿದರೆ ಕೃಷಿಯಲ್ಲಿ ಉತ್ತಮ ಆದಾಯ ಗಳಿಸಲು ಸಾಧ್ಯ ಎಂಬುದನ್ನು ಶರಣಪ್ಪ ಅವರ ಪ್ರಯೋಗ ತೋರಿಸಿಕೊಟ್ಟಿದೆ. ಬರದ ನಾಡಿನ ರೈತರು ಸಾಂಪ್ರದಾಯಿಕ ಬೆಳೆಗಳ ಜತೆಗೆ ಪರ್ಯಾಯ ಬೆಳೆಗಳ ಬಗ್ಗೆಯೂ ಚಿಂತನೆ ನಡೆಸಬೇಕೆಂಬ ಸಂದೇಶ ಇವರ ಕೃಷಿ ಪ್ರಯತ್ನದಲ್ಲಿದೆ.ತೋಟಗಾರಿಕೆ ಇಲಾಖೆಯಿಂದ ಮಾರ್ಗದರ್ಶನ:
ಕುಷ್ಟಗಿ ತಾಲೂಕಿನಲ್ಲಿ ಸುಮಾರು 30 ರೈತರು ಮಾತ್ರ ಒಣಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಈ ಬೆಳೆ ಹೆಚ್ಚಿನ ಪ್ರಮಾಣದಲ್ಲಿದೆ. ಕುಷ್ಟಗಿ ತಾಲೂಕಿನಲ್ಲಿಯೂ ಉತ್ತಮ ಅವಕಾಶವಿರುವುದರಿಂದ ತೋಟಗಾರಿಕೆ ಇಲಾಖೆಯು ಹನಿ ನೀರಾವರಿ, ಬೆಳೆ ನಿರ್ವಹಣೆ ಹಾಗೂ ಲಭ್ಯವಿರುವ ಸಹಾಯಧನದ ಕುರಿತು ರೈತರಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತಿದೆ.ನೀರಿನ ಸೌಲಭ್ಯ ಕಡಿಮೆ: ನಮ್ಮ ಜಮೀನಿನಲ್ಲಿ ನೀರಿನ ಸೌಲಭ್ಯ ತುಂಬಾ ಕಡಿಮೆ. ಕೇವಲ ಒಂದು ಇಂಚಿನ ಬೋರ್ವೆಲ್ ನೀರಿನಲ್ಲಿ ಮೂರು ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದೇನೆ. ಹನಿ ನೀರಾವರಿಯಿಂದ ನೀರನ್ನು ಮಿತವಾಗಿ ಬಳಸಿಕೊಳ್ಳಲು ಸಾಧ್ಯವಾಗಿದೆ. ಸಾಂಪ್ರದಾಯಿಕ ಬೆಳೆಗಳಿಂದ ನಿರೀಕ್ಷಿತ ಆದಾಯ ಸಿಗದ ಹಿನ್ನೆಲೆಯಲ್ಲಿ ಈ ಪ್ರಯೋಗ ಮಾಡಿದ್ದೇನೆ. ಸುಮಾರು 20 ಕ್ವಿಂಟಲ್ ಒಣಮೆಣಸಿನಕಾಯಿ ಇಳುವರಿ ಬರುವ ನಿರೀಕ್ಷೆಯಿದೆ. ಉತ್ತಮ ಬೆಲೆ ದೊರೆತರೆ ₹13 ಲಕ್ಷ ಲಾಭ ಸಿಗಬಹುದು ಎಂದು ಮಿಯಾಪುರದ ರೈತ ಶರಣಪ್ಪ ಬೇವೂರು ತಿಳಿಸಿದರು.
ಹನಿ ನೀರಾವರಿ ಪದ್ಧತಿ: ಕುಷ್ಟಗಿ ತಾಲೂಕಿನಲ್ಲಿ ಮಳೆ ಹಾಗೂ ನೀರಿನ ಅಭಾವ ಇರುವುದರಿಂದ ರೈತರು ಪರ್ಯಾಯ ಬೆಳೆಗಳತ್ತ ಗಮನಹರಿಸುವುದು ಅಗತ್ಯ. ಒಣಮೆಣಸಿನಕಾಯಿ ಬೆಳೆಗೆ ನಮ್ಮ ಭಾಗದಲ್ಲಿಯೂ ಉತ್ತಮ ಅವಕಾಶವಿದೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಕಡಿಮೆ ನೀರಿನಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯ. ಇಲಾಖೆಯಿಂದ ವಿವಿಧ ಯೋಜನೆಗಳು ಹಾಗೂ ಸಹಾಯಧನದ ಕುರಿತು ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಹೆಚ್ಚಿನ ರೈತರು ಈ ಬೆಳೆಯತ್ತ ಆಸಕ್ತಿ ತೋರಬೇಕು ಎಂಬುದು ಇಲಾಖೆಯ ಆಶಯವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶಿವಯೋಗಿ ತಿಳಿಸಿದರು.