Chimmanchod Bandh demanding release of water into the river proves successful
-ಬೃಹತ್ ರಸ್ತೆ ತಡೆ ಚಳವಳಿ । ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಕೆ
--ಕನ್ನಡಪ್ರಭ ವಾರ್ತೆ ಚಿಂಚೋಳಿ
ಚಿಮ್ಮನಚೋಡ ಜಲಾಶಯದಿಂದ ಮುಲ್ಲಾಮಾರಿ ನದಿಗೆ ತಕ್ಷಣ ನೀರು ಹರಿಸಬೇಕು ಹಾಗೂ ವಿವಿಧ ಮೂಲಭೂತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ರೈತರು ಮತ್ತು ಸಾರ್ವಜನಿಕರು ಚಿಮ್ಮನಚೋಡ ಗ್ರಾಮ ಸಂಪೂರ್ಣ ಬಂದ್ ಮಾಡಿ, ಬೃಹತ್ ರಸ್ತೆ ತಡೆ ಚಳವಳಿ ನಡೆಸಿ, ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.ಬೆಳಿಗ್ಗೆಯಿಂದಲೇ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಬೆಂಬಲ ಸೂಚಿಸಿದ ಗ್ರಾಮಸ್ಥರು ಹಾಗೂ ನೂರಾರು ರೈತರು ಚಿಮ್ಮನಚೋಡ ಗ್ರಾಮದ ಅಂಬಿಗರ ಚೌಡಯ್ಯ ಚೌಕ್ನಲ್ಲಿ ಜಮಾಯಿಸಿ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ತಡೆಯಿಂದಾಗಿ ತಾಲೂಕಿನ ಪ್ರಮುಖ ಮಾರ್ಗಗಳಲ್ಲಿ ಕೆಲ ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.ಪ್ರತಿಭಟನೆಯಲ್ಲಿ ಚಿಮ್ಮನಚೋಡ ಮಾತ್ರವಲ್ಲದೆ ಕನಕಪುರ, ತಾಜಲಾಪೂರ, ಗೌಡನಹಳ್ಳಿ, ನಿಮಾಹೊಸಳ್ಳಿ, ದೋಟಿಕೋಳ, ಗಾರಂಪಳ್ಳಿ, ಪರದಾರ, ಮೋತಕಪಳ್ಳಿ, ಗಂಗನಪಳ್ಳಿ, ಗರಗಪಳ್ಳಿ, ಬುರಗಪಳ್ಳಿ ಹಾಗೂ ಇರಗಪಳ್ಳಿ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ನೂರಾರು ರೈತರು ಭಾಗವಹಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ನೀರಿನ ಹಾಹಾಕಾರ: ಮುಲ್ಲಾಮಾರಿ ನದಿ ಪಾತ್ರದ ಗ್ರಾಮಗಳಲ್ಲಿ ಕುಡಿವ ನೀರಿನ ತೀವ್ರ ಅಭಾವ ಉಂಟಾಗಿದ್ದು, ಜನ-ಜಾನುವಾರುಗಳು ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನದಿಯಲ್ಲಿ ನೀರಿಲ್ಲದೆ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ತಾ.ಪ. ಮಾಜಿ ಉಪಾಧ್ಯಕ್ಷ ಶರಣರೆಡ್ಡಿ ಮೊಗಲಪ್ಪನೋರ, ಅಧಿಕಾರಿಗಳ ಬೇಜವಾಬ್ದಾರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಬಾವಿ ಹಾಗೂ ಬೋರ್ವೆಲ್ ಬತ್ತಿ ಕುಡಿವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ತೀರ್ಮಾನ ಕೈಗೊಂಡು, ನೀರು ಪೂರೈಸುವ ಸ್ಪಷ್ಟ ಭರವಸೆ ನೀಡಬೇಕೆಂದು ಆಗ್ರಹಿಸಿದರು.ಚಿಮ್ಮನಚೋಡ ಜಲಾಶಯದಿಂದ ನದಿಗೆ ನೀರು ಬಿಟ್ಟರೆ ನದಿ ದಂಡೆಯಲ್ಲಿರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಅನುಕೂಲ ಆಗಲಿದೆ ಎಂದು ರಾಮರೆಡ್ಡಿ ಪಾಟೀಲ್, ಮಲ್ಲುಕೊಡಂಬಲ್, ಜಗನ್ನಾಥರೆಡ್ಡಿ, ಬಂಡಾರೆಡ್ಡಿ, ವೀರಭದ್ರಪ್ಪ ಮಲಕೂಡ ಹಾಗೂ ಜಾವೀದ್ ಪಟೇಲ್ ಪ್ರತಿಭಟನೆಯಲ್ಲಿ ಮಾತನಾಡಿ ನದಿಗೆ ನೀರು ಬಿಡಲು ಮನವಿ ಮಾಡಿದರು.
ಮಾತಿನ ಚಕಮಕಿ: ನಿವೃತ್ತ ಮುಖ್ಯ ಇಂಜಿನಿಯರ್ ಸಂಗಮೇಶ್ ರಗಟೆ, ಜಿಲ್ಲಾಧಿಕಾರಿಗಳು ಚಿಂಚೋಳಿ ತಾಲೂಕಿನ ಅಧಿಕಾರಿಗಳೊಂದಿಗೆ ಚರ್ಚೆ ಬಳಿಕ ಸಭೆಯಲ್ಲಿ ರೈತರಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದು ತಹಸೀಲ್ದಾರ್ ಅವರನ್ನು ಒತ್ತಾಯಿಸಿದರು. ಈ ಮಧ್ಯೆ ಮಾತಿನ ಚಕಮಕಿ ನಡೆಯಿತು.ಎಇಇ ಅಮೃತ್ ಪವಾರ್ ಮಾತನಾಡಿ, ಪ್ರಸ್ತುತ ಜಲಾಶಯದಲ್ಲಿ ಶೇಕಡಾ 75ರಷ್ಟು ನೀರಿನ ಪ್ರಮಾಣ ಲಭ್ಯವಿದೆ ಎಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾ.ಪಂ ಇಒ ಸಂತೋಷ್ ಚೌವ್ಹಾಣ್ ಮಾತನಾಡಿ, ಗ್ರಾಮಸ್ಥರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಈ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರ ಖಂಡಿತ ಸ್ಪಂದಿಸಲಿದೆ. ಜಿಲ್ಲಾಧಿಕಾರಿಗಳು ನಿಮ್ಮ ಕುಡಿಯುವ ನೀರಿನ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಲಿದ್ದಾರೆ ಎಂದು ಹೇಳಿದರು.ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಶೀಘ್ರ ಟಾಸ್ಕ್ ಫೋರ್ಸ್ ಸಭೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಪೂರ್ಣ ವರದಿ ಸಲ್ಲಿಸಲಾಗುವುದು. ಮುಲ್ಲಾಮಾರಿ ನೀರಾವರಿ ಜಲಾಶಯದಿಂದ ನದಿಗೆ ನೀರು ಬಿಡಲಾಗುವುದು " ಎಂದು ಭರವಸೆ ನೀಡಿದರು.
ಫೋಟೊ:29ಜಿಯು.ಸಿಎಚ1ಚಿಂಚೋಳಿ ತಾಲೂಕಿನ ನಾಗರಾಳ ಗ್ರಾಮದ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯಿಂದ ನದಿಗೆ ನೀರು ಬಿಡುವಂತೆ ಆಗ್ರಹಿಸಿ ರೈತರು ಧರಣಿ ಸತ್ಯಾಗ್ರಹ ನಡೆಸಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
--ಫೋಟೊ: ನಿವೃತ್ತ ನೀರಾವರಿ ಇಂಜಿನಿಯರ್ ಸಂಗಮೇಶ್ ಮತ್ತು ತಹಸೀಲ್ದಾರ ಮಧ್ಯೆ ಮಾತಿನ ಚಕಮಕಿ ನಡೆಯಿತು.
