ಸಾರಾಂಶ
ಕನ್ನಡಪ್ರಭ ವಾತೆ ಬೆಂಗಳೂರು
ಜಾಗತಿಕವಾಗಿ ಇಂಗಾಲ ಸೂಸುವಿಕೆ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವಲ್ಲಿ ಅರ್ಧಕ್ಕಿಂತಲೂ ಹೆಚ್ಚು ಇಂಗಾಲ ಸೂಸುತ್ತಿರುವ ಚೀನಾ, ಭಾರತ ಮತ್ತು ಅಮೆರಿಕ ಜವಾಬ್ದಾರಿ ಬಹಳ ದೊಡ್ಡದಿದೆ ಎಂದು ಬರ್ಮಿಂಗ್ ಹ್ಯಾಮ್ ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ.ಅಲೆಕ್ಸ್ ಡೆರೊಯ್ಟೆರ್ ಹೇಳಿದ್ದಾರೆ.ಭಾನುವಾರ ಬೆಂಗಳೂರು ನಗರ ವಿಶ್ವ ವಿದ್ಯಾನಿಲಯವು ಯುನೈಟೆಡ್ ಕಿಂಗ್ಡಮ್‌ನ ಬರ್ಮಿಂಗ್‌ಹ್ಯಾಂ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಶೂನ್ಯ ಇಂಗಾಲ ಸೂಸುವಿಕೆ ಮತ್ತು ಡಿಜಿಟಲ್ ರೂಪಾಂತರ-ದ್ವಿಮುಖ ಪರಿವರ್ತನೆ’ ವಿಷಯ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಜಗತ್ತಿನ ಒಟ್ಟು ಇಂಗಾಲ ಸೂಸುವಿಕೆಯನ್ನು 2050ರ ವೇಳೆಗೆ ಶೂನ್ಯ ಮಟ್ಟಕ್ಕೆ ಇಳಿಸುವ ಗುರಿಯತ್ತ ಜಗತ್ತಿನ ಎಲ್ಲ ರಾಷ್ಟ್ರಗಳು ಗಮನ ಕೇಂದ್ರೀಕರಿಸಬೇಕಿದೆ. ಈ ಪೈಕಿ ಜಾಗತಿಕವಾಗಿ ಅರ್ಧಕ್ಕಿಂತ ಹೆಚ್ಚು ಇಂಗಾಲ ಸೂಸುತ್ತಿರುವ ಚೀನಾ, ಭಾರತ ಮತ್ತು ಅಮೆರಿಕ ರಾಷ್ಟ್ರಗಳ ಜವಾಬ್ದಾರಿ ಬಹಳ ದೊಡ್ಡದಿದೆ. ಈ ನಿಟ್ಟಿನಲ್ಲಿ ಪರ್ಯಾಯ ಇಂಧನ ಮೂಲಗಳ ಪರಿಶೋಧನೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದು ಸರ್ಕಾರಗಳು ಈ ಬಗ್ಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದು ಹೇಳಿದರು.ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್ ಮಾತನಾಡಿ, ಕೈಗಾರೀಕರಣ ಮತ್ತು ಆಧುನಿಕ ಜೀವನಶೈಲಿಯಿಂದಾಗುತ್ತಿರುವ ದುಷ್ಪರಿಣಾಮಗಳನ್ನು ನಿಯಂತ್ರಿಸಲು ಪರಿಹಾರೋಪಾಯ ಕಂಡುಕೊಳ್ಳಲು ವಿಶ್ವದ ವಿದ್ಯಾವಂತ ಸಮುದಾಯ ಗಮನ ಹರಿಸಬೇಕಿದೆ ಎಂದರು.
ಜಾಗತೀಕರಣದ ಪೈಪೋಟಿಯಿಂದ ಜಾಗತಿಕ ತಾಪಮಾನ ಏರಿಕೆ ಮತ್ತು ಪರಿಸರ ಮಾಲಿನ್ಯ ಸಮಸ್ಯೆಗಳು ಗಂಭೀರ ಹಂತಕ್ಕೆ ತಲುಪುತ್ತಿವೆ. ಇಂತಹ ಸಮಯದಲ್ಲಿ ಇಂಗಾಲ ಸೂಸುವಿಕೆ ಪ್ರಮಾಣವನ್ನು ಹಂತ ಹಂತವಾಗಿ ನಿಯಂತ್ರಿಸಿ ಶೂನ್ಯಕ್ಕೆ ತರಲು ಇಡೀ ವಿಶ್ವರದ ಎಲ್ಲ ರಾಷ್ಟ್ರಗಳು ಶ್ರಮಿಸಬೇಕಿದೆ. ಪರಿಸರ ಸಂರಕ್ಷಣೆ ಮೂಲಕ ಭವಿಷ್ಯದ ಪೀಳಿಗೆಗೆ ಸುರಕ್ಷಿತ ವಾತಾವರಣ ಕಲ್ಪಿಸಲು ವಿಶ್ವದ ವಿದ್ಯಾವಂತ ಸಮುದಾಯ ಸಕಲ ಪ್ರಯತ್ನಗಳನ್ನು ಕೈಗೊಳ್ಳಬೇಕಿದೆ ಎಂದು ತಿಳಿಸಿದರು.ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಲಿಂಗರಾಜ ಗಾಂಧಿ, ರಾಜ್ಯಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಡಾ। ಕೆ.ಜಿ.ಚಂದ್ರಶೇಖರ್, ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ, ವೋಲ್ಮರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ। ಸುರೇಶ್‌ರೇಣುಕಪ್ಪ, ಡಾ। ಸುಭಾಣಿ ಸುರೇಶ್, ಸಿಐಐ ಇಂಡಿಯಾಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನ ಅಧ್ಯಕ್ಷ ಡಾ। ಹರಿಹರನ್ ಚಂದ್ರ ಉಪಸ್ಥಿತರಿದ್ದರು.