ತಾಲೂಕು ಕೇಂದ್ರವಾದ ಚಿಂಚೋಳಿ ಪಟ್ಟಣದಲ್ಲಿ ಫುಟ್‌ಪಾತ್ ಹಾಗೂ ಮುಖ್ಯ ರಸ್ತೆಗಳ ಒತ್ತುವರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ರಸ್ತೆ ಬದಿಯ ಅತಿಕ್ರಮಣದಿಂದಾಗಿ ಸಾರ್ವಜನಿಕರು ಪ್ರಾಣವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದ್ದು, ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಹಿರಿಯ ವಕೀಲ ಶ್ರೀಮಂತ ಕಟ್ಟಿಮನಿ ದೂರಿದರು.
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕು ಕೇಂದ್ರವಾದ ಚಿಂಚೋಳಿ ಪಟ್ಟಣದಲ್ಲಿ ಫುಟ್‌ಪಾತ್ ಹಾಗೂ ಮುಖ್ಯ ರಸ್ತೆಗಳ ಒತ್ತುವರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ರಸ್ತೆ ಬದಿಯ ಅತಿಕ್ರಮಣದಿಂದಾಗಿ ಸಾರ್ವಜನಿಕರು ಪ್ರಾಣವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದ್ದು, ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಹಿರಿಯ ವಕೀಲ ಶ್ರೀಮಂತ ಕಟ್ಟಿಮನಿ ದೂರಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಪಟ್ಟಣದ ಪ್ರಮುಖ ರಸ್ತೆಗಳ ಬದಿಯಲ್ಲಿರುವ ಅಂಗಡಿ-ಮುಂಗಟ್ಟುಗಳ ಮಾಲೀಕರು ತಮ್ಮ ವಾಣಿಜ್ಯ ಮಳಿಗೆಗಳ ಮುಂಭಾಗದ ಪಾದಚಾರಿ ಮಾರ್ಗ ಆಕ್ರಮಿಸಿಕೊಂಡಿದ್ದಾರೆ. ಅಂಗಡಿಗಳ ಜಾಹೀರಾತು ನಾಮಫಲಕಗಳನ್ನು ರಸ್ತೆಯ ಮೇಲೆಯೇ ತಂದು ನೆಡಲಾಗಿದೆ. ಇದರಿಂದಾಗಿ ಜನರ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಂಗಡಿಯೊಳಗಿರಬೇಕಾದ ಪೀಠೋಪಕರಣಗಳು, ತರಕಾರಿ, ಬಟ್ಟೆ ಹಾಗೂ ಇತರ ಮಾರಾಟದ ಸಾಮಗ್ರಿಗಳನ್ನು ಫುಟ್‌ಪಾತ್ ಮೇಲೆಯೇ ಸಾಲಾಗಿ ಜೋಡಿಸಿಡಲಾಗುತ್ತಿದೆ. ಪರಿಣಾಮವಾಗಿ, ಕಾಲ್ನಡಿಗೆಯಲ್ಲಿ ಸಂಚರಿಸುವ ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಅನಿವಾರ್ಯವಾಗಿ ರಸ್ತೆಯ ಮೇಲೆಯೇ ನಡೆಯಬೇಕಾದ ದುಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆ ಬದಿ ಒತ್ತುವರಿಯಿಂದಾಗಿ ಮುಖ್ಯರಸ್ತೆಯ ವ್ಯಾಪ್ತಿ ಕಿರಿದಾಗಿದೆ. ಇದರ ಜತೆಗೆ ಗ್ರಾಹಕರು ತಮ್ಮ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ರಸ್ತೆಯ ಮೇಲೆ ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡುತ್ತಿದ್ದಾರೆ. ಬಸ್ ಕಾಂಪ್ಲೆಕ್ಸ್, ಮಾರುಕಟ್ಟೆ ರಸ್ತೆ ಹಾಗೂ ಪ್ರಮುಖ ವೃತ್ತಗಳಲ್ಲಿ ಪ್ರತಿದಿನ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಪಾದಚಾರಿಗಳು ರಸ್ತೆಯಲ್ಲಿ ನಡೆಯುವುದರಿಂದ ಸಣ್ಣಪುಟ್ಟ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿದ್ದು, ಸಾರ್ವಜನಿಕರು ಜೀವಭಯದಲ್ಲಿ ಓಡಾಡುವಂತಾಗಿದೆ ಎಂದು ಶ್ರೀಮಂತ ಕಟ್ಟಿಮನಿ ಆತಂಕ ವ್ಯಕ್ತಪಡಿಸಿದರು.ಸಾರ್ವಜನಿಕರು ಹಾಗೂ ಸ್ಥಳೀಯ ಸಂಘಟನೆಗಳು ಹಲವು ಬಾರಿ ಮನವಿ ಸಲ್ಲಿಸಿದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ವಾಣಿಜ್ಯಸ್ಥರ ಒತ್ತಡಕ್ಕೆ ಮಣಿದು ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ. ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಪೊಲೀಸ್ ರಕ್ಷಣೆಯೊಂದಿಗೆ ತಕ್ಷಣವೇ ಜಂಟಿ ಕಾರ್ಯಾಚರಣೆ ನಡೆಸಿ ರಸ್ತೆ ಮತ್ತು ಫುಟ್‌ಪಾತ್ ಒತ್ತುವರಿ ತೆರವುಗೊಳಿಸಬೇಕು. ರಸ್ತೆ ಮತ್ತು ಪಾದಚಾರಿ ಮಾರ್ಗದಲ್ಲಿ ಅಕ್ರಮವಾಗಿ ನೆಟ್ಟಿರುವ ಜಾಹೀರಾತು ಬೋರ್ಡ್‌ಗಳನ್ನು ಜಪ್ತಿ ಮಾಡಿ ದಂಡ ವಿಧಿಸಬೇಕು. ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಪಟ್ಟಣದ ರಸ್ತೆ ಅತಿಕ್ರಮಣ ತೆರವುಗೊಳಿಸದಿದ್ದರೆ ತಾಲೂಕು ನಾಗರಿಕ ಹೋರಾಟ ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಹಿರಿಯ ವಕೀಲ ಶ್ರೀಮಂತ ಕಟ್ಟಿಮನಿ ಎಚ್ಚರಿಸಿದರು.
ಪಟ್ಟಣದಲ್ಲಿ ಫೂಟ್‌ಪಾತ್ ಮೇಲೆ ಅನಧಿಕೃತವಾಗಿ ಬೋರ್ಡ ಹಾಕಿ ಪಾದಚಾರಿಗಳ ಸಂಚಾರಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ ಸಾರ್ವಜನಿಕರು ಸಹ ಇದರ ಬಗ್ಗೆ ದೂರು ನೀಡಿದ್ದಾರೆ. ಕೂಡಲೇ ರಸ್ತೆ ಬದಿಯ ಅನಧಿಕೃತ ನಾಮ ಫಲಕಗಳನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ್ ಹೇಳಿದರು.-
----ಫೋಟೊ-----12ಜಿಯು.ಸಿಎಚ1
ಚಿಂಚೋಳಿ ಪಟ್ಟಣದ ಮುಖ್ಯರಸ್ತೆ ಪುಟಪಾತ್ ಮಾರ್ಗದಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಹಾಕಿರುವುದು.