ಸಾರಾಂಶ
ಓರ್ವೆಲ್ಲ್ ಫರ್ನಾಂಡೀಸ್
ಹಳಿಯಾಳ: ಕಲೆ, ಸಂಗೀತ, ಕ್ರೀಡೆಗಳಲ್ಲಿ ಬುಡಕಟ್ಟು ಸಿದ್ದಿ ಸಮಯದಾಯದವರು ದೈವದತ್ತವಾದ ಕೌಶಲ್ಯ ಪಡೆದವರು. ಅದಕ್ಕೆ ಸಾಕ್ಷಿಯೆಂಬಂತೆ ನಟಿಸಿದ ಪ್ರಥಮ ಚಿತ್ರದಲ್ಲಿಯೇ ಬುಡಕಟ್ಟು ಸಿದ್ದಿ ಸಮುದಾಯದ ಬಾಲಕ ಚಿನ್ಮಯ್ ಈಗ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆದಿದ್ದು, ಇವನ ನಟನೆಗೆ ಚಲನಚಿತ್ರ ಜಗತ್ತು ಫಿದಾ ಆಗಿದ್ದು, ಎಲ್ಲೆಡೆಯಿಂದ ಮೆಚ್ಚುಗೆಗಳ ಸುರಿಮಳೆಯೇ ಬರಲಾರಂಭಿಸಿದೆ.ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಜಯನ್ ಚೆರಿಯನ್ ನಿರ್ದೇಶನದ "ರಿದಮ್ ಆಪ್ ದಮಾಮ್ " ಬುಡಕಟ್ಟು ಸಿದ್ದಿ ಸಮುದಾಯದವರ ಬದುಕು ಹಾಗೂ ಬೆಳಕಿಗೆ ಬರದಂತಹ ಅವರ ಕರಾಳ ಇತಿಹಾಸದ ಕಥಾವಸ್ತುವನ್ನು ಹೊಂದಿರುವ ಚಲನಚಿತ್ರ. ಇದು ಈಗ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ಮುಖ್ಯ ನಾಯಕ ಹನ್ನೆರಡು ವರ್ಷದ ಬಾಲಕ ಜಯರಾಮ್ ಪಾತ್ರಕ್ಕೆ ಚಿನ್ಮಯ್ ಜೀವ ತುಂಬಿದ್ದಾನೆ.
ಚಿನ್ಮಯ್ ಸಿದ್ದಿ: ಚಿನ್ಮಯ್ ರಾಮಚಂದ್ರ ಹಾಗೂ ಇಂದಿರಾ ಸಿದ್ದಿ ದಂಪತಿಯ ಪುತ್ರ. ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಕೋಟೆಮನೆಯ ನಿವಾಸಿ. ತಂದೆ ಮನು ವಿಕಾಸ ಸಂಘದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಹಳಿಯಾಳದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿರುವ ಚಿನ್ಮಯ್ ಇಲ್ಲಿಯ ವಿ.ಡಿ. ಹೆಗಡೆ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾನೆ.ಬುಡಕಟ್ಟು ಸಿದ್ದಿ ಸಮುದಾಯದ ಮೇಲೆ ಚಿತ್ರವನ್ನು ಮಾಡಲು ಬಯಸಿದ ನಿರ್ದೇಶಕ ಜಯನ್ ಚೆರಿಯನ್ ಅವರು ತಮ್ಮ ಕಣ್ಣಿಗೆ ಬಿದ್ದ ಈ ಚಿನ್ಮಯನನ್ನು ಮೊದಲ ನೋಟದಲ್ಲಿಯೇ ಆಯ್ಕೆ ಮಾಡಿಯೇ ಬಿಟ್ಟರು. ಪಾಲಕರ ಒಪ್ಪಿಗೆ ಪಡೆದ ಚಿನ್ಮಯ್ ಚಿತ್ರದಲ್ಲಿ ನಟಿಸಿದನು. ಸುಮಾರು ಎರಡು ವರ್ಷಗಳ ವರೆಗೆ ಚಿತ್ರಿಕರಣ ನಡೆಯಿತು.
ರಿದಮ್ ಆಪ್ ದಮಾಮ್: ಬುಡಕಟ್ಟು ಸಿದ್ದಿ ಸಮುದಾಯದವರ ಮೂಲ ಸಂಗೀತ ವಾದ್ಯ ದಮಾಮ್, ಸಿದ್ದಿ ಸಮುದಾಯದವರು ಮದುವೆ, ಹಬ್ಬ, ಇನ್ನಿತರ ಸಮಾರಂಭಗಳಲ್ಲಿ ಅವರ ನೃತ್ಯವು ಆರಂಭಗೊಳ್ಳುವುದೇ ದಮಾಮ್ ಸಂಗೀತದಿಂದ.ರಿದಮ್ ಆಪ್ ದಮಾಮ್ ಚಿತ್ರದ ಕಥೆಯೇ ರೋಚಕವಾಗಿದೆ. ಭಾರತದಲ್ಲಿ ಬುಡಕಟ್ಟು ಸಿದ್ದಿ ಸಮುದಾಯದ ಬದುಕಿನ ಮೇಲೆ ಬೆಳಕು ಚೆಲ್ಲುವ ಮೊದಲ ನಿರ್ಮಾಣ ಇದಾಗಿದೆ.
ಹನ್ನೆರಡು ವರ್ಷದ ಜಯರಾಮ್ ಸಿದ್ದಿಯ ಕನಸಲ್ಲಿ ಒಮ್ಮೆ ಅವನ ಮೃತ ಅಜ್ಜ ಬಂದು ತನ್ನ ಸಮುದಾಯದ ಇತಿಹಾಸವನ್ನು ಹೇಳುತ್ತಾನೆ. ಅಜ್ಜನಿಂದ ಇತಿಹಾಸ ಕೇಳಿ ಎಚ್ಚರಗೊಂಡ ಬಾಲಕ ಜಯರಾಮ್ ವಾಸ್ತವದೊಂದಿಗೆ ಸಂಪರ್ಕ ಕಳೆದುಕೊಳ್ಳುತ್ತಾನೆ. ಸಿದ್ದಿ ಜನರು ಬಾಲಕನ ಮೇಲೆ ಮೃತ ಅಜ್ಜನ ಆತ್ಮವೂ ಸವಾರಿ ಮಾಡಿದೆ ಎಂದು ನಂಬಿ, ತಮ್ಮ ಸ್ಥಳೀಯ ಮಾಟಮಂತ್ರವಾದಿಗಳ ಮೊರೆ ಹೋಗುತ್ತಾರೆ. ಹೀಗಿರುವಾಗ ಅವನ ಪಾಲಕರು ತಮ್ಮ ಸಾಂಪ್ರದಾಯಿಕ ವಾದ್ಯ ದಮಾಮ್ ಸಂಗೀತದಿಂದ ಹೇಗೆ ಬಾಲಕನನ್ನು ಮರಳಿ ವಾಸ್ತವ ಲೋಕಕ್ಕೆ ಕರೆತರುತ್ತಾರೆ, ಈ ಪ್ರಯತ್ನಗಳ ಮದ್ಯೆ ಸಿದ್ದಿ ಸಮುದಾಯದವರು ಭಾರತಕ್ಕೆ ಹೇಗೆ ಆಗಮಿಸಿದರು, ಇಲ್ಲಿ ನೆಲೆಗೊಂಡ ಸಂಪ್ರದಾಯ, ಸಂಸ್ಕೃತಿಯ ಜತೆಯಲ್ಲಿ ಬೆರೆತರೂ ತಮ್ಮತನವನ್ನು (ಆಫ್ರಿಕಾನ್ ಸಂಪ್ರದಾಯವನ್ನು) ಉಳಿಸಿ ಕೊಂಡಿದ್ದಾರೆ. ಸಾಂಪ್ರದಾಯಿಕ ದಮಾಮ್ ಸಂಗೀತ ಮತ್ತು ಬುಡಕಟ್ಟು ಆಚರಣೆಗಳು ಅವರ ಬದುಕಿನ ಅವಿಭಾಜ್ಯ ಅಂಗಗಳಾಗಿವೆ ಎಂಬುದನ್ನು ನಿರ್ದೇಶಕರು ಹೇಳುವಲ್ಲಿ ಯಶಸ್ವಿಯಾಗಿದ್ದಾರೆ.ಯಲ್ಲಾಪುರ, ಮುಂಡಗೋಡ ತಾಲೂಕಿನ ಪರಿಸರ, ಜಲಪಾತಗಳಲ್ಲಿ ಚಿತ್ರಿಕರಣಗೊಂಡ ಈ ಚಲನಚಿತ್ರವೂ 90 ನಿಮಿಷ ಕಾಲಾವಧಿ ಹೊಂದಿದ್ದು, ಕೊಂಕಣಿ ಮತ್ತು ಕನ್ನಡ (ಬುಡಕಟ್ಟು ಸಿದ್ದಿಗಳು ಮಾತನಾಡುವ ಭಾಷೆ)ಯಲ್ಲಿದೆ. ಇಂಗ್ಲಿಷ್ ಸಬ್‌ಟೈಟಲ್ ಹೊಂದಿದೆ. ಬಹುತೇಕ ಸಿದ್ದಿ ಸಮುದಾಯದವರೇ ಈ ಚಿತ್ರದಲ್ಲಿ ನಟಿಸಿ ಗಮನಸೆಳೆದಿದ್ದು, ಸ್ಥಳೀಯ ಸಿದ್ದಿ ಕಲಾವಿದರೇ ದಮಾಮ್ ಸಂಗೀತ ನುಡಿಸಿದ್ದು, ಚಿತ್ರ ಅಪ್ಪಟ ದೇಶಿಯ ಸೊಗಡನ್ನು ಪ್ರತಿಬಿಂಬಿಸುತ್ತದೆ.
ಪ್ರದರ್ಶನ: ಕಳೆದ ತಿಂಗಳು ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಯವದಲ್ಲಿ ಪ್ರದರ್ಶನಗೊಂಡ ರಿದಮ್ ಆಪ್ ದಮಾಮ್, ಈ ತಿಂಗಳು ಕೇರಳದಲ್ಲಿ ನಡೆಯುವ ಚಲನಚಿತ್ರದಲ್ಲಿ ಪ್ರದರ್ಶಿಸಲ್ಪಡಲಿದೆ. ನ್ಯೂಯಾರ್ಕ್‌ನಲ್ಲಿಯೂ ಪ್ರದರ್ಶನ ನೀಡಲು ಸಿದ್ಧತೆ ನಡೆಸಿದೆ ಎಂದು ಚಿತ್ರದ ಮುಖ್ಯ ಪಾತ್ರದಾರಿ ಚಿನ್ಮಯ್ ಹೇಳುತ್ತಾನೆ. ನಮ್ಮ ಬುಡಕಟ್ಟು ಸಿದ್ದಿ ಸಮುದಾಯದ ಇತಿಹಾಸ ಸಾರುವ, ಸಮಾಜಕ್ಕೆ ಗೊತ್ತಿಲ್ಲದಂತಹ ವಿಷಯ ತಿಳಿಸುವ ಈ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ಸಿಕ್ಕಿದ್ದೇ ಪುಣ್ಯವೆಂದು ಭಾವಿಸುತ್ತೇನೆ. ಅವಕಾಶ ಸಿಕ್ಕರೆ ಮತ್ತಷ್ಟು ಚಲನಚಿತ್ರದಲ್ಲಿ ನಟಿಸುತ್ತೇನೆ ಎಂದು ಬಾಲನಟ ಚಿನ್ಮಯ್ ಸಿದ್ದಿ ಹೇಳಿದರು.ಬರಹಗಾರನಾಗಿ ನಿರ್ದೇಶಕನಾಗಿ ರಿದಮ್ ಆಪ್ ದಮಾಮ್ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಈ ಚಿತ್ರದ ಕಥೆಗೆ ಜೀವತುಂಬಲು ನಾನು ಐದು ತಿಂಗಳು ಬುಡಕಟ್ಟು ಸಿದ್ದಿಗಳು ನೆಲೆಸಿರುವ ವಾಡೆಗಳಲ್ಲಿ ಉಳಿದು, ಸಮಗ್ರ ಕಥೆಯನ್ನು ರೂಪಿಸಿದ್ದೇನೆ. ಇದೊಂದು ಅಪರೂಪದ ಕಥಾಹಂದರವನ್ನು ಒಳಗೊಂಡ ಚಿತ್ರವಾಗಿದೆ ಎಂದು ಬರಹಗಾರ, ನಿರ್ದೇಶಕ, ನಿರ್ಮಾಪಕ ಜಯನ್ ಚೆರಿಯನ್ ಹೇಳುತ್ತಾರೆ.