ಸಾರಾಂಶ
ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅನಾಥ ಶವಗಳನ್ನು ಹೂಳಿದ್ದೇನೆ ಎಂದು ಭೀಮಾ ಎನ್ನುವ ವ್ಯಕ್ತಿ ಹೇಳಿದ್ದರು. ಅವರಿಗೆ ನಾನು ಆಶ್ರಯ ನೀಡಿದ್ದು ನಿಜ ಎಂದು ಸೌಜನ್ಯ ಪರ ಹೋರಾಟಗಾರ ಬೆಳ್ತಂಗಡಿಯ ಜಯಂತ್ ಹೇಳಿಕೆ ನೀಡಿದ್ದಾರೆ.
ತಮ್ಮ ಬೆಂಗಳೂರಿನ ಮನೆಯನ್ನು ಎಸ್‌ಐಟಿ ಜಾಲಾಡುತ್ತಿರುವ ಬೆನ್ನಲ್ಲೇ ಬೆಳ್ತಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಜಯಂತ್, ಶವ ಹೂತು ಹಾಕಿರುವುದಾಗಿ ಹೇಳಿರುವ ಭೀಮ (ಚಿನ್ನಯ್ಯ)ನಿಗೆ ನಾನು ಆಶ್ರಯ ನೀಡಿದ್ದೆ. ಆತ ತಂದಿದ್ದ ಮೆಟಿರಿಯಲ್ (ತಲೆ ಬುರುಡೆ)ಯನ್ನು ಕಾರಿನಲ್ಲಿ ನಾನು ದೆಹಲಿಗೂ ತೆಗೆದುಕೊಂಡು ಹೋಗಿದ್ದೆ. ಅಲ್ಲಿ ವಕೀಲರನ್ನು ಭೇಟಿಯಾಗಿ ಬಂದಿದ್ದೆ ಎಂದು ತಿಳಿಸಿದ್ದಾರೆ.
ಸುಮಾರು ಐದು ತಿಂಗಳ ಹಿಂದೆ ಏಪ್ರಿಲ್‌ನಲ್ಲಿ ಭೀಮನ ಮೊದಲ ಪರಿಚಯ ಆಗಿತ್ತು. ಆಗ ಅವನನ್ನು ವಕೀಲರ ಬಳಿ ಕರೆದುಕೊಂಡು ಹೋಗಿದ್ದೆ. ಅವತ್ತು ರಾತ್ರಿ ಬೆಂಗಳೂರಿನ ನನ್ನ ಮನೆಯಲ್ಲಿ ಎರಡು ದಿನ ಉಳಿದುಕೊಳ್ಳಲು ಅವಕಾಶ ನೀಡಿದ್ದೆ. ಆಗ ಸುಪ್ರೀಂ ಕೋರ್ಟ್‌ಗೆ ದಾಖಲೆ ಸಲ್ಲಿಸಲು ಆತ ವಕೀಲರ ಬಳಿ ಬಂದು ಹೋಗುತ್ತಿದ್ದ. ಮೊದಲನೇ ಸಲ ಬಂದಾಗ ಎರಡು ದಿನ ಇದ್ದು ಹೋಗಿದ್ದ ಎಂದಿದ್ದಾರೆ.
ಮತ್ತೊಮ್ಮೆ ಬರೋವಾಗ ಸುಪ್ರೀಂ ಕೋರ್ಟ್‌ಗೆ ಹೋಗುವ ಕಾರಣ ಬ್ಯಾಗ್ ಹಿಡಿದುಕೊಂಡು ಬಂದಿದ್ದ. ಆ ಬ್ಯಾಗ್‌ನಲ್ಲಿ ಒಂದು ಮೆಟಿರಿಯಲ್ ಇತ್ತು. ಆ ಮೆಟಿರಿಯಲ್ ಅನ್ನು ನಾನು ಕಾರಿನಲ್ಲಿ ಬೆಂಗಳೂರಿನಿಂದ ದೆಹಲಿಗೆ ಸಾಗಿಸಿ, ದೆಹಲಿಯಿಂದ ಮಂಗಳೂರಿಗೆ ತಂದಿದ್ದೆ. ಮಂಗಳೂರಿನಲ್ಲಿ ಪ್ರಕರಣ ದಾಖಲಿಸಲು, ಎಸ್ಪಿಗೆ ತೋರಿಸಲು ತಂದಿದ್ದೆ. ಈ ಪ್ರಕರಣದಲ್ಲಿ ನನ್ನ ಮನೆಯಲ್ಲಿ ಎರಡು ದಿನ ಉಳಿದಿರೋದಕ್ಕೆ ಹಾಗೂ ಮೆಟಿರಿಯಲ್ ಸಾಗಿಸಿದ್ದಕ್ಕೆ ತನಿಖೆಯಾಗುತ್ತಿದೆ ಎಂದರು.
ಈ ಎಸ್ಐಟಿ ತನಿಖೆಯನ್ನು ನಾನು ಸಂತೋಷದಿಂದ ಸ್ವೀಕರಿಸುತ್ತಿದ್ದೇನೆ. ಇದು ದೇವಸ್ಥಾನದ ವಿರುದ್ಧ ಅಪಪ್ರಚಾರ ಮತ್ತು ತೇಜೋವಧೆ ಮಾಡಲು ಅಲ್ಲ. ಇದು ಅತ್ಯಾಚಾರಿಗಳ ವಿರುದ್ಧ ನನ್ನ ಹೋರಾಟ. ಸತ್ಯವಿದೆ, ಸತ್ಯದ ಮೇಲೆ ಒಂದು ಬಂಡೆಕಲ್ಲು ಇದೆ. ಅದರ ಮೇಲೆ ನಿಂತು ಯಾರೂ ತುಳಿಯಬೇಡಿ, ಎಲ್ಲರೂ ಸೇರಿ ಆ ಸತ್ಯವನ್ನು ಹೊರಗೆ ತರುವ ಕೆಲಸ ಮಾಡುವ ಎಂದರು.
ಎಸ್ಐಟಿ ದಾಳಿ ವೇಳೆ ನಾನು ಓಡಿ ಹೋಗಿಲ್ಲ, ನಾನು ಬೆಳ್ತಂಗಡಿಯಲ್ಲೇ ಇದ್ದೇನೆ. ಎಸ್ಐಟಿ ಕರೆದರೆ ತನಿಖೆಗೆ ಹಾಜರಾಗುತ್ತೇನೆ. ಎಸ್ಐಟಿಯವರು ಯಾವುದೇ ಮಾಹಿತಿ ನೀಡದೆ ಬೆಂಗಳೂರಿನ ನನ್ನ ಮನೆಗೆ ಹೋಗಿದ್ದಾರೆ ಎಂದು ಜಯಂತ್ ಆರೋಪಿಸಿದರು.