ಚಿಪಗಿ-ಸದಾಶಿವಳ್ಳಿ ಸಂಪರ್ಕ ರಸ್ತೆ ಸಂಚಾರ ದುಸ್ತರ

| Published : Mar 17 2025, 01:30 AM IST

ಚಿಪಗಿ-ಸದಾಶಿವಳ್ಳಿ ಸಂಪರ್ಕ ರಸ್ತೆ ಸಂಚಾರ ದುಸ್ತರ
Share this Article
  • FB
  • TW
  • Linkdin
  • Email

ಸಾರಾಂಶ

ಚಿಪಗಿ-ಸದಾಶಿವಳ್ಳಿ ಸಂಪರ್ಕ ರಸ್ತೆ ಸುಮಾರು ೨ ಕಿ.ಮೀ. ಕಿತ್ತು ಹೋಗಿದ್ದು, ಓಡಾಟಕ್ಕೆ ತೀವ್ರ ಸಮಸ್ಯೆಯುಂಟಾಗಿದೆ.

ಶಿರಸಿ: ತಾಲೂಕಿನ ಚಿಪಗಿ-ಸದಾಶಿವಳ್ಳಿ ಸಂಪರ್ಕ ರಸ್ತೆ ಸುಮಾರು ೨ ಕಿ.ಮೀ. ಕಿತ್ತು ಹೋಗಿದ್ದು, ಓಡಾಟಕ್ಕೆ ತೀವ್ರ ಸಮಸ್ಯೆಯುಂಟಾಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಸಾರ್ವಜನಿಕರು ಪ್ರತಿನಿತ್ಯ ಪರದಾಡುವ ದುಃಸ್ತಿತಿ ಉಂಟಾಗಿದೆ.

ನಮ್ಮ ಗ್ರಾಮ-ನಮ್ಮ ರಸ್ತೆ ಹಂತ-೪ರ ಯೋಜನೆಯಡಿ ತಾಲೂಕಿನ ಚಿಪಗಿ ಮೂಲಕ ಸದಾಶಿವಳ್ಳಿ ಮತ್ತಿತರರ ಗ್ರಾಮಗಳಿಗೆ ಸಾಗುವ ಈ ರಸ್ತೆಯನ್ನು ಕಳೆದ ೬ ವರ್ಷ ಹಿಂದೆ ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ಡಾಂಬರೀಕರಣಗೊಳಿಸಲಾಗಿತ್ತು. ಆದರೆ ಕಾಮಗಾರಿಯ ಕಳಪೆತನವೋ ಅಥವಾ ರಸ್ತೆ ಹಳೆಯದಾದುದರ ಪರಿಣಾಮವೋ ಇದೀಗ ಸಂಪೂರ್ಣ ಕಿತ್ತು ಗಬ್ಬೆದ್ದು ಹೋಗಿದೆ. ಪರಿಣಾಮ ರಸ್ತೆಯಲ್ಲಿ ದಿನನಿತ್ಯವೂ ಸಂಚರಿಸುವ ವಾಹನ ಸವಾರರು, ಸಾರ್ವಜನಿಕ ಪಾದಾಚಾರಿಗಳು ಹಾಗೂ ವಿದ್ಯಾರ್ಥಿಗಳು ಸರ್ಕಾರದ ಜನಪ್ರತಿನಿಧಿಗಳ ಧೋರಣೆಗೆ ಹಿಡಿಶಾಪ ಹಾಕುವಂತಾಗಿದೆ.

ಈ ರಸ್ತೆಯಿಂದ ಕತ್ಲೆಹಳ್ಳ, ಸದಾಶಿವಳ್ಳಿ, ಸೋಮನಳ್ಳಿ, ಚಿಪಗಿ ಭಾಗದ ಸಾರ್ವಜನಿಕರಿಗೆ ಬಹಳ ಉಪಯೋಗವಾಗಿತ್ತು. ಕಳೆದ ೩ ವರ್ಷಗಳಿಂದ ರಸ್ತೆಯು ನಿರ್ವಹಣೆಯ ಕೊರತೆಯಿಂದ ಚಿಂದಿಯಾಗಿ ಸಂಚಾರ ದುಸ್ತರವಾಗಿದೆ. ರಸ್ತೆಯನ್ನು ಸರಿಪಡಿಸುವಂತೆ ಹಲವಾರು ಬಾರಿ ಆಗ್ರಹಿಸಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ.

ಮುಂಬರುವ ಚುನಾವಣೆಗೂ ಮುನ್ನವೇ ಅಥವಾ ತಕ್ಷಣವೇ ರಸ್ತೆಯನ್ನು ಸಂಚಾರ ಯೋಗ್ಯವಾಗಿ ನಿರ್ಮಿಸಿಕೊಡುವಂತೆ ಈ ಪ್ರದೇಶದ ನಾಗರಿಕರ ಆಗ್ರಹವಾಗಿದೆ.

ಕಳೆದ ೬ ವರ್ಷ ಹಿಂದೆ ೨ ಕಿ.ಮೀ. ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ೫ ವರ್ಷ ನಿರ್ವಹಣೆ ಅವಧಿ ಮುಗಿದಿದೆ. ಇನ್ನೊಮ್ಮೆ ಡಾಂಬರೀಕರಣ ಮಾಡಿ, ಜಿಲ್ಲಾ ಪಂಚಾಯತಕ್ಕೆ ಹಸ್ತಾಂತರಿಸುತ್ತೇವೆ ಎನ್ನುತ್ತಾರೆ ಎಂಜಿನಿಯರ್ ವಿಜಯಕುಮಾರ.