ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಚಿತ್ರಕಲೆ ಆಸಕ್ತರು ಕಾತುರದಿಂದ ಕಾಯುವ 22 ನೇ ‘ಚಿತ್ರ ಸಂತೆ’ ಜ.5 ರಂದು ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ನಡೆಯಲಿದ್ದು, ದೇಶಾದ್ಯಂತ 22 ರಾಜ್ಯಗಳ 1,420 ಕಲಾವಿದರ ಕುಂಚದಲ್ಲಿ ಅರಳಿದ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವೇದಿಕೆ ಸಜ್ಜಾಗಿದೆ.ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಜ.5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರಸಂತೆಗೆ ಚಾಲನೆ ನೀಡಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಲಾ ಪ್ರದರ್ಶನ ಉದ್ಘಾಟಿಸಲಿದ್ದಾರೆ ಎಂದರು.ಕರ್ನಾಟಕ, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ಪಂಜಾಬ್, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ 22 ರಾಜ್ಯಗಳ ಕಲಾವಿದರಿಂದ 3177 ಅರ್ಜಿ ಸಲ್ಲಿಕೆಯಾಗಿದ್ದವು. ಇದರಲ್ಲಿ 1420 ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಬೆಳಿಗ್ಗೆ 6 ರಿಂದ ರಾತ್ರಿ 9 ಗಂಟೆಯವರೆಗೂ ಚಿತ್ರಸಂತೆ ಆಯೋಜಿಸಲಿದ್ದು 152 ವಿಶೇಷಚೇತನ ಕಲಾವಿದರು, 189 ಹಿರಿಯ ಕಲಾವಿದರೂ ಪಾಲ್ಗೊಳ್ಳಲಿದ್ದಾರೆ. ನೋಂದಣಿ, ಅರ್ಜಿ ಸಲ್ಲಿಕೆ, ಮಳಿಗೆ ಹಂಚಿಕೆ ಮತ್ತಿತರ ಕಾರ್ಯಗಳನ್ನು ಸುಗಮವಾಗಿ ಕೈಗೊಳ್ಳಲು ಸಂಪೂರ್ಣವಾಗಿ ಆನ್‌ಲೈನ್ ವ್ಯವಸ್ಥೆ ಮಾಡಲಾಗಿತ್ತು. ಚಿತ್ರಕಲಾ ಪರಿಷತ್ ಆವರಣ, ಕುಮಾರಕೃಪಾ ರಸ್ತೆ, ಕ್ರೆಸೆಂಟ್ ರಸ್ತೆಗಳಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 9 ಗಂಟೆಯವರೆಗೂ ಚಿತ್ರಸಂತೆ ಆಯೋಜಿಸಲಾಗುವುದು ಎಂದು ಹೇಳಿದರು.
ಹೆಣ್ಣು ಮಗುವಿಗೆ ಅರ್ಪಣೆ: ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಶೋಷಣೆ, ಭ್ರೂಣ ಹತ್ಯೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ಬಾರಿ ಚಿತ್ರಸಂತೆಯನ್ನು ಹೆಣ್ಣು ಮಗುವಿಗೆ ಅರ್ಪಿಸಲಾಗುತ್ತಿದೆ. 100 ರುಪಾಯಿಯಿಂದ ಲಕ್ಷಾಂತರ ರುಪಾಯಿವರೆಗಿನ ಕಲಾಕೃತಿಗಳು ಮಾರಾಟವಾಗಲಿವೆ. ಸಂಚಾರಿ ಎಟಿಎಂಗಳು ಕಾರ್ಯನಿರ್ವಹಿಸಲಿದ್ದು ವ್ಯಾಪಾರಿಗಳು-ಗ್ರಾಹಕರಿಗೂ ಇದರಿಂದ ಅನುಕೂಲವಾಗಲಿದೆ ಎಂದು ವಿವರಿಸಿದರು.6 ಲಕ್ಷ ಮಂದಿ ಭೇಟಿ ನಿರೀಕ್ಷೆ: ಚಿತ್ರಸಂತೆ ಪ್ರದೇಶದಲ್ಲಿ ಸಿಸಿ ಟಿವಿ ಅಳವಡಿಸಲಿದ್ದು ಅಗತ್ಯ ಭದ್ರತಾ ಸಿಬ್ಬಂದಿ ಇರಲಿದ್ದಾರೆ. ಸುಮಾರು ಆರು ಲಕ್ಷ ಜನ ಭೇಟಿ ನೀಡುವ ನಿರೀಕ್ಷೆ ಇದ್ದು, 20 ಆಯ್ದ ಸ್ಥಳಗಳಲ್ಲಿ ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಲಾಗುವುದು. ಜ.5 ರಂದು ಬೆಳಿಗ್ಗೆ 8 ರಿಂದ ರಾತ್ರಿ 9 ಗಂಟೆಯವರೆಗೂ ಕೆಂಪೇಗೌಡ ಬಸ್ ನಿಲ್ದಾಣ, ಮಂತ್ರಿ ಮಹಲ್ ಮೆಟ್ರೋ ನಿಲ್ದಾಣಗಳಿಂದ ಶಿವಾನಂದ ಮಾರ್ಗವಾಗಿ ವಿಧಾನಸೌಧದವರೆಗೂ ಫೀಡರ್ ಬಸ್ ಸೇವೆ ಇರುತ್ತದೆ ಎಂದು ಮಾಹಿತಿ ನೀಡಿದರು.ಸಾಧಕರಿಗೆ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ: ಜ.4 ರಂದು ಬೆಳಿಗ್ಗೆ 11.30ಕ್ಕೆ ಹಲವು ಸಾಧಕರಿಗೆ ಸಚಿವ ಎಚ್.ಕೆ.ಪಾಟೀಲ್ ಅವರು ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಿ.ದೇವರಾಜ ಅರಸು ಪ್ರಶಸ್ತಿಗೆ ಡಾ। ಎಂ.ಎಸ್.ಮೂರ್ತಿ ಭಾಜನರಾಗಿದ್ದಾರೆ. ಕೆ.ಎಸ್.ನಾಗರತ್ನಮ್ಮ ಪ್ರಶಸ್ತಿ-ಎ.ರಾಮಕೃಷ್ಣಪ್ಪ, ವೈ.ಸುಬ್ರಮಣ್ಯರಾಜು ಪ್ರಶಸ್ತಿ-ಜಿ.ಎಲ್.ಭಟ್, ಎಚ್.ಕೆ.ಕೇಜ್ರೀವಾಲ್ ಪ್ರಶಸ್ತಿ-ಸೂರ್ಯಪ್ರಕಾಶ್ ಗೌಡ ಮತ್ತು ಎಂ.ಆರ್ಯಮೂರ್ತಿ ಪ್ರಶಸ್ತಿಗೆ ಸಿ.ಎಸ್.ನಿರ್ಮಲ ಕುಮಾರಿ ಭಾಜನರಾಗಿದ್ದು ಪ್ರಶಸ್ತಿಯು ತಲಾ ₹50 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ.