ಚಿತ್ರದುರ್ಗ ಬಿಜೆಪಿ ಟಿಕೆಟ್ ಮತ್ತಷ್ಟು ಸಸ್ಪೆನ್ಸ್!

| Published : Mar 25 2024, 12:45 AM IST / Updated: Mar 25 2024, 12:46 AM IST

ಚಿತ್ರದುರ್ಗ ಬಿಜೆಪಿ ಟಿಕೆಟ್ ಮತ್ತಷ್ಟು ಸಸ್ಪೆನ್ಸ್!
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ಯೋಗಿಯಾಗಿ ಬಿಂಬಿಸಲು ಕರ್ನಾಟಕದ ಯೋಗಿಯಾಗಿ ಬಿಂಬಿಸಲು ಮಾದಾರ ಚೆನ್ನಯ್ಯ ಶ್ರೀಗಾಗಿಯೇ ಟಿಕೆಟ್ ಹಂಚಿಕೆ ವಿಳಂಬವಾಗುತ್ತಿದೆಯಾ ಎಂಬ ಶಂಕೆಗಳು ಇದೀಗ ಮೂಡಿವೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಲೋಕಸಭೆ ಚುನಾವಣೆಯ ಕರ್ನಾಟಕದ ಎಲ್ಲ ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಿದ್ದು ಚಿತ್ರದುರ್ಗದ್ದು ಮಾತ್ರ ಬಾಕಿ ಉಳಿದಿರುವುದು ಅಚ್ಚರಿ ಮೂಡಿಸಿದೆ. ರಾಷ್ಟ್ರೀಯ ಪಕ್ಷವೊಂದಕ್ಕೆ ಅದೂ ಮೋದಿ ಅವರ ನೇತೃತ್ವದಲ್ಲಿ ಚಿತ್ರದುರ್ಗ ಕ್ಷೇತ್ರ ಅಭ್ಯರ್ಥಿ ಬರ ಎದುರಿಸಬೇಕಾಗಿ ಬಂತಾ ಎಂಬ ಸಹಜ ಪ್ರಶ್ನೆ ಮೂಡಿದೆ. ಕರ್ನಾಟಕದ ಯೋಗಿಯಾಗಿ ಬಿಂಬಿಸಲು ಮಾದಾರ ಚೆನ್ನಯ್ಯ ಶ್ರೀಗಾಗಿಯೇ ಟಿಕೆಟ್ ಹಂಚಿಕೆ ವಿಳಂಬವಾಗುತ್ತಿದೆಯಾ ಎಂಬ ಶಂಕೆಗಳು ಮೂಡಿವೆ.

ಚಿತ್ರದುರ್ಗ ಲೋಕಸಭೆ ಕ್ಷೇತ್ರ ಪರಿಶಿಷ್ಟರಿಗೆ ಮೀಸಲಾಗಿದೆ. ಮಧ್ಯ ಕರ್ನಾಟಕದಲ್ಲಿ ಮಾದಿಗ ಸಮುದಾಯ ವಿಸ್ತೃತವಾಗಿ ಹರಡಿರುವುದರಿಂದ ಆ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಬಿಗಿ ಪಟ್ಟು ಬಿಜೆಪಿಯಲ್ಲಿದೆ. ಕಾಂಗ್ರೆಸ್ ಕೂಡಾ ಇದಕ್ಕೆ ಹೊರತಾಗಿಲ್ಲ. ಮಾದಿಗ ಸಮುದಾಯಕ್ಕೆ ಸೇರಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪಗೆ ಕಾಂಗ್ರೆಸ್ ಈಗಾಗಲೇ ಟಿಕೆಟ್ ನೀಡಿದೆ. ಹಾಗಾಗಿ ಬಿಜೆಪಿ ಯಾರಿಗೆ ನೀಡುತ್ತದೆ ಎಂಬ ಕುತೂಹಲ ರಾಜಕೀಯದಲ್ಲಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಾವು ಈ ಬಾರಿ ಸ್ಪರ್ಧೆ ಮಾಡುವುದಿಲ್ಲವೆಂಬ ಸ್ಪಷ್ಟ ಸಂದೇಶವನ್ನ ಈಗಾಗಲೇ ರವಾನಿಸಿದ್ದಾರೆ. ಹಾಗಾಗಿ ಎಡಗೈಗೆ ಸೇರಿರುವ ಮಾಜಿ ಸಚಿವ ಗೋವಿಂದ ಕಾರಜೋಳ ಅವರ ಹೆಸರು ಮುಂಚೂಣಿಗೆ ಬಂದಿದೆ. ನಾನು ನಿಲ್ಲೋಲ್ಲ, ನಾರಾಯಣಸ್ವಾಮಿಗೆ ನೀವೇ ನಿಲ್ಲಿ ಅಂತ ಕಾರಜೋಳ ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಮತದಾನಕ್ಕೆ ಕೇವಲ ಒಂದು ತಿಂಗಳ ಮಾತ್ರ ಅವಕಾಶವಿದ್ದು ದೂರದ ಬಾಗಲಕೋಟೆ ಜಿಲ್ಲೆಯ ಕಾರಜೋಳ ಚಿತ್ರದುರ್ಗಕ್ಕೆ ಆಗಮಿಸಿ ಗೆಲುವಿನ ಫಲಿತಾಂಶ ನಿರೀಕ್ಷೆ ಕಷ್ಟವಾಗುತ್ತದೆ.

ಉಳಿದಂತೆ ಬಿಜೆಪಿಯಲ್ಲಿ ಭೋವಿ ಸಮುದಾಯಕ್ಕೆ ಸೇರಿದ ರಘು ಚಂದನ್ ಸ್ಫರ್ದೆ ಮಾಡಲು ತುದಿಗಾಲಲ್ಲಿ ಇದ್ದಾರೆ. ಬಿಜೆಪಿಯಿಂದ ಮಾದಿಗರಿಗೆ ಟಿಕೆಟ್ ನೀಡದರೆ ಶಿವಮೊಗ್ಗ, ತುಮಕೂರು, ಬಳ್ಳಾರಿ, ದಾವಣಗೆರೆ, ಹಾವೇರಿ, ಕೊಪ್ಪಳದಲ್ಲಿ ಸಹಾಯವಾಗುತ್ತದೆ ಎಂಬ ಅಭಿಪ್ರಾಯ ಬಿಜೆಪಿಯಲ್ಲಿದೆ. ಹಾಗಾಗಿ ಮಾದಿಗರೇತರಿಗೆ ಟಿಕೆಟ್ ನೀಡಿದರೆ ಉಳಿದ ಕ್ಷೇತ್ರಗಳಲ್ಲಿ ಹಿನ್ನಡೆ ಸಾಧಿಸಬೇಕಾಗುತ್ತದೆ ಎಂಬ ಮನೋಭಿಪ್ರಾಯಗಳು ಬಿಜೆಪಿಯಲ್ಲಿ ನೆಲೆಯೂರಿವೆ. ಹಾಗಾಗಿ ನಾರಾಯಣಸ್ವಾಮಿ, ಗೋವಿಂದ ಕಾರಜೋಳ ಇಬ್ಬರೂ ಬೇಡವೆಂದಾದರೆ ಕೊನೆಗೆ ಮಾದಾರ ಚೆನ್ನಯ್ಯ ಸ್ನಾಮೀಜಿ ಉಳಿದುಕೊಳ್ಳುತ್ತಾರೆ. ಅವರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ನ ಹಾಗೂ ಮಾದಿಗ ಸಮುದಾಯಕ್ಕೆ ಸೇರಿದ ಚಂದ್ರಪ್ಪ ಅವರನ್ನು ಎದುರಿಸಲು ಸಾಧ್ಯವಾಗುತ್ತದೆ. ಗೋವಿಂದ ಕಾರಜೋಳ ಲೇಟ್ ಎಂಟ್ರಿ ಯಾಗುವುದರಿಂದ ಮಾದಿಗರ ಮತ ಕಬಳಿಸಲು ಕಷ್ಟವಾಗುತ್ತದೆ. ಗೆಲುವಿನ ವ್ಯಾಖ್ಯಾನಕ್ಕೆ ಮಾದಾರ ಶ್ರೀ ಮಾತ್ರ ಎಟುಕುವ ಸಾಧ್ಯತೆಗಳಿದ್ದು ಬಿಜೆಪಿ ಕಡೇ ಗಳಿಗೆ ಲೆಕ್ಚಾಚಾರದಲ್ಲಿ ಮಾದಾರ ಶ್ರೀಗಳ ಇಟ್ಟುಕೊಂಡಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಟಿಕೆಟ್ ಘೋಷಣೆ ವಿಳಂಬವಾಗುತ್ತಿದೆ ಎನ್ನಲಾಗಿದೆ.