ಚಿತ್ರದುರ್ಗ: ವಿಧಾನಸಭಾ ಕ್ಷೇತ್ರಾವಾರು ಅಂತಿಮ ಪಟ್ಟಿ ಪ್ರಕಟ

| Published : Jan 23 2024, 01:52 AM IST

ಸಾರಾಂಶ

ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು ೧,೬೬೧ ಮತಗಟ್ಟೆಗಳಿದ್ದು, ೭,೦೪,೮೯೬ ಪುರುಷ , ೭,೧೩,೨೨೮ ಮಹಿಳಾ ಹಾಗೂ ೮೭ ಇತರೆ ಮತದಾರರು ಇದ್ದಾರೆ ಎಂದು ಸೋಮವಾರ ಪ್ರಕಟವಾದ ಮತದಾರರ ಅಂತಿಮ ಪಟ್ಟಿಯಲ್ಲಿ ತಿಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಮತದಾರರ ಅಂತಿಮ ಪಟ್ಟಿಯನ್ನು ಸೋಮವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಜಿ.ಆರ್.ಜಿ.ದಿವ್ಯಾಪ್ರಭು ಪ್ರಕಟಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಧಾನಸಭಾ ಕ್ಷೇತ್ರವಾರು ಮತದಾರರ ಅಂತಿಮ ಪಟ್ಟಿ ಪ್ರಕಟ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮತದಾರರ ಅಂತಿಮ ಪಟ್ಟಿ ಪ್ರಕಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಚುನಾವಣಾ ಆಯೋಗದ ನಿರ್ದೇಶನದಂತೆ ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿಗಳ ಅಂತಿಮ ಪ್ರಕಟಣೆಯನ್ನು ಸೋಮವಾರ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

೨೦೨೩ರ ಅಕ್ಟೋಬರ್ ೨೭ ರಂದು ವಿಧಾನಸಭಾ ಕ್ಷೇತ್ರವಾರು ಕರಡು ಮತದಾರರ ಪಟ್ಟಿ ಪ್ರಚುರಪಡಿಸಲಾಗಿತ್ತು. ನವೆಂಬರ್ ಹಾಗೂ ಡಿಸೆಂಬರ್ ಮಾಹೆಯಲ್ಲಿ ವಿಶೇಷ ಪರಿಷ್ಕರಣೆ ಕಾರ್ಯ ನಡೆದಿದ್ದು, ಇದೀಗ ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ. ಮತದಾರರ ಅಂತಿಮ ಪಟ್ಟಿ ಪ್ರಕಟವಾದ ನಂತರವೂ ಸಹ ನಿರಂತರವಾಗಿ ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆ ಹಾಗೂ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

೧೪,೧೮,೨೧೧ ಮತದಾರರು: ಜಿಲ್ಲೆಯಲ್ಲಿ ಒಟ್ಟು ೧,೬೬೧ ಮತಗಟ್ಟೆಗಳಿವೆ. ಅಂತಿಮ ಪಟ್ಟಿಯಂತೆ ೭,೦೪,೮೯೬ ಪುರುಷ ಮತದಾರರು, ೭,೧೩,೨೨೮ ಮಹಿಳಾ ಮತದಾರರು ಹಾಗೂ ೮೭ ಇತರೆ ಮತದಾರರು ಇದ್ದಾರೆ ಎಂದು ಪ್ರಕಟಿಸಿದರು. ಹೊಸದಾಗಿ ಮತದಾರರ ಪಟ್ಟಿಗೆ ಸೇರಿದವರ ಸಂಖ್ಯೆ ೨೬,೦೨೯. ಮರಣ ಹೊಂದಿದ ಕಾರಣಕ್ಕೆ ಪಟ್ಟಿಯಿಂದ ಕೈಬಿಟ್ಟವರ ಸಂಖ್ಯೆ ೯,೬೪೮ ಆಗಿದೆ.೩೫೬೮೩ ಯುವ ಮತದಾರರು: ಮತದಾರರ ಅಂತಿಮ ಪಟ್ಟಿಯಲ್ಲಿ ೧೮-೧೯ ವರ್ಷ ವಯೋಮಿತಿಯ ಯುವ ಮತದಾರರು ಜಿಲ್ಲೆಯಲ್ಲಿ ೩೫,೬೮೩ ಮಂದಿ ಇದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ ೨೩೬೫೯ ಮತದಾರರು ಇದ್ದರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ರಾಜಕೀಯ ಪಕ್ಷದವರು ಪ್ರತಿಯೊಂದು ಮತಗಟ್ಟೆಗೆ ಏಜೆಂಟರನ್ನು ನೇಮಕ ಮಾಡಬೇಕು. ಏಜೆಂಟರು ತಮ್ಮ ವ್ಯಾಪ್ತಿಯ ಮತದಾರರ ಪಟ್ಟಿಗೆ ಅರ್ಹರನ್ನು ಸೇರಿಸುವ,ಬಿಡತಕ್ಕ, ತಿದ್ದುಪಡಿ ಮಾಡಿಲು ಬಿಎಲ್‌ಓಗಳಿಗೆ ಸಹಕಾರ ನೀಡಬೇಕು ಎಂದು ಕೋರಿದರು. ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರನ್ನು ನೊಂದಾಯಿಸಲು ಪ್ರತಿಯೊಬ್ಬರ ನಾಗರೀಕರ ಹಕ್ಕಾಗಿರುತ್ತದೆ. ಈ ಸದಾಶಕಾಶವನ್ನು ಪ್ರತಿಯೊಬ್ಬರು ತಪ್ಪದೇ ಉಪಯೋಗಿಸಿಕೊಳ್ಳಬೇಕು. ಮತದಾರರ ಪಟ್ಟಿಯ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಜಿಲ್ಲಾ ಸಂಪರ್ಕ ಕೇಂದ್ರದ ಸಹಾಯವಾಣಿ ಸಂಖ್ಯೆ ೦೮೧೯೪-೨೨೨೧೭೬ ಅಥವಾ ಟೋಲ್ ಫ್ರೀ ಸಂಖ್ಯೆ ೧೯೫೦ ಗೆ ಕರೆ ಮಾಡಬಹುದು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಅರ್ಹ ಮತದಾರರು ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಲ್ಲದವರು ಹಾಗೂ ಹೆಸರು ಕೈಬಿಟ್ಟುಹೋಗಿರುವವರು ಹಾಗೂ ಮತದಾರರ ಪಟ್ಟಿಯಲ್ಲಿ ಮಾಹಿತಿಯನ್ನು ತಿದ್ದುಪಡಿ ಮಾಡಿಸಬೇಕಾದಲ್ಲಿ ಮತ್ತು ಅದೇ ವಿಧಾನಸಭಾ ಕ್ಷೇತ್ರದ ಬೇರೆ ಬೇರೆ ಮತಗಟ್ಟೆಗೆ ವರ್ಗಾಯಿಸಬೇಕಾಗಿದ್ದಲ್ಲಿ ನಿಗಧಿಪಡಿಸಿರುವ ನಮೂನೆಗಳಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ತಮ್ಮ ವ್ಯಾಪ್ತಿಯ ಮತದಾನ ಕೇಂದ್ರದಲ್ಲಿ, ತಾಲ್ಲೂಕು ಕಚೇರಿಯಲ್ಲಿ, ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ನೀಡಿ ಸ್ವೀಕೃತಿ ಪಡೆಯಬಹುದಾಗಿದೆ ಎಂದರು.

ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಯನ್ನು ಮತದಾರರು ನೀಡಿರುವ ವಿಳಾಸಕ್ಕೆ ಅಂಚೆ ಮೂಲಕ ಇನ್ನೊಂದು ವಾರದೊಳಗೆ ಕಳುಹಿಸಲಾಗುವುದು ಎಂದರು. ಸಭೆಯಲ್ಲಿ ಪ್ರಭಾರ ಉಪವಿಭಾಗಾಧಿಕಾರಿ ವಿವೇಕ್, ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಕಾರ್ಯದರ್ಶಿ ಸಿ.ಜೆ.ನಾಸಿರುದ್ದೀನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಹೊನ್ನಾಳ್, ಸಿಪಿಐಎಂ ಡಿಒಸಿ ಸಿ.ಕೆ.ಗೌಸ್‌ಪೀರ್ ಸೇರಿದಂತೆ ಚುನಾವಣಾ ತಹಶೀಲ್ದಾರ್ ಎಂ.ಸಂತೋಷ್ ಕುಮಾರ್ ಹಾಗೂ ಚುನಾವಣೆ ಶಾಖೆಯ ಸಿಬ್ಬಂದಿ ವರ್ಗದವರು ಇದ್ದರು. ಕ್ಷೇತ್ರವಾರು ಮತದಾರರ ಸಂಖ್ಯೆ: ಮೊಳಕಾಲ್ಮೂರು ೧೨೫೦೫೮ ಪುರುಷರು, ೧೨೪೧೮೧ ಮಹಿಳೆಯರು, ೧೩ ಇತರರು, ಚಳ್ಳಕೆರೆ ೧೧೦೪೪೮ ಪುರುಷರು,೧೩೪೩೯೮ ಮಹಿಳೆಯರು, ೪೧ ಇತರರು, ಚಿತ್ರದುರ್ಗ ೧೨೯೮೦೯ ಪುರುಷರು, ೧೩೪೩೯೮ ಮಹಿಳೆಯರು,೪೧ ಇತರರು, ಹಿರಿಯೂರು ೧೨೧೫೦೨ ಪುರುಷರು, ೧೨೪೨೧೦ ಮಹಿಳೆಯರು, ೧೬ ಇತರರು, ಹೊಸದುರ್ಗ ೯೯೮೬೦ ಪುರುಷರು, ೯೯೫೯೬ ಮಹಿಳೆಯರು, ೧ ಇತರೆ, ಹೊಳಲ್ಕೆರೆ ೧೧೮೨೧೯ ಪುರುಷರು, ೧೧೮೭೩೭ ಮಹಿಳೆಯರು, ೧೦ ಇತರರು.