ಸಾರಾಂಶ
ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖ ಮತದಾರರ ಅಂತಿಮ ಪಟ್ಟಿ ಪ್ರಕಟಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಜಿಲ್ಲೆಯಲ್ಲಿ ಮಹಿಳಾ ಮತದಾರರು ಪ್ರಾಬಲ್ಯ ಪಡೆದಿದ್ದಾರೆ. ಒಟ್ಟಾರೆ 14,29,555 ಮತದಾರರ ಪೈಕಿ 7,09,048 ಮಂದಿ ಪುರುಷ, 7,20,420 ಮಹಿಳಾ ಮತದಾರರಿದ್ದಾರೆ. 87 ಮಂದಿ ಇತರೆ ಮತದಾರರು ಪಟ್ಟಿಯಲ್ಲಿ ಜಾಗ ಪಡೆದಿದ್ದಾರೆಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮದ ಅನ್ವಯ ವಿಧಾನಸಭಾ ಕ್ಷೇತ್ರವಾರು ಮತದಾರರ ಅಂತಿಮ ಪಟ್ಟಿಯನ್ನು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಪ್ರಚುರಪಡಿಸಿದರು.
ಚುನಾವಣಾ ಆಯೋಗದ ನಿರ್ದೇಶನದ ಅನುಸಾರ ಪ್ರತಿ ವರ್ಷ ಅಕ್ಟೋಬರ್ ತಿಂಗಳು ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಒಟ್ಟು 1,661 ಮತಗಟ್ಟೆಗಳಿದ್ದು, ಕರಡು ಮತದಾರರ ಪಟ್ಟಿ ಪ್ರಕಟಣೆಯನ್ವಯ ಈ ಮೊದಲು ಜಿಲ್ಲೆಯಲ್ಲಿ 14,35,994 ಮತದಾರರಿದ್ದರು. ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಂತರ ಜಿಲ್ಲೆಯಲ್ಲಿ 14,29,555 ಮತದಾರರಿದ್ದಾರೆ ಎಂದು ತಿಳಿಸಿದರು.ಪ್ರಸಕ್ತ ವರ್ಷದಲ್ಲಿ 13,758 ಮತದಾರರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಮರಣ, ಡಬಲ್ ಎಂಟ್ರಿ ಸೇರಿದಂತೆ ಒಟ್ಟು 20,197 ಮತದಾರರನ್ನು ನಿಯಮಾನುಸಾರವಾಗಿ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಒಟ್ಟು 11,727 ಮತದಾರರ ಹೆಸರು, ಭಾವಚಿತ್ರ ಬದಲಾವಣೆ, ತಂದೆ, ಗಂಡನ ಹೆಸರು ಹಾಗೂ ವಿಳಾಸ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.
ಕರಡು ಮತದಾರರ ಪಟ್ಟಿಯಲ್ಲಿ 18 ರಿಂದ 19 ವರ್ಷದ 22,667 ಯುವ ಮತದಾರರಿದ್ದು, ಅಂತಿಮ ಪಟ್ಟಿಯನ್ವಯ ಈ ಸಂಖ್ಯೆ 29,240ಕ್ಕೆ ಏರಿಕೆಯಾಗಿದೆ. 369 ಸೇವಾ ಮತದಾರರಿದ್ದಾರೆ ಎಂದು ತಿಳಿಸಿದರು.ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಲ್ಲದವರು ಹಾಗೂ ಹೆಸರು ಕೈಬಿಟ್ಟು ಹೋಗಿರುವವರು ಹಾಗೂ ಮತದಾರರ ಪಟ್ಟಿಯಲ್ಲಿ ಮಾಹಿತಿ ತಿದ್ದುಪಡಿ ಮಾಡಿಸಬೇಕಾದಲ್ಲಿ ಮತ್ತು ಅದೇ ವಿಧಾನ ಸಭಾ ಕ್ಷೇತ್ರದ ಬೇರೆ ಮತಗಟ್ಟೆಗೆ ವರ್ಗಾಯಿಸಬೇಕಾದಲ್ಲಿ ನಿಗಧಿಪಡಿಸಿರುವ ನಮೂನೆಗಳಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ತಮ್ಮ ವ್ಯಾಪ್ತಿಯ ಮತದಾನ ಕೇಂದ್ರದಲ್ಲಿ, ತಾಲೂಕು ಕಚೇರಿಯಲ್ಲಿ, ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ನೀಡಿ ಸ್ವೀಕೃತಿ ಪಡೆಯಬಹುದಾಗಿದೆ. www.ceokarntaka.nic.in, https://chitradurga.nic.in ವೆಬ್‍ಸೈಟ್‍ನಲ್ಲಿಯೂ ಸಹ ಪರಿಶೀಲಿಸಿಕೊಂಡು ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಜಿಲ್ಲಾ ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಸಿಪಿಐ(ಎಂ)ಡಿಒಸಿ ಸಿ.ಕೆ.ಗೌಸ್‍ಪೀರ್, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕಿರಣ್ ಸೇರಿದಂತೆ ಚುನಾವಣಾ ಶಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.ವಿಧಾನಸಭಾ ಕ್ಷೇತ್ರವಾರು ಮತದಾರರುಮೊಳಕಾಲ್ಮೂರು : ಪುರುಷ-1,25,800, ಮಹಿಳೆ-1,25,575, ಇತರೆ-13, ಒಟ್ಟು 2,51,387
ಚಳ್ಳಕೆರೆ: ಪುರುಷ-1,10,954, ಮಹಿಳೆ-1,13,139, ಇತರೆ-8, ಒಟ್ಟು 2,24,101ಚಿತ್ರದುರ್ಗ: 1,31,022, ಮಹಿಳೆ-1,36,410, ಇತರೆ-39, ಒಟ್ಟು 2,67,471
ಹಿರಿಯೂರು: 1,22,266, ಮಹಿಳೆ-1,25,793, ಇತರೆ-16, ಒಟ್ಟು 2,48,075ಹೊಸದುರ್ಗ: 1,00,596, ಮಹಿಳೆ-1,01,185, ಇತರೆ-01, ಒಟ್ಟು 2,01,782
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ- 1,18,410, ಮಹಿಳೆ-1,18,319, ಇತರೆ-10, ಒಟ್ಟು 2,36,739 ಮತದಾರರಿದ್ದಾರೆ