ಬೆಳಗಾವಿ ಅಧಿವೇಶನದಲ್ಲಿ ಮಾರ್ದನಿಸಿದ ದುರ್ಗದ ಡಿವೈಡರ್‌ಗಳು

| Published : Dec 13 2023, 01:00 AM IST

ಬೆಳಗಾವಿ ಅಧಿವೇಶನದಲ್ಲಿ ಮಾರ್ದನಿಸಿದ ದುರ್ಗದ ಡಿವೈಡರ್‌ಗಳು
Share this Article
  • FB
  • TW
  • Linkdin
  • Email

ಸಾರಾಂಶ

Chitradurga Dividers Issue Discussed In Belgum Assembly Session

ಚಿತ್ರದುರ್ಗ: ಚಿತ್ರದುರ್ಗ ನಗರದ ತುಂಬಾ ನಿರ್ಮಿಸಲಾದ ಅವೈಜ್ಞಾನಿಕ ಡಿವೈಡರ್‌ಗಳು ಕೊನೆಗೂ ಸದನದಲ್ಲಿ ಚರ್ಚೆಯಾಗಿದ್ದು, ಸರ್ಕಾರದ ಗಮನ ಸೆಳೆಯಲಾಗಿದೆ. ಈ ಕುರಿತು ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ವೀರೇಂದ್ರ ಪಪ್ಪಿ ಅವೈಜ್ಞಾನಿಕ ರಸ್ತೆ ವಿಭಜಕಗಳ ತೆರವುಗೊಳಿಸುವಂತೆ ಆಗ್ರಹಿಸಿದರು.

ವಿಧಾನ ಸಭಾ ಕಲಾಪದಲ್ಲಿ ಶಾಸಕ ವೀರೇಂದ್ರ ಪಪ್ಪಿ ಈ ಕುರಿತು ಪ್ರಶ್ನಿಸಿ, ಸರ್ಕಾರದ ಗಮನ ಸೆಳೆದರು. ಐತಿಹಾಸಿಕವಾಗಿರುವ ಚಿತ್ರದುರ್ಗ ನಗರದಲ್ಲಿ ಮೊದಲಿನಿಂದಲೂ ಚಿಕ್ಕ ರಸ್ತೆಗಳು ಇವೆ. ನಗರದ ಮುಖ್ಯ ರಸ್ತೆ ಕೇವಲ 40 ಅಡಿ ಅಗಲವಿದೆ. ಇದರ ಮಧ್ಯ 5 ಅಡಿ ಎತ್ತರ ಹಾಗೂ 4 ಅಡಿ ಅಗಲದ ರಸ್ತೆ ವಿಭಜಕಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು, ಪಾದಚಾರಿಗಳು, ವ್ಯಾಪಾರಿಗಳು ಬವಣೆ ಪಡುವಂತಾಗಿದೆ. ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ ಎಂದರು.

ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಿಂದ ಗಾಂಧಿ ವೃತ್ತ ಸಂಪರ್ಕಿಸುವ ರಸ್ತೆ ಕಳೆದ 30 ವರ್ಷಗಳಿಂದ ಏಕಮುಖ ಸಂಚಾರ ಹೊಂದಿದೆ. ಕಿರಿದಾದ ಏಕಮುಖ ರಸ್ತೆಯಲ್ಲೂ ದೊಡ್ಡ ರಸ್ತೆ ವಿಭಜಕಗಳನ್ನು ನಿರ್ಮಿಸಿರುವುದರಿಂದ ಕೇವಲ 10ರಿಂದ 12 ಅಡಿ ರಸ್ತೆಗಳು ನಿರ್ಮಾಣವಾಗಿ, ಬಸ್ ಸೇರಿದಂತೆ ಇತರೆ ಭಾರಿ ವಾಹನಗಳು ಸಂಚಾರಕ್ಕೆ ತೊಂದರೆಯಾಗಿದೆ. ಇಲ್ಲಿ ಸಂಚರಿಸುವ ಪಾದಚಾರಿಗಳಿಗೆ ಕಷ್ಟವಾಗಿದೆ. ನಗರ ವಾಸಿಗಳು ಹಾಗೂ ನಗರಕ್ಕೆ ಆಗಮಿಸುವ ಜನರು ಸಹ ರಸ್ತೆ ವಿಭಜಕಗಳ ತೆರವಿಗೆ ಆಗ್ರಹಿಸುತ್ತಿದ್ದಾರೆ. ವೈಯಕ್ತಿಕವಾಗಿ ಸ್ವತಃ ರಸ್ತೆ ವಿಭಜಕಗಳ ಪರೀಶಲನೆ ನಡೆಸಿದ್ದೇನೆ. ತುರ್ತಾಗಿ ರಸ್ತೆ ವಿಭಜಕಗಳನ್ನು ತೆರವು ಆಗಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪರವಾಗಿ ಸದನದಲ್ಲಿ ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, ಅವೈಜ್ಞಾನಿಕ ರಸೆ ವಿಭಜಕ ನಿರ್ಮಿಸಿದ ಗುತ್ತಿದಾರ ಬಿಲ್‌ಗಳನ್ನು ಸರ್ಕಾರ ಈಗಾಗಲೇ ತಡೆಹಿಡಿದೆ. ವಿಭಜಕಗಳ ತೆರವಿನ ಕುರಿತು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತರುವುದಾಗಿ ಹೇಳಿದರು.

ಈ ಮಾತಿಗೆ ತೀವ್ರ ಅಸಮಾಧಾನಗೊಂಡ ಶಾಸಕ ವೀರೇಂದ್ರ ಪಪ್ಪಿ ಗುತ್ತಿಗೆದಾರರ ಬಿಲ್ ನಿಲ್ಲಿಸಿದಾಕ್ಷಣ ಸಮಸ್ಯೆ ಪರಿಹಾರವಾಗುವುದಿಲ್ಲ. ಡಿವೈಡರ್ ತೆರವಿನ ಬಗ್ಗೆ ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದೆ ಎಂದರು.

-----------

ಚಿತ್ರದುರ್ಗದ ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ಗಾಂಧಿ ವೃತ್ತಕ್ಕೆ ಹೋಗುವ ಮಾರ್ಗದ ನಡುವಿವನ ಒನ್ ವೇ ರಸ್ತೆಯಲ್ಲಿ ಡಿವೈಡರ್ ನಿರ್ಮಿಸಿದ ಬಗ್ಗೆ ಕನ್ನಡಪ್ರಭ 53 ಕಂತುಗಳ ಸರಣಿ ವರದಿಯಲ್ಲಿ 2022 ಡಿ.19ರಂದು ಎರಡನೇ ಕಂತಿನಲ್ಲಿ ಪ್ರಕಟಿಸಿತ್ತು.

12 ಸಿಟಿಡಿ6