ಸಾರಾಂಶ
ಸರ್ವೋದಯ, ಚೈತನ್ಯ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ರೇಷ್ಮೆ ಸೀರೆ ತಯಾರಿಕೆಗೆ ಅಗತ್ಯದ ನೂಲು, ಡಾಬಿ, ಅಲ್ಬೆ, ಸೀಮೆ ಎಣ್ಣೆ ದೀಪಗಳು, ಲಾಟೀನು, ತಾಮ್ರ, ಹಿತ್ತಾಳೆಯ ಅಡುಗೆ ವಸ್ತುಗಳು ಸೇರಿ ಹಳೇ ಕಾಲದ ಗ್ರಾಮೀಣ ಭಾಗದ ವಸ್ತುಗಳು ವಿಶೇಷವಾದ ಗಮನ ಸೆಳೆದವು.
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಪಟ್ಟಣದ ಸರ್ವೋದಯ ಹಾಗೂ ಚೈತನ್ಯ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆದ ಹಳ್ಳಿ ಸೊಗಡು ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.ಶಾಲಾ ಆವರಣವನ್ನು ಹಳ್ಳಿಯ ವಾತವರಣಕ್ಕೆ ಬದಲಾಯಿಸಿ, ಹಳೇ ಕಾಲದ ವಸ್ತುಗಳನ್ನು ಇರಿಸಿ ಗ್ರಾಮೀಣ ಜನರ ಬದುಕನ್ನು ಪ್ರತಿಬಿಂಬಿಸುವಂತೆ ನಾನಾ ಪರಿಕರಗಳ ಸಾಮಾಗ್ರಿಗಳ ಪ್ರದರ್ಶಿಸಲಾಯಿತು. ಶಾಲಾ ಮಕ್ಕಳು ಗ್ರಾಮೀಣ ಜನರಂತೆ ಉಡುಗೆ ತೊಟ್ಟು ಪ್ರಸ್ತುತ ಆಧುನಿಕತೆಯ ಬಟ್ಟೆಗಳ ಮೆರಗಿಗೆ ಸೆಡ್ಡು ಹೊಡೆದಂತೆ ನಲಿದಾಡಿದರು. ಪೋಷಕರು ಪ್ರದರ್ಶನದಲ್ಲಿ ಇಡಲಾಗಿದ್ದ ನಾನಾ ವಸ್ತು ಕೌತುಕದಿಂದ ವೀಕ್ಷಣೆ ಮಾಡಿದರು.
ಆಧುನಿಕತೆ ನೆಪದಲ್ಲಿ ಮೆರೆಯಾಗಿದ್ದ ಬೀಸುವ ಕಲ್ಲು, ಕುಂಬಾರಿಕೆ ಮಡಿಕೆ ತಯಾರಿಕೆ, ನೀರು ಸೇದುವ ಬಾವಿ, ಎತ್ತಿನ ಗಾಡಿ, ಕೌದಿ ಹೊಲಿಯುವುದು, ಪಂಚಾಯ್ತಿ ಕಟ್ಟೆ, ಕೊರವಂಜಿ, ಕಾಲಜ್ಞಾನ, ಬುಡುಬುಡುಕೆ, ಗುಂಡು ಎತ್ತುವ ಸ್ಪರ್ಧೆ, ಕುಸ್ತಿ, ಕೆಸರು ತುಳಿಯುವುದು, ಗುರುಕುಲ, ಗುಡಿಸಲು, ರೊಟ್ಟಿ ಬಡಿಯುವುದು, ತರಕಾರಿ ಮಾರಾಟ ಮಾಡುವುದು, ಶರಬತ್ತು, ಮಜ್ಜಿಗೆ ಕಡಿಯುವುದು ಗಮನ ಸೆಳೆದವು.ಇದರೊಟ್ಟಿಗೆ ರೇಷ್ಮೆ ಸೀರೆ ತಯಾರಿಕೆಗೆ ಅಗತ್ಯದ ನೂಲು, ಡಾಬಿ, ಅಲ್ಬೆ, ಸೀಮೆ ಎಣ್ಣೆ ದೀಪಗಳು, ಲಾಟೀನು, ತಾಮ್ರ, ಹಿತ್ತಾಳೆಯ ಅಡುಗೆ ವಸ್ತುಗಳು ಸೇರಿ ಹಳೇ ಕಾಲದ ಗ್ರಾಮೀಣ ಭಾಗದ ವಸ್ತುಗಳು ವಿಶೇಷವಾದ ಗಮನ ಸೆಳೆದವು. ಇದಲ್ಲದೆ ಗ್ರಾಮೀಣ ಕ್ರೀಡಾ ಕೂಟ ಆಟಗಳು, ಹುಂಡುಕಲ್ಲು, ಉಪ್ಪಿನ ಕಾಯಿ, ಜಾರುಗಳು ಇರಿಸಿ ಈಗಿನ ಯುವ ಪೀಳಿಗೆಗೆ ತೋರಿಸಲಾಯಿತು.
ಕಾರ್ಯಕ್ರಮಕ್ಕೆ ಬಿಇಒ ನಿರ್ಮಲಾ ದೇವಿ ಚಾಲನೆ ನೀಡಿದರು. ವಿದ್ಯಾಸಂಸ್ಥೆಯ ಕಾರ್ಯದರ್ಶಿ ವನಿತಾ, ಉಪನ್ಯಾಸಕ ಗಿರೀಶ, ಮುಖ್ಯ ಶಿಕ್ಷಕ ಉಮೇಶ, ಶಿಕ್ಷಕರಾದ ಅನಿತಾ, ಪಾರ್ಜಾನ್, ಗೀತಾ, ಭಾಗ್ಯಲಕ್ಷ್ಮಿ, ಮಂಜುಳ, ಜೂಹಿಜಾನ್, ವನಜಾ, ಉಮಾ, ನಸರತ್, ಶಶಿಕುಮಾರ್, ತಿಪ್ಪೇಸ್ವಾಮಿ, ಮದು, ಸಾದಿಯಾ ಇದ್ದರು.