ಮುಧೋಳದಲ್ಲಿ ಸೋತಿದ್ದ ಕಾರಜೋಳರ ಕೈ ಹಿಡಿದ ಚಿತ್ರದುರ್ಗ

| Published : Jun 06 2024, 12:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಲೋಕಾಪುರ ಮುಧೋಳ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಸರ್ಕಾರದಲ್ಲಿ ಉನ್ನತ ಹುದ್ದೆ ಅಲಂಕರಿಸಿ ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ದೂರದ ಚಿತ್ರದುರ್ಗದಲ್ಲಿ ಅದೃಷ್ಟ ಖುಲಾಯಿಸಿದೆ. ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಅವರಿಗೆ ಗೆಲುವು ಸಿಕ್ಕಿರುವುದು ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದೆ.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ಮುಧೋಳ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಸರ್ಕಾರದಲ್ಲಿ ಉನ್ನತ ಹುದ್ದೆ ಅಲಂಕರಿಸಿ ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ದೂರದ ಚಿತ್ರದುರ್ಗದಲ್ಲಿ ಅದೃಷ್ಟ ಖುಲಾಯಿಸಿದೆ. ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಅವರಿಗೆ ಗೆಲುವು ಸಿಕ್ಕಿರುವುದು ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದೆ. ಬಿಜೆಪಿಯಲ್ಲಿ ದಲಿತ ಸಮುದಾಯದ ಪ್ರಬಲ ಮುಖಂಡರಾಗಿ ಗುರುತಿಸಿಕೊಂಡಿರುವ ಕಾರಜೋಳ ಅವರು ಕಳೆದ ಚುನಾವಣೆಯಲ್ಲಿ ಸೋಲಿನ ಬಳಿಕ ದೂರದ ಚಿತ್ರದುರ್ಗದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಆದರೆ, ಗೆಲುವಿನ ಪೂರ್ಣವಿಶ್ವಾಸ ಅವರಿಗೂ ಇರಲಿಲ್ಲ. ಚಿಂತಿಯಾಕ ಮಾಡುತ್ತಿದ್ದಿ ಚಿಣ್ಮಯನಿದ್ದಾನೆ ಎನ್ನುತ್ತಲೇ ಏನಾಗುತ್ತೋ ನೋಡೋಣ ಎನ್ನುತ್ತಿದ್ದ ಅವರು, ಸಮುದಾಯದ ಬಲ ಹಾಗೂ ಮೋದಿ ನಾಮಬಲದಿಂದ ಗೆಲುವು ಸಾಧಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಮೂಲತಃ ಸ್ಟೋರ್ ಕೀಪರ್ ಆಗಿ ಸರ್ಕಾರಿ ಹುದ್ದೆಯಲ್ಲಿದ್ದ ಅವರು ಹತ್ತಿರದ ಸಂಬಂಧಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರ ಪ್ರಭಾವದಿಂದ ರಾಜಕೀಯ ಪ್ರವೇಶಿಸಿದ್ದರು. ರಾಮಕೃಷ್ಣ ಹೆಗಡೆ ಅವರ ಪಕ್ಕಾ ಅನುಯಾಯಿ ಆಗಿರುವ ಕಾರಜೋಳ ಅವರು ವಿಜಯಪುರ ಜಿಲ್ಲೆಯ ಕಾರಜೋಳದವರಾದರೂ ಅವರನ್ನು ಕೈ ಹಿಡಿದಿದ್ದು ಮುಧೋಳ ಮೀಸಲು ಕ್ಷೇತ್ರದ ಜನ. ೧೯೯೪ ರಲ್ಲಿ ಜನತಾ ದಳದಿಂದ ಮುಧೋಳ ಶಾಸಕರಾಗಿ ಆಯ್ಕೆಯಾದ ಅವರು ೧೯೯೯ ರಲ್ಲಿ ಪರಾಭವಗೊಂಡಿದ್ದರು. ಮುಂದೆ ಬಿಜೆಪಿ ಸೇರಿ ೨೦೦೪, ೨೦೦೯, ೨೦೧೩ ಹಾಗೂ ೨೦೧೮ ರಲ್ಲಿ ನಿರಂತರ ಗೆಲುವು ತಮ್ಮದಾಗಿಸಿಕೊಂಡಿದ್ದರು. ಆದರೆ, ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಲೆಯಿಂದಾಗಿ ಸಾಂಪ್ರದಾಯಕ ಎದುರಾಳಿ, ಹಾಲಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಪರಾಭವಗೊಂಡಿದ್ದರು. ರಾಜ್ಯದಲ್ಲಿ ಒಂದು ಬಾರಿಗೆ ಉಪಮುಖ್ಯಮಂತ್ರಿ, ಜಲಸಂಪನ್ಮೂಲಕ ಖಾತೆ, ಸಮಾಜ ಕಲ್ಯಾಣ, ಕನ್ನಡ ಮತ್ತು ಸಾಂಸ್ಕೃತಿಕ ಸಚಿವರಾಗಿ ಕೆಲಸ ಮಾಡಿರುವ ಅವರು ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾಗಿಯೂ ಕೆಲಸ ಮಾಡಿದ್ದಾರೆ. ತಾವು ಪ್ರತಿನಿಧಿಸುವ ಮಾದಿಗ ಸಮುದಾಯದ ಮತಗಳೇ ಹೆಚ್ಚಾಗಿರುವ ಚಿತ್ರದುರ್ಗ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದ ಅವರಿಗೆ ಮತದಾರ ಪ್ರಭಗಳು ಅಸ್ತು ಎಂದಿದ್ದಾರೆ. ನ್ಯಾ. ಸದಾಶಿವ ಆಯೋಗದ ಒಳಮೀಸಲಾತಿ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾರಜೋಳ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಆಪ್ತ ಒಡನಾಟ ಹೊಂದಿದ್ದಾರೆ. ೭೪ ವರ್ಷದ ಅವರಿಗೆ ಟಿಕೆಟ್‌ ಅದೃಷ್ಟ ಒಲಿದು ಬಂದಿರುವುದು ಅವರ ವಿರೋಧಿಗಳ ಹುಬ್ಬೇರುವಂತೆ ಮಾಡಿತ್ತು. ಗೆಲುವಿನ ಖುಷಿಯನ್ನು ಕನ್ನಡಪ್ರಭ ಪತ್ರಿಕೆಯೊಂದಿಗೆ ಹಂಚಿಕೊಂಡಿರುವ ಅವರು, ತಮ್ಮನ್ನು ಗೆಲ್ಲಿಸಿದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರು, ಕಾರ್ಯಕರ್ತರು, ತಮ್ಮನ್ನು ಈ ಮಟ್ಟಿಗೆ ಬೆಳೆಸಿದ ಬಾಗಲಕೋಟೆ, ವಿಜಯಪುರದ ಜನಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.