ಸಾರಾಂಶ
ಸಾಣೇಹಳ್ಳಿಯಲ್ಲಿ ನಡೆದ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹೊಸದುರ್ಗಖಾವಿ ಹಾಕಿದವರು, ಊರಲ್ಲಿ ಬಿನ್ನ ತೀರಿಸುವವರು ಜಂಗಮರಲ್ಲ ಅರಿವು ಆಚಾರ ಹೊಂದಿದವರು ಜಂಗಮರು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸಾಣೇಹಳ್ಳಿಯ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಲಾಗಿದ್ದ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಬಾಲ್ಯದಿಂದ ಕೊನೆಯ ಕ್ಷಣದವರೆಗೂ ಬಸವಣ್ಣನವರ ಬದುಕಿನ ಸಿಂಹಾವಲೋಕನವನ್ನು ಮಾಡಿದರೆ ಅವರ ಸಾಧನೆಯೇ ಅವರನ್ನು ವಿಶ್ವಗುರುವನ್ನಾಗಿ ಮಾಡಿದೆ. ಬ್ರಾಹ್ಮಣ ಸಮಾಜದಲ್ಲಿರುವ ಜಾತಿಯ ಮನೋಭಾವನೇ, ಲಿಂಗ ತಾರತಮ್ಯ, ಅಸಮಾನತೆಯನ್ನು ಕಂಡು ಕಳವಳಗೊಂಡ ಬಸವಣ್ಣ ನನಗೆ ಹಾಕುವಂಥ ಜನಿವಾರ ನನ್ನನ್ನು ಹೆತ್ತಂಥ ತಾಯಿಗೆ ಯಾಕಿಲ್ಲ? ನನ್ನ ಜೊತೆಯಲ್ಲೇ ಹುಟ್ಟಿದ ನನ್ನ ಸಹೋದರಿಗೆ ಏಕೆ ಹಾಕಿಲ್ಲ? ಅವರಿಗಿಲ್ಲದ ಜನಿವಾರ ನನಗೇಕೆ? ವೈದಿಕ ಪರಂಪರೆಗೆ ಬಹಿಷ್ಕಾರ ಹಾಕಿ ಅಂಗೈಯಲ್ಲಿ ಇಷ್ಟಲಿಂಗವನ್ನು ಕರುಣಿಸಿದರು ಎಂದರು.
ಲಿಂಗಾಯತ ಹುಟ್ಟಿನಿಂದ ಆಗುವಂಥದ್ದಲ್ಲ. ಸಂಸ್ಕಾರದಿಂದ ಮಾತ್ರ. ಯಾರು ಬೇಕಾದರೂ ಲಿಂಗಾಯತರಾಗಬಹುದು. ಹುಟ್ಟಿನಿಂದ ಯಾವುದೇ ಜಾತಿ, ಜನಾಂಗವಾಗಿರಬಹುದು ಲಿಂಗ ಸಂಸ್ಕಾರವನ್ನು ಪಡೆದುಕೊಂಡಾಗ ನಿಜವಾದ ಲಿಂಗಾಯತರಾಗುವರು. ಲಿಂಗವನ್ನು ಮುಟ್ಟಿದಾಗ ಪೂರ್ವಜಾತ ಅಳಿದು ಪುನರ್ಜಾತರಾಗುವರು ಎಂದು ತಿಳಿಸಿದರು.ಎಚ್.ಎಸ್.ನಾಗರಾಜ ವಚನ ಗೀತೆಗಳನ್ನು ಹಾಡಿದರು. ಸಿರಿಮಠ ಹಾಗೂ ರಮೇಶ್ ಪೂಜೆಯ ವ್ಯವಸ್ಥೆಯನ್ನು ಮಾಡಿದರು. ಮುಖ್ಯೋಪಾಧ್ಯಾಯ ಶಿವಕುಮಾರ ಬಿ.ಎಸ್
ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 22 ಜನ ಇಷ್ಟ ಲಿಂಗದೀಕ್ಷಾ ಸಂಸ್ಕಾರ ಪಡೆದುಕೊಂಡರು.