ಸಾರಾಂಶ
ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಕಾಲಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಲ್ಲಿ ಎಂಟು ಮಂದಿಗೆ ಕಾಲರಾ ದೃಢಪಟ್ಟಿದ್ದು, ಪ್ರಸಕ್ತ ವರ್ಷದಲ್ಲಿ ಬೆಂಗಳೂರು ನಗರದಲ್ಲೇ 13 ಮಂದಿಗೆ ಕಾಲಾರ ವರದಿಯಾಗಿದೆ.
ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ವರದಿಯಾದ ಎಂಟು ಪ್ರಕರಣದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಐದು ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೂರು ಮಂದಿಗೆ ಸೋಂಕು ದೃಢಪಟ್ಟಿದೆ.ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಿಎಂಆರ್‌ಸಿಎಐ ವಿದ್ಯಾರ್ಥಿನಿಲಯದ ಇಬ್ಬರು ವಿದ್ಯಾರ್ಥಿನಿಯರಿಗೆ ಮಾತ್ರವಲ್ಲದೆ ಎಚ್.ಎಸ್.ಆರ್ ಬಡಾವಣೆಯ ಜಗದೀಶ್ ಎಂಬುವವರಿಗೂ ಕಾಲರಾ ದೃಢಪಟ್ಟಿದೆ.
ಹೀಗಾಗಿ ಪ್ರಕರಣಗಳ ಸಂಖ್ಯೆ 10 ರಿಂದ 13ಕ್ಕೆ ಏರಿಕೆಯಾಗಿದೆ. ಇನ್ನು ಜನವರಿಯಲ್ಲಿ ರಾಮನಗರದಲ್ಲಿ ವರದಿಯಾದ ಪ್ರಕರಣ ಸೇರಿ ಪ್ರಸಕ್ತ ವರ್ಷ ರಾಜ್ಯದಲ್ಲಿ 14 ಪ್ರಕರಣ ವರದಿಯಾದಂತಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ವಿಕ್ಟೋರಿಯಾದಲ್ಲಿ ಮತ್ತೊಂದು ಕಾಲರಾ: ಬಿಎಂಆರ್‌ಸಿಐ ಕಾಲೇಜಿನಲ್ಲಿ ಇಬ್ಬರಿಗೆ ಕಾಲರಾ ದೃಢಪಟ್ಟಿತ್ತು. ಇದಲ್ಲದೆ ಏ.4 ರಂದು ಆಸ್ಪತ್ರೆಗೆ ದಾಖಲಾಗಿದ್ದ ಎಚ್ಎಸ್‌ಆರ್ ಬಡಾವಣೆ ನಿವಾಸಿ ಜಗದೀಶ್ ಎಂಬುವವರಿಗೆ ಏ.6 ರಂದು ಸ್ಟೂಲ್ ಕಲ್ಚರ್‌ನಲ್ಲಿ ಸೋಂಕು ದೃಢಪಟ್ಟಿದೆ. ತನ್ಮೂಲಕ ವಿಕ್ಟೋರಿಯಾದಲ್ಲಿ ಪ್ರಸಕ್ತ ವಾರದಲ್ಲಿ ಕಾಲರಾ ದೃಢಪಟ್ಟ ಪ್ರಕರಣಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಉಳಿದ ಎರಡು ಪ್ರಕರಣ ಎಲ್ಲಿಂದ ವರದಿಯಾಗಿದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.
ವಿಕ್ಟೋರಿಯದಲ್ಲಿನ ಅಸ್ವಸ್ಥರು ಡಿಸ್ಚಾರ್ಜ್: ಅತಿಸಾರ ಮತ್ತು ನಿರ್ಜಲೀಕರಣದಿಂದ ಅಸ್ವಸ್ಥಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಸ್ಟೆಲ್‌ನ ಎಲ್ಲ 47 ವೈದ್ಯ ವಿದ್ಯಾರ್ಥಿಗಳು ಸಹ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇವರಲ್ಲಿ ಕೆಲವರಿಗೆ ಕಾಲರಾ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಹಾಸ್ಟೆಲ್‌ನ ಅಡುಗೆ ಮನೆ ಬಂದ್ ಮಾಡಲಾಗಿತ್ತು. ವಾರ್ಡನ್ ಅನ್ನು ಅಮಾನತು ಮಾಡಿ, ಅಡುಗೆ ತಯಾರಕರನ್ನು ಬದಲಿಸಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಮತ್ತು ನಿರ್ದೇಶಕ ಡಾ. ರಮೇಶ್ ಕೃಷ್ಣ ಆದೇಶ ಹೊರಡಿಸಿದ್ದರು.ಪ್ರಕರಣ ತಡವಾಗಿ ವರದಿಯಾಗಿವೆ: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವರದಿಯಾಗಿರುವ ಮೂರು ಪ್ರಕರಣದ ಬಗ್ಗೆ ಮಾತನಾಡಿರುವ ಬೆಂಗಳೂರು ನಗರ ಮುಖ್ಯ ಆರೋಗ್ಯಾಧಿಕಾರಿ ಡಾ.ರವೀಂದ್ರನಾಥ್ ಎಂ. ಮೇಟಿ, ಈಸ್ಟ್ ಪಾಯಿಂಟ್ ವೈದ್ಯಕೀಯ ಕಾಲೇಜಿನಲ್ಲಿ ಮಾರ್ಚ್ ತಿಂಗಳಾಂತ್ಯದಲ್ಲಿ ಚಿಕಿತ್ಸೆ ಪಡೆದಿದ್ದ ಎರಡು ಪ್ರಕರಣ ಈಗ (ಏಪ್ರಿಲ್) ವರದಿ ನೀಡಿದ್ದಾರೆ. ಈ ಪೈಕಿ ಮೇಡಹಳ್ಳಿ ಹಾಗೂ ವೈಟ್‌ಫೀಲ್ಡ್ ತಲಾ ಒಂದು ಪ್ರಕರಣ ವರದಿಯಾಗಿತ್ತು. ಮತ್ತೊಂದು ಪ್ರಕರಣ ಬೇರೆ ಕಡೆ ಆಗಿತ್ತು. ಮೂರು ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ.
ಒಂದಕ್ಕಿಂತ ಹೆಚ್ಚು ಪ್ರಕರಣ ಒಂದೇ ಕಡೆ ವರದಿಯಾದರೆ ಔಟ್ ಬ್ರೇಕ್ ಎಂದು ಪರಿಗಣಿಸಲಾಗುತ್ತದೆ. ಅಂತಹ ಪ್ರಕರಣಗಳು ವರದಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ಬೆಂಗಳೂರು ನಗರದಲ್ಲಿ ಹೆಚ್ಚಾದ ಆತಂಕ: ಬೇಸಿಗೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದ್ದು, ಕೆಲವೆಡೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇದಲ್ಲದೆ ನೀರಿನ ಕೊರತೆಯಿಂದಾಗಿ ಜನರು ಟ್ಯಾಂಕರ್ ನೀರು ಅವಲಂಬಿಸಿದ್ದಾರೆ. ಹೀಗಾಗಿ ಕೆಲ ದಿನಗಳಿಂದ ವಾಂತಿ-ಭೇದಿ ಪ್ರಕರಣಗಳು ಹೆಚ್ಚಾಗಿದ್ದು, ಇದರೊಂದಿಗೆ ಕಾಲರಾ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗಿದೆ. ಹೀಗಾಗಿ ನಗರದ ಜನರಲ್ಲಿ ಆತಂಕ ಹೆಚ್ಚಾಗಿದೆ.
ಕೊನೆಗೂ ಎಚ್ಚೆತ್ತ ಅಧಿಕಾರಿ ವರ್ಗ: ಪ್ರಕರಣಗಳ ಹಿನ್ನೆಲೆಯಲ್ಲಿ ಕೆಲ ವಿದ್ಯಾರ್ಥಿಗಳು ಹಾಸ್ಟೆಲ್ ತೊರಿದ್ದಾರೆ. ಉಳಿದವರಿಗೆ ವಿಕ್ಟೋರಿಯಾ ಆಸ್ಪತ್ರೆಯ ಅಡುಗೆ ಮನೆಯಿಂದ ಊಟ ಮತ್ತು ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನು ಕೊನೆಗೂ ಎಚ್ಚೆತ್ತ ಅಧಿಕಾರಿ ವರ್ಗ ಎಚ್ಚೆತ್ತಿದ್ದು, ಮುಚ್ಚಲಾಗಿದ್ದ ಹಾಸ್ಟೆಲ್ ಅಡುಗೆ ಮನೆಯ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲಾಗಿದೆ. ಜೊತೆಗೆ ಹೆಚ್ಚುವರಿಯಾಗು ಮೂರು ಆರ್.ಒ ವಾಟರ್ ಪ್ಲಾಟ್‌ಗಳನ್ನು ಅಳವಡಿಸಲಾಗಿದೆ.