ಚೊಂಬು ಬಿಜೆಪಿ-ಮೋದಿಯ ಮಾಡೆಲ್‌: ಸುರ್ಜೇವಾಲ ವ್ಯಂಗ್ಯ

| Published : Apr 20 2024, 01:06 AM IST

ಸಾರಾಂಶ

ಕರ್ನಾಟಕ ರಾಜ್ಯದಲ್ಲಿ ಎರಡು ಮಾಡೆಲ್ ಗಳಿವೆ. ರಾಜ್ಯ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಒಂದು ಮಾಡೆಲ್ ಜಾರಿಯಲ್ಲಿದ್ದರೆ, ಬಿಜೆಪಿಯ ಮೋದಿ ಮಾಡೆಲ್ ಮತ್ತೊಂದಾಗಿದೆ. ಮೋದಿ ಮಾಡೆಲ್ ಎಂದರೆ ಚೊಂಬು ಮಾಡೆಲ್ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವ್ಯಂಗ್ಯವಾಡಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭೇಟಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕರ್ನಾಟಕ ರಾಜ್ಯದಲ್ಲಿ ಎರಡು ಮಾಡೆಲ್ ಗಳಿವೆ. ರಾಜ್ಯ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಒಂದು ಮಾಡೆಲ್ ಜಾರಿಯಲ್ಲಿದ್ದರೆ, ಬಿಜೆಪಿಯ ಮೋದಿ ಮಾಡೆಲ್ ಮತ್ತೊಂದಾಗಿದೆ. ಮೋದಿ ಮಾಡೆಲ್ ಎಂದರೆ ಚೊಂಬು ಮಾಡೆಲ್ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವ್ಯಂಗ್ಯವಾಡಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಜನರ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ 5 ಗ್ಯಾರಂಟಿ ಯೋಜನೆಗಳ ಜಾರಿ ಭರವಸೆ ನೀಡಿತ್ತು. ಅದರಂತೆ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಭರವಸೆಯಂತೆ ಗ್ಯಾರಂಟಿಗಳನ್ನು ಜಾರಿ ಮಾಡುವ ಮೂಲಕ ರಾಜ್ಯದ ಜನರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಿದೆ. ಇದು, ಕಾಂಗ್ರೆಸ್ ಪಕ್ಷದ ಮಾಡೆಲ್ ಆಗಿದ್ದರೇ, ಬಿಜೆಪಿಯ ಮೋದಿ ಮಾಡೆಲ್‌ ಚೊಂಬು ಎನಿಸಿದೆ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಲ್ಲಿ, ಮಹಾಲಕ್ಷ್ಮೀ ಯೋಜನೆಯಡಿ ರಾಜ್ಯದ ಪ್ರತೀ ಬಡ ಮಹಿಳೆ ಖಾತೆಗೆ ಒಂದು ಲಕ್ಷ ರು. ವಾರ್ಷಿಕ ಸಹಾಯಧನ ಸಿಗಲಿದೆ. ನಿರುದ್ಯೋಗಿಗಳಿಗೆ ವಾರ್ಷಿಕ ಒಂದು ಲಕ್ಷ ರು. ದೊರೆಯಲಿದೆ. ರಾಜ್ಯದ ರೈತರ ಸಾಲಮನ್ನಾ ಮಾಡುವ ಜೊತೆಗೆ ಎಂಎಸ್‌ಪಿ ಕಾಯ್ದೆ ಲಾಭ ಸಿಗಲಿದೆ. ಪ್ರತೀ ಕುಟುಂಬಕ್ಕೆ 25 ಲಕ್ಷ ರು. ಆರೋಗ್ಯ ವಿಮೆ ಯೋಜನೆ, ನರೇಗಾ ಯೋಜನೆಯಡಿ ರಾಜ್ಯದ ಕೂಲಿ ಕಾರ್ಮಿಕರ ವೇತನ 530 ರು.ಗೆ ಏರಿಕೆಯಾಗಲಿದೆ. ಈ ಗ್ಯಾರಂಟಿಗಳನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದ ಐದು ಗ್ಯಾರಂಟಿಗಳೊಂದಿಗೆ ಕೇಂದ್ರದ ಐದು ವಿಭಾಗಗಳ ಗ್ಯಾರಂಟಿಗಳ ಲಾಭ ಸಿಗಲಿದೆ ಎಂದರು.

ಕರ್ನಾಟಕ ಸರ್ಕಾರ ಬರಪರಿಹಾರಕ್ಕೆಂದು ಕೇಂದ್ರ ಸರಕಾರದ ಬಳಿ ಹದಿನೇಳು ಸಾವಿರ ಕೋಟಿ ನೆರವು ಕೇಳಿದರೇ, ಮೋದಿ ಚೊಂಬು ಎಂದು ಹೇಳಿದರು. ಭದ್ರಾ ಯೋಜನೆಗಾಗಿ ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಆರು ಸಾವಿರ ಕೋಟಿ ಅನುದಾನ ಮೀಸಲಿಟ್ಟಿರುವುದಾಗಿ ಹೇಳಿದ್ದು, ಈ ಅನುದಾನ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರದ ಬಳಿ ಕೇಳಿದಾಗಲೂ ಪ್ರಧಾನಿ ಮೋದಿ ಚೊಂಬು ಎಂದರು. ಜಿಎಸ್‌ಟಿ ತೆರಿಗೆ ಪಾಲನ್ನು ಕೇಳಿದಾಗಲೂ ಪ್ರಧಾನಿ ಮೋದಿ ಚೊಂಬು ಎಂದಿದ್ದಾರೆ ಎಂದು ಹೇಳಿದರು.

15ನೇ ಹಣಕಾಸು ಕಮೀಷನ್‌ನ ಅನುದಾನ ಕೇಳಿದಾಗಲೂ ಮೋದಿ ಕರ್ನಾಟಕಕ್ಕೆ ಚೊಂಬು ಎಂದಿದ್ದಾರೆ ಎಂದು ಟೀಕಿಸಿದ ಅವರು, ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರು. ಹಾಕುವುದಾಗಿ ಹೇಳಿದ್ದರು. ಆ 15ಲಕ್ಷ ಎಲ್ಲಿ ಎಂದು ಕೇಳಿದಾಗಲೂ ಚೊಂಬು ಎಂದಿದ್ದರು ಎಂದರು.

ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಎಲ್ಲಿ ಎಂದು ಕೇಳಿದಾಗಲೂ ಚೊಂಬು ಎಂದಿದ್ದರು. ರೈತರ ಆದಾಯ ದ್ವಿಗುಣ ಎಲ್ಲಿ ಆಗಿದೆ ಎಂದಾಗಲೂ ಚೊಂಬು ಎನ್ನುವ ಮೂಲಕ ರಾಜ್ಯದ ಜನರಿಗೆ ಬಿಜೆಪಿ ಹಾಗೂ ಮೋದಿ ಚೊಂಬು ನೀಡಿದ್ದಾರೆ. ಚೊಂಬು ಬಿಜೆಪಿ ಹಾಗೂ ಮೋದಿಯ ಮಾಡೆಲ್ ಆಗಿದೆ ಎಂದು ಸುರ್ಜೇ ವಾಲ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಪಕ್ಷ ಎಂಬುದೇ ಇಲ್ಲ, ಇಲ್ಲಿರುವುದು ಯಡಿಯೂರಪ್ಪ ಮತ್ತು ಅವರ ಮಕ್ಕಳ ಪಕ್ಷ. ರಾಜ್ಯದಲ್ಲಿ ಬಿಜೆಪಿ ಯನ್ನು ಕಟ್ಟಿ ಬೆಳೆಸಿದವರು ಮೂಲೆ ಗುಂಪಾಗಿದ್ದಾರೆ. ಬಿಜೆಪಿಯನ್ನು ಸಂಘಟಿಸಿದ್ದ ಈಶ್ವರಪ್ಪ, ಸದಾನಂದಗೌಡ ರಂತಹ ನಾಯಕರನ್ನು ಯಡಿಯೂರಪ್ಪ ಮತ್ತು ಅವರ ಮಕ್ಕಳು ತುಳಿದು ಸೈಡ್‌ ಲೈನ್ ಮಾಡಿದ್ದಾರೆ. ಈಗ ರಾಜ್ಯದಲ್ಲಿ ಬಿಜೆಪಿ ಪಕ್ಷ ಇಲ್ಲ, ಯಡಿಯೂರಪ್ಪ ಮತ್ತು ಅವರ ಮಕ್ಕಳ ಪಕ್ಷ ಮಾತ್ರ ರಾಜ್ಯದಲ್ಲಿದೆ ಎಂದರು.19 ಕೆಸಿಕೆಎಂ 5ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಚಿಕ್ಕಮಗಳೂರಿಗೆ ದಿಢೀರ್‌ ಆಗಮಿಸಿ ಪಕ್ಷದ ಶಾಸಕರ ಹಾಗೂ ಹಿರಿಯ ಮುಖಂಡರ ಸಭೆಯನ್ನು ಶುಕ್ರವಾರ ನಡೆಸಿದರು.